ಸೋಮವಾರ, ಜೂನ್ 21, 2021
27 °C
ನಂದಿನಿ ಹಾಲಿನಲ್ಲಿ ಇನ್ನು ವಿಟಮಿನ್ ‘ಎ’, ‘ಡಿ’ ಜೀವಸತ್ವ ಲಭ್ಯ

ಕೆಎಂಎಫ್‌ನಿಂದ ಸಿರಿಧಾನ್ಯ ಉತ್ಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್‌) ‘ನಂದಿನಿ ಲಡ್ಡು’, ‘ನಂದಿನಿ ಶಕ್ತಿ’ ಸಿರಿಧಾನ್ಯ ಉತ್ಪನ್ನ ಹಾಗೂ ವಿಟಮಿನ್ ‘ಎ’ ಹಾಗೂ ಮತ್ತು ‘ಡಿ’ ಜೀವಸತ್ವವಿರುವ ನಂದಿನಿ ಹಾಲಿನ ಪ್ಯಾಕೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಗರದಲ್ಲಿ ಮಂಗಳವಾರ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ದೇಶದಲ್ಲಿ ಶೇ 60ರಿಂದ ಶೇ 70ರಷ್ಟು ಜನರಿಗೆ ವಿಟಮಿನ್ ‘ಡಿ’ ಜೀವಸತ್ವ ಹಾಗೂ ಮಕ್ಕಳಲ್ಲಿ ವಿಟಮಿನ್ ‘ಎ’ ಜೀವಸತ್ವದ ಕೊರತೆಯಿದೆ. ನಮ್ಮ ಸಂಸ್ಥೆಯಲ್ಲಿ ವೈದ್ಯರ ರಕ್ತಪರೀಕ್ಷೆ ಮಾಡಿದಾಗ ಶೇ 70ರಷ್ಟು ಮಂದಿಗೆ ವಿಟಮಿನ್ ‘ಡಿ’ ಜೀವಸತ್ವ ನಿಗದಿತ ಪ್ರಮಾಣದಷ್ಟು ಇಲ್ಲದಿರುವುದು ಬೆಳಕಿಗೆ ಬಂದಿತು. ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ’ ಎಂದರು. 

‘ಮಕ್ಕಳು ಮನೆಯಿಂದ ಹೊರಗಡೆ ಬರುತ್ತಿಲ್ಲ. ಉದ್ಯೋಗ ಮಾಡುವವರು ಸೂರ್ಯೋದಯಕ್ಕೂ ಮುನ್ನ ಕಚೇರಿಗೆ ತೆರಳಿ, ಸೂರ್ಯಾಸ್ತದ ಬಳಿಕ ಮನೆಗೆ ಬರುತ್ತಾರೆ. ಇದರಿಂದಾಗಿ ವಿಟಮಿನ್ ‘ಡಿ’ ಜೀವಸತ್ವದ ಕೊರತೆ ಸಮಸ್ಯೆ ಅಧಿಕವಾಗಿದೆ’ ಎಂದು ತಿಳಸಿದರು. 

‘ವಿಟಮಿನ್ ‘ಡಿ’ ಜೀವಸತ್ವದ ಕೊರತೆಯಿಂದ ಮೂಳೆ ಬಲಹೀನವಾಗುತ್ತದೆ. ಅಷ್ಟೇ ಅಲ್ಲ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಹ ಕಾಣಿಸಿಕೊಳ್ಳುತ್ತದೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾಗಿ ಪ್ರತಿನಿತ್ಯ ಹಾಲನ್ನು ಕುಡಿಯುವ ಪದ್ಧತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕಾಲೇಜಿನಲ್ಲಿ ನಂದಿನಿ ಪಾರ್ಲರ್ ಅಗತ್ಯ: ‘ಸೂರ್ಯ, ಡಯಟ್, ವ್ಯಾಯಾಮ, ವಿಶ್ರಾಂತಿ, ನಗು ಹಾಗೂ ಹಾಲು ನೈಸರ್ಗಿಕ ವೈದ್ಯರಾಗಿದ್ದಾರೆ. ಹಾಲು ಆರೋಗ್ಯ ವೃದ್ಧಿಗೆ ಸಹಕಾರಿ. ಹಾಗಾಗಿ ಎಲ್ಲಾ ಆಸ್ಪತ್ರೆ ಕಾಗೂ ಕಾಲೇಜುಗಳಲ್ಲಿ ನಂದಿನಿ ಪಾರ್ಲರ್ ಆರಂಭಿಸಬೇಕು’ ಎಂದು ಸಲಹೆ ನೀಡಿದರು. 

‘40 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಅದೇ ರೀತಿ, ರಕ್ತದಲ್ಲಿ ವಿಟಮಿನ್ ‘ಡಿ’ ಜೀವಸತ್ವದ ಪ್ರಮಾಣ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು’ ಎಂದರು.

ಲೀಟರ್ ಹಾಲಿಗೆ 4 ಪೈಸೆ ಹೊರೆ
‘ನಂದಿನಿ ಹಾಲಿಗೆ ಹೆಚ್ಚುವರಿ ಯಾಗಿ ವಿಟಮಿನ್‌ಗಳನ್ನು ಸೇರಿಸುವುದರಿಂದ ಪ್ರತಿ ಲೀಟರ್ ಹಾಲಿನ ಮೇಲೆ 3ರಿಂದ 4 ಪೈಸೆ ಹೊರೆಯಾಗಲಿದೆ. ಹಾಗಂತ ಗ್ರಾಹಕರ ಮೇಲೆ ಇದನ್ನು ಹೇರುವುದಿಲ್ಲ. ಮುಂದಿನ ಆರು ತಿಂಗಳು ಸಿಎಸ್‌ಆರ್ ನಿಧಿಯಡಿ ಭರಿಸಲಾಗುತ್ತದೆ. ನಂತರ ಮಹಾಮಂಡಳಿಯೇ ಪಾವತಿಸುತ್ತದೆ’ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ ಟಿ. ಕುಲಕರ್ಣಿ ತಿಳಿಸಿದರು. 

‘ಸದ್ಯ 45 ಲಕ್ಷ ಲೀ. ಹಾಲಿಗೆ ವಿಟಮಿನ್ ಸೇರಿಸಲು ಕ್ರಮಕೈಗೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಹಾಲಿನ ಪುಡಿಗೂ ಸೇರಿಸುತ್ತೇವೆ‘ ಎಂದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು