ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರ ಕಾಣದ ಕೃಷಿಮೇಳ: ಅನ್ನದಾತರ ಸಂಖ್ಯೆ ವಿರಳ

ಮೂರು ಜಿಲ್ಲೆಗಳ ರೈತರಿಗೆ ಪ್ರಶಸ್ತಿ ಪ್ರದಾನ ‘ಇಳುವರಿ ದ್ವಿಗುಣದೊಂದಿಗೆ ಆದಾಯವೂ ದುಪ್ಪಟ್ಟಾಗಲಿ’
Last Updated 11 ನವೆಂಬರ್ 2020, 22:04 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಇಲ್ಲಿನ ಗಾಂಧಿ ಕೃಷಿವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಪ್ರತಿ ಬಾರಿ ಇರುತ್ತಿದ್ದ ಜನಜಂಗುಳಿ ಕಂಡು ಬರಲಿಲ್ಲ. ಕೃಷಿ ಹಬ್ಬದಲ್ಲಿ ಇರಬೇಕಾದ ಸಡಗರ ಕಂಡು ಬರಲಿಲ್ಲ. ಲಕ್ಷ ಲೆಕ್ಕದಲ್ಲಿ ಇರುತ್ತಿದ್ದ ರೈತರ ಸಂಖ್ಯೆ ಕೋವಿಡ್‌ ಬಿಕ್ಕಟ್ಟಿನ ಈ ಬಾರಿ ಸಾವಿರಕ್ಕೆ ಇಳಿದಿತ್ತು. ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕೃಷಿ ಕೇಂದ್ರಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಇದ್ದುದರಿಂದಲೂ ಹೆಚ್ಚು ರೈತರು ಜಿಕೆವಿಕೆಯತ್ತ ಹೆಜ್ಜೆ ಹಾಕಲಿಲ್ಲ.

ಭೌತಿಕ ಮತ್ತು ಡಿಜಿಟಲ್‌ ರೂಪದಲ್ಲಿ ನಡೆದ ಮೇಳಕ್ಕೆ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್‌) ಉಪಮಹಾನಿರ್ದೇಶಕ (ಕೃಷಿ ವಿಸ್ತರಣೆ) ಡಾ.ಅಶೋಕ್‌ಕುಮಾರ್‌ ಸಿಂಗ್‌ ಆನ್‌ಲೈನ್‌ನಲ್ಲಿಯೇ ಚಾಲನೆ ನೀಡಿದರು.

‘ದೇಶದಲ್ಲಿ ವರ್ಷಕ್ಕೆ 2.90 ಕೋಟಿ ಟನ್‌ ಆಹಾರ ಉತ್ಪಾದಿಸಲಾಗುತ್ತಿದೆ. ಇಳುವರಿ ಹೆಚ್ಚಾದಂತೆ ರೈತರ ಆದಾಯವೂ ದ್ವಿಗುಣಗೊಳ್ಳಬೇಕಿದೆ. ಬೆಳೆಗೆ ತಕ್ಕ ಬೆಲೆ ಸಿಗದಿರುವುದರಿಂದ ರೈತರ ಆದಾಯ ದುಪ್ಪಟ್ಟು ಆಗುತ್ತಿಲ್ಲ’ ಎಂದು ಹೇಳಿದರು.

‘ಒಟ್ಟು ಉತ್ಪಾದನೆಯಾಗುವ ಆಹಾರ ಧಾನ್ಯಗಳಲ್ಲಿ ಶೇ 14ರಿಂದ ಶೇ 15ರಷ್ಟು ಪ್ರಮಾಣದಷ್ಟು ಹಾಳಾಗುತ್ತದೆ ಅಥವಾ ವ್ಯರ್ಥವಾಗುತ್ತಿದೆ. ವಿಶ್ವದಲ್ಲಿ ದಿನಕ್ಕೆ 200 ಕೋಟಿ ಜನ ಹಸಿವಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ, ಆಹಾರ ಸಂಸ್ಕರಣೆಗೆ ಆದ್ಯತೆ ನೀಡಿದರೆ ಈ ಹಾನಿ ತಪ್ಪಿಸಬಹುದು. ಹಸಿವಿನಿಂದ ಬಳಲುತ್ತಿರುವವರ ಪ್ರಮಾಣವನ್ನೂ ಕಡಿಮೆ ಮಾಡಬಹುದು’ ಎಂದು ಅವರು ಸಲಹೆ ನೀಡಿದರು.

‘ಇಳುವರಿ ಹೆಚ್ಚಾಗಬೇಕು, ಆದಾಯವೂ ಬರಬೇಕು ಎಂದರೆ ಮಣ್ಣಿನ ಗುಣಮಟ್ಟ ಹೆಚ್ಚಿಸುವ ಕೆಲಸವಾಗಬೇಕು. ನಂತರ, ಆಹಾರ ಸಂಸ್ಕರಣೆ ಹಾಗೂ ಮಾರುಕಟ್ಟೆ ಜಾಲವನ್ನು ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು. ಹೆಚ್ಚು ರೈತರು, ಆಹಾರ ಧಾನ್ಯ, ಹಣ್ಣುಗಳು ಮತ್ತು ತರಕಾರಿ ಬೆಳೆಯಬೇಕು. ಅವರ ಕುಟುಂಬಕ್ಕೂ ಅವುಗಳನ್ನೇ ಬಳಸಿಕೊಂಡು, ಅದನ್ನೇ ಮಾರಾಟ ಮಾಡುವ ಮೂಲಕವೂ ಏಳಿಗೆ ಹೊಂದಬಹುದು’ ಎಂದರು.

ಐಸಿಎಆರ್‌ನ ಸಹಾಯಕ ಮಹಾನಿರ್ದೇಶಕ ಡಾ.ಎ.ಎನ್. ಪಾಂಡೆ ಮಾತನಾಡಿದರು.

ಕೃಷಿ ಮೇಳದಲ್ಲಿ ರಾಮನಗರ ಮತ್ತು ಹಾಸನ ಜಿಲ್ಲೆ ರೈತರಾದ (ಎಡದಿಂದ) ಎ.ಎಸ್. ನಂಜುಂಡಸ್ವಾಮಿ, ಎಚ್. ಬಿ. ಲೋಕೇಶ್, ಎಂ.ಎಸ್. ತಿಮ್ಮೇಗೌಡ, ಕೆ.ಎಲ್.ಕೋಕಿಲ್, ಚರಣ್ ರಾಜ್, ಪರಮೇಶ್, ಎಚ್.ವಿ. ಸಚಿನ್, ಆರ್.ಪಿ. ಮೋಹನ್ ಕುಮಾರ್, ನಾಗೇಶ್, ಯು.ಎಂ. ನಾಗವರ್ಮ ಮತ್ತು ಎಲ್.ಡಿ. ಹರ್ಷ ಅವರಿಗೆ ತಾಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಅನ್ನದಾತರಿಗೆ ಪ್ರಶಸ್ತಿ–ಗೌರವ

ರಾಮನಗರ ಜಿಲ್ಲೆಯ ಗವಿನಾಗಮಂಗಲದ ಜಿ.ಆರ್. ರಾಮಚಂದ್ರಯ್ಯ, ರಾಮನಗರದ ಕನಕಪುರ ತಾಲ್ಲೂಕಿನ ಜ್ಯೋತಿ ನಾಗರಾಜ್, ತುಮಕೂರಿನ ಶಿರಾ ತಾಲ್ಲೂಕಿನ ಆರತಿ ಮತ್ತು ತುಮಕೂರು ತಾಲ್ಲೂಕಿನ ಎಚ್.ಎಂ. ಕುಮಾರ್, ಹಾಸನದ ಆಲೂರು ತಾಲ್ಲೂಕಿನ ವೈ.ಜಿ. ಮಂಜುಳಾ ಮತ್ತು ಅರಕಲಗೂಡಿನ ಎಂ.ಎಸ್. ಜಗದೀಶ್‌ ಅವರಿಗೆ ಪ್ರಗತಿಪರ ರೈತ ಮತ್ತು ರೈತಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಮೂರೂ ಜಿಲ್ಲೆಗಳಲ್ಲಿ ಬರುವ ತಾಲ್ಲೂಕುಗಳ ಅತ್ಯುತ್ತಮ ರೈತ ಮತ್ತು ರೈತ ಮಹಿಳೆಯರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯಮಟ್ಟದ ಅತ್ಯುತ್ತಮ ರೈತ ಮತ್ತು ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನ.13ಕ್ಕೆ ಮುಂದೂಡಲಾಗಿದೆ.

ಮೂರು ನೂತನ ತಳಿ ಬಿಡುಗಡೆ

ನೆಲಗಡಲೆ: ಜಿಕೆವಿಕೆ–27 ಹೆಸರಿನ ಈ ತಳಿಯು 110ರಿಂದ 115 ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಎಕರೆಗೆ 12 ಕ್ವಿಂಟಲ್‌ನಿಂದ 13 ಕ್ವಿಂಟಲ್‌ನಷ್ಟು ಇಳುವರಿ ಪಡೆಯಬಹುದಾಗಿದೆ. ಎಲೆ ಚುಕ್ಕೆರೋಗ ಮತ್ತು ಎಲೆ ತುಕ್ಕು ರೋಗಗಳು ಬರುವುದಿಲ್ಲ.

ಅಲಸಂದೆ: ಕೆ.ಸಿ.–08 ಹೆಸರಿನ ಈ ತಳಿಯು 80ರಿಂದ 85 ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಎಕರೆಗೆ 5.2 ಕ್ವಿಂಟಲ್‌ನಿಂದ 5.6 ಕ್ವಿಂಟಲ್‌ನಷ್ಟು ಇಳುವರಿ ಪಡೆಯಬಹುದು. ಸಸ್ಯ ಪ್ರಕಾರವು ನೇರವಾಗಿದ್ದು, ದಟ್ಟವಾಗಿರುತ್ತದೆ. ಕಾಯಿಗಳು ದಪ್ಪ ಮತ್ತು ತಿಳಿ ಕಂದು ಬಣ್ಣದಿಂದ ಕೂಡಿರುತ್ತದೆ.

ಮೇವಿನ ಅಲಸಂದೆ: ಹೆಕ್ಟೇರ್‌ಗೆ 281.7 ಕ್ವಿಂಟಲ್‌ ಹಸಿರು ಸೊಪ್ಪಿನ ಇಳುವರಿ ಬರುತ್ತದೆ.


ಜಿಕೆವಿಕೆ ಆವರಣದಲ್ಲಿ ಬೆಳೆದಿದ್ದ ಹೂವುಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಮಕ್ಕಳು ಮತ್ತು ಮಹಿಳೆಯರು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ -ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್

ಮಳಿಗೆಗಳಲ್ಲಿ ಕಾಣದ ಸಡಗರ

ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ರೈತರು, ಕೃಷಿ ಉಪಕರಣಗಳ ಕಂಪನಿಗಳು ಅಭಿವೃದ್ಧಿ ಪಡಿಸಿದ ಸಾಧನಗಳು, ತರಹೇವಾರಿ ಪ್ರಯೋಗಗಳ ಪ್ರಾತ್ಯಕ್ಷಿಕೆಯಿಂದ ತುಂಬಿರುತ್ತಿದ್ದ ಕೃಷಿ ಮೇಳದ ಮಳಿಗೆಗಳಲ್ಲಿ ಈ ಬಾರಿ ಹಿಂದಿನ ಸಡಗರ ಕಂಡುಬರಲಿಲ್ಲ. ಕೋವಿಡ್‌ ಕಾರಣದಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಕೃಷಿ ವಿದ್ಯಾರ್ಥಿಗಳು ಊರುಗಳಿಗೆ ತೆರಳಿದ್ದರಿಂದ ಸಂಭ್ರಮ ಹೆಚ್ಚಾಗಿರಲಿಲ್ಲ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ 25 ಮಳಿಗೆಗಳನ್ನು ಮಾತ್ರ ಹಾಕಲಾಗಿತ್ತು. ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವತಿಯಿಂದ ಅಭಿವೃದ್ಧಿಪಡಿಸಲಾದ ಬೆಳೆಗಳು, ಬೆಳೆದ ಆಹಾರ ಬೆಳೆ ಮತ್ತು ಧಾನ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಮೇಳಕ್ಕೆ ಬಂದ ಎಲ್ಲರಿಗೂ ಉಚಿತ ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT