ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ ವೇಳೆಗೆ ಎಲ್ಲರಿಗೆ ಲಸಿಕೆ: ಬೈರತಿ ಬಸವರಾಜ

ಬೈರತಿ ಬಸವರಾಜ ಅವರಿಂದ 1 ಲಕ್ಷ ದಿನಸಿ ಕಿಟ್ ವಿತರಣೆ
Last Updated 5 ಜೂನ್ 2021, 22:18 IST
ಅಕ್ಷರ ಗಾತ್ರ

ಕೆ.ಆರ್.ಪುರ: ಡಿಸೆಂಬರ್ ಅಂತ್ಯದ ವೇಳೆಗೆ 130 ಕೋಟಿ ಜನರಿಗೂ ಕೋವಿಡ್‌ ಲಸಿಕೆ ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಕೆ.ಆರ್.ಪುರ ಕ್ಷೇತ್ರ ವ್ಯಾಪ್ತಿಯ ಕೊತ್ತನೂರಿನಲ್ಲಿ ಸಚಿವ ಬೈರತಿ ಬಸವರಾಜ ಹಮ್ಮಿಕೊಂಡಿದ್ದ ಒಂದು ಲಕ್ಷ ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆ ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದು ಸದಾನಂದಗೌಡ ಮಾಹಿತಿ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ಕೆ.ಆರ್.ಪುರ ಕ್ಷೇತ್ರದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕೂಲಿ ಕಾರ್ಮಿಕರು, ಚಾಲಕರು, ದಿನಗೂಲಿ ನೌಕರರಿಗೆ ನೆರವು ನೀಡುವ ಉದ್ದೇಶದಿಂದ ಒಂದು ಲಕ್ಷ ದಿನಸಿ ಕಿಟ್‌ ವಿತರಣೆ ಮಾಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ₹1 ಲಕ್ಷ ನೆರವು ನೀಡಲಾಗುವುದು ಎಂದರು.

ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದ್ದು, ಇದಕ್ಕಾಗಿ ₹13 ಕೋಟಿ ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಬಸವರಾಜ ಹೇಳಿದರು.

ಕೊತ್ತನೂರಿನ ನಂಜುಂಡ ಕಲ್ಯಾಣ ಮಂಟಪ, ವಿಜಿನಾಪುರದ ಸೈನಿಕ ಭವನ, ಕಲ್ಕೆರೆಯ ಎನ್.ಆರ್.ಐ.ಲೇಔಟ್, ಟಿ.ಸಿ.ಪಾಳ್ಯದ ಸಂತ ಅಂತೋಣಿ ಶಾಲೆ, ಕುರುಡುಸೊಣ್ಣೆನಹಳ್ಳಿಯ ಲೇಕ್ ಮೌಂಟ್ ಶಾಲೆ, ಎಚ್.ಎ.ಎಲ್.ನ ವಿಭೂತಿಪುರ ಶಾಲೆ, ಉದಯ ನಗರದ ಜೈನ ಭವನ, ಎ.ನಾರಾಯಣಪುರದ ಎಮ್.ಇ.ಜಿ. ಲೇಔಟ್, ದೇವಸಂದ್ರದ ಕೆಂಪೇಗೌಡ ಕ್ರೀಡಾಂಗಣದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT