ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು ಮೇಳಕ್ಕೆ ರಾತ್ರಿ ಯಕ್ಷಗಾನ ನಡೆಸಲು ಅನುಮತಿ ನೀಡಿದ ಹೈಕೋರ್ಟ್‌

Published 10 ಡಿಸೆಂಬರ್ 2023, 5:42 IST
Last Updated 10 ಡಿಸೆಂಬರ್ 2023, 5:42 IST
ಅಕ್ಷರ ಗಾತ್ರ

ಬೆಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಕೋವಿಡ್‌ ಪೂರ್ವದಲ್ಲಿ ಚಾಲ್ತಿಯಲ್ಲಿದ್ದ ರೀತಿಯಲ್ಲಿ ಯಕ್ಷಗಾನ ನಡೆಸಲು ಹೈಕೋರ್ಟ್‌ ಅನುಮತಿ ನೀಡಿದೆ.

ಯಕ್ಷಗಾನವು ರಾತ್ರಿ 12.30ರ ವರೆಗೆ ಮಾತ್ರ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದರು. ನಿಗದಿತ ಶಬ್ದ ಪ್ರಮಾಣ (ಡೆಸಿಬಲ್‌) ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತ ಕೃಷ್ಣಕುಮಾರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕೋವಿಡ್‌ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳಂತೆ ನಿರ್ಬಂಧ ವಿಧಿಸಲಾಗಿದೆ. ಯಕ್ಷಗಾನ ಮೇಳಗಳು ಸಂಜೆಯಿಂದ ಬೆಳಿಗ್ಗಿನವರೆಗೆ ಪ್ರದರ್ಶನಗಳನ್ನು ನೀಡುತ್ತವೆ. ಚೌಕಿ ಪೂಜೆ, ಪ್ರಾರ್ಥನೆ, ಆರತಿಯನ್ನು ಸಲ್ಲಿಸಿದ ನಂತರ ಯಕ್ಷಗಾನ ಆರಂಭವಾಗುವ ಹೊತ್ತಿಗೆ ರಾತ್ರಿ 9 ಆಗಿರುತ್ತದೆ. ರಾತ್ರಿ 12.30ರ ಒಳಗೆ ಯಕ್ಷಗಾನದ ಪೂರ್ಣ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಯಕ್ಷಗಾನ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು ಎಂದು ಇದೇ ಸಮಯದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಿಳಿಸಿದರು. ಯಕ್ಷಗಾನ ಪ್ರದರ್ಶನದ ವೇಳೆ ಶಬ್ದ ಮಾಲಿನ್ಯ ನಿಯಮ–2000 ಸೇರಿದಂತೆ ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅರ್ಜಿ ಪುರಸ್ಕರಿಸಿದರು. ಕೋವಿಡ್‌–19 ಪೂರ್ವದಲ್ಲಿ ಚಾಲ್ತಿಯಲ್ಲಿ ಇದ್ದಂತೆ ಯಕ್ಷಗಾನ ಪ್ರದರ್ಶನ ನೀಡಲು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಬೇಕು. ಅರ್ಜಿದಾರರು ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಕ್ತವಾಗಿರುತ್ತಾರೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT