ಸೋಮವಾರ, ಸೆಪ್ಟೆಂಬರ್ 28, 2020
21 °C
ಕೆರೆಯನ್ನು ಸಂಪೂರ್ಣ ಆವರಿಸಿಕೊಂಡ ಕಳೆ ಸಸ್ಯ

ಕೊಳಚೆ ನೀರು: ವೆಂಗಯ್ಯನಕೆರೆ ವೈಭವ ನಾಶ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಲ್ಕೈದು ವರ್ಷಗಳ ಹಿಂದೆ ದೋಣಿ ವಿಹಾರದೊಂದಿಗೆ ವಾರಾಂತ್ಯ ಕಳೆಯಲು ಸುತ್ತಮುತ್ತಲ ಜನರ ಅಚ್ಚುಮೆಚ್ಚಿನ ಸ್ಥಳವಾಗಿದ್ದ ಕೆ.ಆರ್.ಪುರದ ವೆಂಗಯ್ಯನಕೆರೆ ಈಗ ಪತನವಾದ ಸಾಮ್ರಾಜ್ಯದಂತಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 64.86 ಎಕರೆ ಪ್ರದೇಶದಲ್ಲಿ ವೆಂಗಯ್ಯನಕೆರೆ ಇದೆ. ಕೆರೆ ಅಭಿವೃದ್ಧಿ ಪ್ರಾಧಿಕಾರವು 2002-03ರಲ್ಲಿ ಜಲಕಾಯವನ್ನು ಅಭಿವೃದ್ಧಿಗೊಳಿಸಿತ್ತು. ಕೆರೆ ನಿರ್ವಹಣೆ ಜವಾಬ್ದಾರಿಯನ್ನು 2005ರಲ್ಲಿ ಕಂಪನಿಯೊಂದಕ್ಕೆ 15 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. 

ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಜಲಕಾಯದ ಪ್ರವೇಶದ್ವಾರದಲ್ಲಿ ವೆಂಗಯ್ಯನಕೆರೆ ಮತ್ತು ಹಗಲು ಕನಸಿನ ಕೆರೆ ಎಂಬ ಫಲಕ ಹಾಕಲಾಗಿದೆ. ಅದನ್ನು ಹಾದು ಒಳ ಹೋದರೆ ಪಾಳು ಬಿದ್ದಿರುವ ಕೋಟೆಯಂತೆ ಕಾಣಿಸುತ್ತದೆ.

ಒಳ ಹೋದರೆ ಮಕ್ಕಳು ಮತ್ತು ವಯಸ್ಕರಿಗೆ ಇದ್ದ ಪ್ರತ್ಯೇಕ ಆಟಿಕೆ ಸಾಮಾಗ್ರಿಗಳು ಎದುರಾಗುತ್ತವೆ. ಮುಂದೆ ಸಾಗಿದರೆ ಎದುರಾಗುವ ಕೆರೆಯಂಗಳ ದೂರಕ್ಕೆ ಕ್ರಿಕೆಟ್ ಮೈದಾನದಂತೆ ಕಾಣಿಸುತ್ತದೆ. ಕಳೆ ಸಸ್ಯ ಇಡೀ ಕೆರೆಯನ್ನು ಆವರಿಸಿದೆ. ಅದರ ನಡುವೆ ಅಲ್ಲಲ್ಲಿ ಮೋಟಾರು ಬೋಟ್‌ಗಳು ಅವಶೇಷಗಳಂತೆ ನಿಂತಿವೆ.

ಕೆರೆಯ ಒಂದು ಬದಿ ಇದ್ದ ಪಾದಚಾರಿ ಮಾರ್ಗ ಈಗ ಗಿಡಗಂಟಿಗಳಿಂದ ತುಂಬಿ ಹೋಗಿದೆ. ಕುಳಿತುಕೊಳ್ಳಲು ಅಲ್ಲಲ್ಲಿ ಹಾಕಿದ್ದ ಕಲ್ಲಿನ ಬೆಂಚ್‌ಗಳು ಮುರಿದು ಬಿದ್ದಿವೆ. ಇವೆಲ್ಲವೂ ಕೆರೆಯ ಗತ ವೈಭವವನ್ನು ನೆನಪಿಸುವಂತಿವೆ. 

‘ಅಷ್ಟೊಂದು ಸುಂದರವಾಗಿದ್ದ ಕೆರೆ ಈ ರೀತಿ ಹಾಳಾಗಲು ಕಾರಣವಾಗಿದ್ದು ಒಳಚರಂಡಿ ನೀರು. ಬಿಬಿಎಂಪಿ ಅಧಿಕಾರಿಗಳು ಕೈಗೊಂಡ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕೆರೆಗೆ ಕೊಳಚೆ ನೀರು ಸೇರುತ್ತಿದೆ’ ಎಂಬುದು ತಜ್ಞರ ಆರೋಪ.

‘ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರನ್ನು ಕೆರೆಗೆ ಹರಿ ಬಿಡಲಾಗುತ್ತಿದೆ. ಅದರ ಜೊತೆಯಲ್ಲೇ ಸೇರುತ್ತಿರುವ ಒಳಚರಂಡಿ ನೀರು ಹೆಚ್ಚಾದಂತೆ ಕಳೆ ಸಸ್ಯ ಬೆಳೆಯಲು ಆರಂಭಿಸಿತು. ನೋಡನೋಡುತ್ತಲೇ ಕೆಲವೇ ದಿನಗಳಲ್ಲಿ ಅದು ಇಡೀ ಕೆರೆಯನ್ನೇ ಆವರಿಸಿತು’ ಎಂದು ಈಶ್ವರಪ್ಪ ಮಡಿವಾಳಿ ಹೇಳುತ್ತಾರೆ.

‘ರಜಾ ದಿನಗಳಲ್ಲಿ ಇಡೀ ದಿನ ಇಲ್ಲೇ ಕಾಲ ಕಳೆದು ಹೋಗುತ್ತಿದ್ದೆವು. ಈಗ ಕೆರೆ ಹಾಳಾಗಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಸದ್ಯದ ಸ್ಥಿತಿ ನೋಡಿದರೆ ಮತ್ತೆ ಆ ವೈಭವ ಮರುಕಳಿಸುವುದು ಕನಸೇ ಇರಬೇಕು ಎನಿಸುತ್ತಿದೆ’ ಎನ್ನುತ್ತಾರೆ ಈಶ್ವರಪ್ಪ.

‘ಕೆರೆಗೆ ನೀರು ಹರಿದು ಬರಲು ಒಂದೇ ಒಂದು ಕಡೆ ಜಾಗ ಬಿಡಲಾಗಿದೆ. ಅದೇ ಸ್ಥಳದಲ್ಲೇ ಒಳಚರಂಡಿ ನೀರು ಹರಿಯುವ ಮೋರಿಯೂ ಇದೆ. ಎರಡೂ ಜೊತೆಗೂಡಿ ಕೆರೆ ಸೇರುತ್ತಿವೆ. ಸುಂದರವಾಗಿದ್ದ ಕೆರೆ ಇದೇ ಕಾರಣದಿಂದಾಗಿ ನಮ್ಮ ಕಣ್ಣ ಮುಂದೆ ಹಾಳಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು