ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿಯಲ್ಲಿ ವಿಶ್ವದರ್ಜೆ ಸೌಲಭ್ಯ: ಹೈಟೆಕ್ ಶಸ್ತ್ರಚಿಕಿತ್ಸೆ ಕೊಠಡಿ

ಇನ್ಫೊಸಿಸ್ ಒಪಿಡಿ ಘಟಕ ಸೇವೆಗೆ ಸಜ್ಜು-
Last Updated 23 ಡಿಸೆಂಬರ್ 2020, 21:26 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ನೆರವಿನಿಂದ ಕಾರ್ಪೊರೇಟ್ ಆಸ್ಪತ್ರೆ ಸ್ವರೂಪ ಪಡೆದಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಈಗ ವಿಶ್ವದರ್ಜೆಯ ಚಿಕಿತ್ಸೆ ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ.

1973ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 24 ಎಕರೆಯಲ್ಲಿರುವ ಸಂಸ್ಥೆಯು ದಾನಿಗಳ ನೆರವಿನಿಂದ ಹೈಟೆಕ್‌ ಸ್ಪರ್ಶ ಪಡೆದಿದೆ. ಕೆಲ ತಿಂಗಳ ಹಿಂದಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಬ್ಲಾಕ್‌ ಹಾಗೂ ಆಸ್ಪತ್ರೆಯ ಪ್ರವೇಶ ದ್ವಾರದ ವಿನ್ಯಾಸ ಬದಲಾಯಿಸಲಾಗಿದೆ. ಕಟ್ಟಡದ ಒಳಾಂಗಣ ವಿನ್ಯಾಸದಲ್ಲೂ ಮಾರ್ಪಾಡು ಮಾಡಲಾಗಿದೆ. ಆಸ್ಪತ್ರೆಯ ಆವರಣ ಹಾಗೂ ವಿವಿಧ ಕಟ್ಟಡಕ್ಕೆ ತೆರಳುವ ಮಾರ್ಗಗಳಿಗೆ ಬೀದಿ ದೀಪಗಳನ್ನೂ ಅಳವಡಿಸಲಾಗಿದೆ.

ಇನ್ಫೊಸಿಸ್ ಪ್ರತಿಷ್ಠಾನದ ನೇತೃತ್ವದಲ್ಲಿ ₹ 50 ಕೋಟಿ ವೆಚ್ಚದಲ್ಲಿ ಒಪಿಡಿ ಘಟಕದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಹೊಸ ವರ್ಷಕ್ಕೆ ಉದ್ಘಾಟನೆಯಾಗಲಿದೆ. ಬಳಿಕ ಹಳೆಯ ಕಟ್ಟಡದಲ್ಲಿರುವ ಒಪಿಡಿ ಘಟಕವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಸಂಸ್ಥೆ ಯೋಜನೆ ರೂಪಿಸಿದೆ. ಸಂಸ್ಥೆಯಲ್ಲಿ ಎರಡು ಅಣು ಜೀವಶಾಸ್ತ್ರ ಪ್ರಯೋಗಾಲಯ ಕೂಡ ಕಾರ್ಯಾರಂಭ ಮಾಡಿದೆ. ಅದನ್ನು ಕೋವಿಡ್ ಪರೀಕ್ಷೆಗೆ ಬಳಸಲಾಗುತ್ತಿದೆ. ಈ ಪ್ರಯೋಗಾಲಯ ಸ್ಥಾಪನೆಯಿಂದ ಶೀಘ್ರವಾಗಿ ವರದಿಗಳು ಸಿಗುತ್ತಿವೆ. ವಾರದ ಎಲ್ಲ ದಿನ ಈ ಲ್ಯಾಬ್‌ ಕಾರ್ಯನಿರ್ವಹಿಸುತ್ತಿದೆ.

ಅಸ್ಥಿಮಜ್ಜೆ ಘಟಕ ಸ್ಥಾಪನೆ: ಸಂಸ್ಥೆಯ ಆವರಣದಲ್ಲಿ ಈಗಾಗಲೇ ಅಸ್ಥಿಮಜ್ಜೆ ಘಟಕದ‌ ಕಟ್ಟಡ ನಿರ್ಮಾಣವಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ರಾಜ್ಯದ ಮೊದಲ ಸರ್ಕಾರಿ ಅಸ್ಥಿಮಜ್ಜೆ ಘಟಕ ಎಂಬ ಗೌರವಕ್ಕೆ ಕೂಡ ಇದು ಭಾಜನವಾಗಲಿದೆ. ₹ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 13 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಘಟಕವು 17 ಹಾಸಿಗೆಗಳನ್ನು ಒಳಗೊಳ್ಳಲಿದೆ. ವೈದ್ಯರು ಹಾಗೂ ಸಿಬ್ಬಂದಿಗೆ ಸಂಸ್ಥೆಯು ತರಬೇತಿ ನೀಡುತ್ತಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಇಲ್ಲಿ ಅಸ್ಥಿಮಜ್ಜೆ ಕಸಿ ಮಾಡಲಾಗುತ್ತದೆ.

‘ವಿವಿಧ ಮಾದರಿ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ಸಂಸ್ಥೆಯ ನಿರ್ದೇಶದ ಡಾ.ಸಿ. ರಾಮಚಂದ್ರ ತಿಳಿಸಿದರು.

ರೋಗಿಗಳಿಗೆ ‘ಆರೋಗ್ಯ’ವನ
ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲಿ ಆಹ್ಲಾದಕರ ವಾತಾವರಣ ನಿರ್ಮಿಸುವ ಉದ್ದೇಶದಿಂದ14 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಈ ಕಾರ್ಯಕ್ಕೆ ಸಂಸ್ಥೆಯ ಜತೆಗೆ ಬೆಂಗಳೂರು ಮಿಡ್‌ಟೌನ್‌ ರೋಟರಿ ಕ್ಲಬ್‌ ಕೈಜೋಡಿಸಿದೆ. ಮೊದಲ ಹಂತದಲ್ಲಿ 4 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. ಲಕ್ಷ್ಮಣಫಲ, ರಾಮಫಲ, ಸೀತಾಫಲ,ಬಕುಳ, ಪುನಗ, ರುದ್ರಾಕ್ಷಿ ಸೇರಿದಂತೆ ವಿವಿಧ ತಳಿಯ ಗಿಡಗಳು ಹಾಗೂ ಔಷಧ ಸಸ್ಯಗಳನ್ನು ನೆಡಲಾಗುತ್ತಿದೆ.

ರೋಗಿಗಳು ವ್ಯರ್ಥ ಮಾಡಿದ ಆಹಾರ ತ್ಯಾಜ್ಯದಿಂದಲೇ ಬಯೋಗ್ಯಾಸ್ ಉತ್ಪಾದಿಸಿ, ಅಡುಗೆಗೆ ಬಳಸಿಕೊಳ್ಳಲು ಸಂಸ್ಥೆ ಮುಂದಾಗಿದೆ. ಈ ಸಂಬಂಧ ಬಯೋಗ್ಯಾಸ್ ಘಟಕ ನಿರ್ಮಿಸಲಾಗುತ್ತಿದೆ.

ಅತ್ಯಾಧುನಿಕ ಸೌಲಭ್ಯ ಅಳವಡಿಕೆ
* 13 ಶಸ್ತ್ರಚಿಕಿತ್ಸಾ ಘಟಕಗಳು ಮೇಲ್ದರ್ಜೆಗೆ ಏರಿಕೆ
* ತೀವ್ರ ನಿಗಾ ಘಟಕ ಹಾಸಿಗೆಗಳ ಸಂಖ್ಯೆ 90ಕ್ಕೆ ಹೆಚ್ಚಳ
* ಟಿಶ್ಯೂ ಬಯೋ ಬ್ಯಾಂಕ್ ನಿರ್ಮಾಣಕ್ಕೆ ಸಿದ್ಧತೆ
* ಡಿಜಿಟಲ್ ಪೆಟ್ ಸ್ಕ್ಯಾನ್ ಸೌಲಭ್ಯ
* ಹಳೆ ಕಟ್ಟಡಗಳ ನವೀಕರಣ
* ಕಲಿಕೆಗೆ ಸಿಮ್ಯುಲೇಶನ್ ಪ್ರಯೋಗಾಲಯ

**

ಇನ್ಫೊಸಿಸ್‌ ಒಪಿಡಿ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ಘಟಕಗಳು ಅಂತಿಮ ಹಂತದಲ್ಲಿದೆ. ಮುಂದಿನ ಮಾರ್ಚ್‌ ಒಳಗಡೆ ಎಲ್ಲವೂ ಕಾರ್ಯಾರಂಭ ಮಾಡಲಿವೆ.
-ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT