ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪುರ: ಒತ್ತುವರಿ ತೆರವಿಗೆ ಅಡ್ಡಿ: ಆತ್ಮಹತ್ಯೆ ಯತ್ನ

ಅಗ್ನಿಶಾಮಕ ದಳದ ನೆರವು; ದಂಪತಿ ಮೇಲೆ ಕ್ರಿಮಿನಲ್‌ ಪ್ರಕರಣ
Last Updated 12 ಅಕ್ಟೋಬರ್ 2022, 18:57 IST
ಅಕ್ಷರ ಗಾತ್ರ

ಕೆ.ಆರ್. ಪುರ: ಗಾಯತ್ರಿ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ‌‌ ಮಾಡಿಕೊಂಡಿರುವ ಮನೆಯನ್ನು ಬುಧವಾರ ಬೆಳಿಗ್ಗೆ ತೆರವು ಮಾಡಲು ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಬೆದರಿಸಿದ ದಂಪತಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಅಗ್ನಿಶಾಮಕ ದಳದ ನೆರವಿನಿಂದ ದಂಪತಿಯನ್ನು ರಕ್ಷಿಸಲಾಯಿತು.

ಗಾಯತ್ರಿ ಬಡಾವಣೆ ನಿವಾಸಿಗಳಾದ ಸೋನಾ ಸೇನ್ ಮತ್ತು ಸುನೀಲ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ ದಂಪತಿ.‌ಪೆಟ್ರೋಲ್‌ ತುಂಬಿದ ಬಾಟಲ್‌, ಲೈಟರ್‌, ಬೆಂಕಿಪೊಟ್ಟಣ ಹಿಡಿದು ಒತ್ತುವರಿಯನ್ನು ಗುರುತಿಸಿದ ಸ್ಥಳದಲ್ಲಿ ದಂಪತಿ ನಿಂತು ಆತ್ಮಹತ್ಯೆಯ ಬೆದರಿಕೆ ಹಾಕಿದರು. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ದಂಪತಿ ಸತತ ಎರಡು ಗಂಟೆ ಮನೆ ಹಿಂಬದಿಯ ರಾಜಕಾಲುವೆ ಬದಿಯ ಗೋಡೆಗೆ ಬೆನ್ನು ಮಾಡಿ ನಿಂತಿದ್ದರು.

‘ಸೂಕ್ತ ಪರಿಹಾರ ನೀಡಬೇಕು. ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಬೇಕು’ ಎಂದು ಪಟ್ಟು ಹಿಡಿದರು.

‘ನಾವು ಇಲ್ಲಿಯವರೇ. ಇಲ್ಲಿ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ನಾವು ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು? ನಾವೇನು ಪಾಕಿಸ್ತಾನದಿಂದ ಬಂದವರಾ? ನಾವೂ ಕರ್ನಾಟಕದ ಜನರೇ. 10 ವರ್ಷದಿಂದ‌ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಬ್ಯಾಂಕ್‌ನಲ್ಲಿ ₹40 ಲಕ್ಷ ಸಾಲವಿದೆ. ಕೊರೊನಾದಿಂದ ಎರಡು ವರ್ಷದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ನಿರ್ಮಿಸಿದ ಮನೆ ಒಡೆಯಲು ಬಂದಿದ್ದೀರಾ? ನೀರು, ವಿದ್ಯುತ್ ಬಿಲ್ ಮನೆ ತೆರಿಗೆ ಎಲ್ಲವೂ ಕಟ್ಟಿದ್ದೇವೆ. ಈಗ ಏಕಾಏಕಿ ಮನೆ ಒಡೆದು ನಮ್ಮನ್ನು ಬೀದಿಗೆ ತಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಗೋಳಾಡಿದರು.

ಒಂದು ಹಂತದಲ್ಲಿ ದಂಪತಿ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ಪೊಲೀಸರು, ಅಗ್ನಿ ಶಾಮಕ ದಳ, ಮಾರ್ಷಲ್‌ಗಳು ದಂಪತಿಯಿಂದ ಬೆಂಕಿ ಪೊಟ್ಟಣ, ಪೆಟ್ರೋಲ್‌ ಕಸಿದುಕೊಂಡು, ಅವರ ಮೇಲೆ ಪೈಪ್‌ಗಳಿಂದ ನೀರು ಹರಿಸಿ ರಕ್ಷಿಸಿದರು. ನಂತರ ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿದರು.

‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪ್ರವಾಹಕ್ಕೆ ಯುವಕನೊಬ್ಬ ಎಸ್. ಆರ್. ಬಡಾವಣೆಯ ಇದೇ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒತ್ತುವರಿ ರಾಜಕಾಲುವೆ ಮಾಡುವುದು ಅನಿವಾರ್ಯ. ಒತ್ತುವರಿ ತೆರವು ಆರಂಭದಿಂದಲೂ ಕೆಲಸಕ್ಕೆ ಅಡ್ಡಿಪಡಿಸಿ ಈ ದಂಪತಿ ಇದೇ ರೀತಿ ವರ್ತಿಸುತ್ತಿದ್ದಾರೆ. ಎಲ್ಲ ಮನೆಗಳನ್ನು ತೆರವು ಮಾಡುತ್ತಿದ್ದೇವೆ. ಇವರ ಒಬ್ಬರ ಮನೆ ಮಾತ್ರ ತೆರವು ಮಾಡುತ್ತಿಲ್ಲ. ಒಬ್ಬರ ಮನೆ ತೆರವು ಮಾಡುವುದನ್ನು ಕೈಬಿಟ್ಟರೆ ಇತರರಿಗೂ ಇದೇ ನೀತಿ ಅನುಸರಿಸಬೇಕಾಗುತ್ತದೆ. ಕಾನೂನಿನಲ್ಲಿ ಅನುಕಂಪಕ್ಕೆ ಅವಕಾಶವಿಲ್ಲ’ ಎಂದು ಬಿಬಿಎಂಪಿ ಮಹದೇವಪುರ ವಲಯ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ಹೇಳಿದರು.

ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ರೀಲಕ್ಷ್ಮಿ ನೀಡಿದ ದೂರಿನನ್ವಯ ಸೋನಾಸಿಂಗ್‌, ಸುನೀಲ್‌ ಸಿಂಗ್‌ ದಂಪತಿ ಮೇಲೆ ಕೆ.ಆರ್‌. ಪುರ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆಗೆ ಯತ್ನ, ಬೆದರಿಕೆಯ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT