ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಚ್‌ಬಿ ಅಧಿಕಾರಿ ಹೆಸರಿನಲ್ಲಿ ವಂಚನೆ; ನಿರ್ಮಾಪಕ ಬಂಧನ

Last Updated 1 ಜನವರಿ 2021, 18:27 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯ (ಕೆಎಚ್‌ಬಿ) ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ನಿವೇಶನ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ಶ್ರೀಧರ್ ಅಲಿಯಾಸ್ ಹರಿಪ್ರಸಾದ್ (29) ಎಂಬುವರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರ ನಿವಾಸಿ ಶ್ರೀಧರ್, ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ. ಮಹಾಲಕ್ಷ್ಮಿ ಲೇಔಟ್ ನಿವಾಸಿಯಾದ ಜ್ಯೋತಿಷಿ ಶಂಕರ್ ಜಿ.ಹೆಗ್ಡೆ ಎಂಬುವರು ನೀಡಿರುವ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇದೇ ಆರೋಪಿ, ನಟ ಶರತ್ ಲೋಹಿತಾಶ್ವ ಅವರಿಂದ ₹60 ಲಕ್ಷ ಪಡೆದು ವಂಚಿಸಿದ್ದಾರೆ. ಆ ಬಗ್ಗೆ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಲಿಯುಗದ ಕಂಸ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಆರೋಪಿ ಶ್ರೀಧರ್, ‘ರಾಜನಿಗೂ-ರಾಣಿಗೂ’ ಎಂಬ ಸಿನಿಮಾದ ನಿರ್ಮಾಪಕರೂ ಆಗಿದ್ದರು. ಸಿನಿಮಾ ಬಿಡುಗಡೆ ಬಾಕಿ ಇತ್ತು. ಜ್ಯೋತಿಷಿ ಶಂಕರ್ ಹೆಗ್ಡೆ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ತಾವು ಕೆಎಚ್‌ಬಿ ಹಿರಿಯ ಅಧಿಕಾರಿ ಎಂದಿದ್ದರು. ಕಡಿಮೆ ಮೊತ್ತದಲ್ಲಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅರ್ಜಿಯೊಂದನ್ನು ಭರ್ತಿ ಮಾಡಿಸಿಕೊಂಡು ಹಂತ ಹಂತವಾಗಿ ₹8.23 ಲಕ್ಷ ಪಡೆದಿದ್ದರು. ಇತ್ತೀಚೆಗೆ ಪುನಃ ₹ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ಶಂಕರ್, ಆರೋಪಿಯನ್ನು ಪ್ರಶ್ನಿಸಿದಾಗ ₹ 3.40 ಲಕ್ಷವನ್ನು ಮಾತ್ರ ವಾಪಸ್ ನೀಡಿದ್ದರು. ಉಳಿದ ಹಣ ನೀಡದೇ ಸತಾಯಿಸುತ್ತಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಮೂಲಗಳು ಹೇಳಿವೆ.

'ಹಲವರನ್ನು ವಂಚಿಸಿದ್ದಾರೆ ಎನ್ನಲಾದ ಆರೋಪಿ, ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಸಿನಿಮಾ ನಟರು ಹಾಗೂ ರಾಜಕಾರಣಿಗಳ ಜೊತೆಯೇ ಆರೋಪಿ ಫೋಟೊ ತೆಗೆಸಿಕೊಂಡಿದ್ದರು. ಅದನ್ನೇ ಜನರಿಗೆ ತೋರಿಸಿ ನಂಬಿಸುತ್ತಿದ್ದರು. ಸಾಮಾನ್ಯ ಜನರಲ್ಲದೇ ಸಿನಿಮಾ ನಟರು, ಜ್ಯೋತಿಷಿಗಳು ಹಾಗೂ ಉದ್ಯಮಿಗಳನ್ನೂ ಆರೋಪಿ ವಂಚಿಸಿರುವ ಮಾಹಿತಿ ಇದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT