ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಬಡಾವಣೆಗೆ ನೀರು, ನಿವಾಸಿಗಳ ಕಣ್ಣೀರು

ನ್ಯಾಷನಲ್‌ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಉರುಳಿದ ಹಳೆಯ ಅರಳಿ ಮರ, ಆಟೊ ಜಖಂ
Last Updated 30 ಆಗಸ್ಟ್ 2022, 21:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಮಂಗವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಜಾಗರಣೆ ಮಾಡಿದರು. ಬುಧವಾರ ಸಹ ನಗರದ ವಿವಿಧ ಬಡಾವಣೆಗಳು ಮತ್ತು ಹೊರವಲಯದಲ್ಲಿ ಜೋರು ಮಳೆ ಸುರಿದಿದೆ.

4 ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ನೂರಾರು ಮನೆಗಳಲ್ಲಿ ಆಹಾರ ಸಾಮಗ್ರಿಗಳು, ಪೀಠೋಪಕರಣ ನೀರಿನಲ್ಲಿ ತೊಯ್ದು ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ನಿವಾಸಿಗಳು ಅಳಲು ತೋಡಿ ಕೊಂಡರು. ರಾಜೀವ್‌ಗಾಂಧಿ ನಗರ, ಸಾಯಿ ಲೇಔಟ್‌, ಕಾವೇರಿ ಬಡಾವಣೆ, ಕುಮಾರಸ್ವಾಮಿ ಲೇಔಟ್‌ ಸೇರಿ ಕಾಲುವೆ ಅಂಚಿನ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ, ನಿವಾಸಿಗಳು ನೀರನ್ನು ಹೊರಹಾಕುವುದರಲ್ಲಿ ತೊಡಗಿದ್ದರು.

ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅಂದಾಜು ನೂರು ವರ್ಷದ ಮರವೊಂದು ಮಳೆ ಯಿಂದ ಉರುಳಿತು. ಕ್ರೀಡಾಂಗಣದಲ್ಲಿ ಬಿಬಿಎಂಪಿಯವರು ಪ್ರೇಕ್ಷಕರ ಗ್ಯಾಲರಿ ನಿರ್ಮಿಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಭೂಮಿ ಸಡಿಲಗೊಂಡು ಮರ ಉರುಳಿದೆ ಎಂದು ಸ್ಥಳೀಯರು ದೂರಿದರು.

300ಕ್ಕೂ ಹೆಚ್ಚು ಮನೆಗಳಿಗೆ ನೀರು
ನಗರದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದ್ದು, ಮಂಗಳವಾರ ಸುರಿದ ಮಳೆಗೆ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

‘ಹೊರಮಾವು ಸಾಯಿ ಲೇಔಟ್‌ನಲ್ಲಿ 270 ಮನೆಗಳು, ನಾಗಪ್ಪರೆಡ್ಡಿ ಲೇಔಟ್‌ನಲ್ಲಿ 12 ಮನೆಗಳು, ಪೈ ಲೇಔಟ್‌ನಲ್ಲಿ 14 ಮನೆಗಳಿಗೆ ನೀರು ನುಗ್ಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಎಚ್‌ಆರ್‌ಬಿಆರ್ ಲೇಔಟ್‌ನಲ್ಲೂ ರಾಜಕಾಲುವೆ ನೀರು ಬಡಾವಣೆಗೆ ನುಗ್ಗಿದೆ. ಮೂರು ಕಡೆ ಪಂಪ್‌ಗಳನ್ನು ಇರಿಸಿ ನೀರು ಹೊರಹಾಕುವ ಜತೆಗೆ ತಾತ್ಕಾಲಿಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈಲ್ವೆ ಸೇತುವೆಯ ಬಳಿ ರಾಜಕಾಲುವೆ ಹಿಗ್ಗಿಸಬೇಕಿದ್ದು, ಈ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದರು.

ಶ್ರೀಸಾಯಿ ಲೇಔಟ್‌ ಜಲಮಯ
ಕೆ.ಆರ್.ಪುರ:
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕ್ಷೇತ್ರದ ಹೊರಮಾವು ವಾರ್ಡ್‌ನ ಶ್ರೀಸಾಯಿ ಬಡಾವಣೆಯ 250ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು ನಿವಾಸಿಗಳ ಪರದಾಟ ಮುಂದುವರಿದಿದೆ.

ಹೆಬ್ಬಾಳ, ಬಾಣಸವಾಡಿ, ಹೆಣ್ಣೂರು, ನಾಗವಾರ ಭಾಗಗಳಿಂದ ರಾಜಕಾಲುವೆ ಮೂಲಕ ಹರಿದು ಬರುವ ಮಳೆ ನೀರು ಗೆದ್ದಲಹಳ್ಳಿ ಸಮೀಪದ ರೈಲ್ವೆ ವೆಂಟ್ ಮೂಲಕ ಹರಿದುಹೋಗಬೇಕು. ಆದರೆ, ರೈಲ್ವೆ ವೆಂಟ್ ಕಿರಿದಾಗಿರುವ ಕಾರಣ ನೀರು ಹಿಂದಕ್ಕೆ ಸರಿದು ತಗ್ಗು ಪ್ರದೇಶದಲ್ಲಿರುವ ಶ್ರೀಸಾಯಿ ಲೇಔಟ್‌ಗೆ ನುಗ್ಗಿ ಇಡೀ ಲೇಔಟ್ ಸಂಪೂರ್ಣ ಜಲಮಯವಾಗಿದೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭೇಟಿ ಪರಿಶೀಲನೆ ನಡೆಸಿದರು.‘ರೈಲ್ವೆ ವೆಂಟ್ ಅನ್ನು ಹೆಚ್ಚು ಮಾಡಲು ಮುಖ್ಯಮಂತ್ರಿ ₹ 17.5 ಕೋಟಿ ಅನುದಾನ ನೀಡಿದ್ದಾರೆ. ಈ ವಿಚಾರವಾಗಿ ವರ್ಕ್ ಆರ್ಡರ್ ಪಡೆದುಕೊಂಡು ಸ್ಥಳಕ್ಕೆ ಬಂದಿದ್ದೇನೆ. ಮುಂದಿನ ಮಳೆಗಾಲದ ವೇಳೆಗೆ ಸಮಸ್ಯೆ ಬಗೆಹರಿಸುತ್ತೇವೆ‘ ಎಂದು ಸಚಿವರು ಹೇಳಿದರು. ಸಾಯಿ ಲೇಔಟ್‌ಗೆ ನೀರು ಬಾರದಂತೆ ಮಾಡಲು ಯೋಜನೆ ರೂಪಿಸಿಲಾಗಿದ್ದು, ವರ್ಕ್ ಆರ್ಡರ್ ಕೂಡ ಸಿದ್ಧವಾಗಿದೆ. ಮಳೆ ನಿಂತ ಕೂಡಲೇ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಬಸವರಾಜು ಸ್ಥಳೀಯರಿಗೆ ಭರವಸೆ ನೀಡಿದರು. ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.

ಆನೇಕಲ್‌: 30.7 ಮಿ.ಮೀ ಮಳೆ
ಆನೇಕಲ್:
ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ 7ರ ಹೆಬ್ಬಗೋಡಿಯಿಂದ ಚಂದಾಪುರದವರೆಗಿನ ರಸ್ತೆಯು ಕೆರೆಯಂತಾಗಿದೆ. ಸಂಪೂರ್ಣವಾಗಿ ರಸ್ತೆಯು ನೀರಿನಿಂದ ತುಂಬಿದ್ದು, ಜನರು ಪರದಾಡುವಂತಾಯಿತು.

ಆನೇಕಲ್‌ ತಾಲ್ಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 30.7 ಮಿ.ಮೀ. ಮಳೆಯಾಗಿದೆ. ಬುಧವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಸಂಜೆವರೆಗೂ ಧಾರಾಕಾರವಾಗಿ ಸುರಿಯಿತು. ದ್ವಿಚಕ್ರವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಲಾಗದೆ ಎದ್ದು ಬಿದ್ದು ಸಾಗುತ್ತಿದ್ದರು.

ಮೈಸೂರು–ಬೆಂಗಳೂರು: ರೈಲು ರದ್ದು
ಮಂಡ್ಯ:
ಕೆರೆ, ಕಾಲುವೆಗಳು ಉಕ್ಕಿ ಹರಿಯುತ್ತಿರುವ ಕಾರಣ ಬೆಂಗಳೂರು– ಮೈಸೂರು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು ಮಂಗಳವಾರ ಎರಡೂ ನಗರಗಳ ನಡುವೆ 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಮಂಡ್ಯ ತಾಲ್ಲೂಕಿನ ಹನಕೆರೆ ಹಾಗೂ ಮದ್ದೂರು ಬಳಿ ರೈಲು ಹಳಿ ಮೇಲೆ ರಭಸವಾಗಿ ನೀರು ಹರಿಯತ್ತಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಮೂ–ಪ್ಯಾಸೆಂಜರ್‌ ರೈಲುಗಳನ್ನು ಬಂದ್‌ ಮಾಡಲಾಗಿದೆ. ಎಕ್ಸ್‌ಪ್ರೆಸ್‌ ರೈಲುಗಳು ಮಾತ್ರ ನಿಧಾನವಾಗಿ ಚಲಿಸಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT