ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ 2020: ಮಧುಮೇಹ ದೂರವಾಗಿಸುವ ‘ಮಲ್ಬರಿ ಟೀ’

Last Updated 11 ನವೆಂಬರ್ 2020, 22:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಳೆ ಬೆಳೆಯುವ ಬಗೆ, ತಳಿ ಅಭಿವೃದ್ಧಿ, ಪ್ರಾತ್ಯಕ್ಷಿಕೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದ ಕೃಷಿ ವಿಶ್ವವಿದ್ಯಾಲಯವು ಈ ಬಾರಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಅದನ್ನು ಉದ್ಯಮವಾಗಿ ಕೈಗೊಳ್ಳುವ ಬಗೆಯ ಮಾಹಿತಿ ನೀಡುವುದಕ್ಕೂ ಮುಂದಾಗಿದ್ದು ವಿಶೇಷವಾಗಿತ್ತು.

ಚೀನಾ ಸಂಘರ್ಷದ ನಂತರ ಆ ದೇಶದಿಂದ ರೇಷ್ಮೆ ಆಮದು ಕಡಿಮೆಯಾಗಿರುವುದರಿಂದ ದೇಶದಲ್ಲಿ ರೇಷ್ಮೆ ಮತ್ತು ಅದರ ಉಪ ಉತ್ಪನ್ನಗಳ ತಯಾರಿಕೆಗೆ ಮತ್ತು ಮೌಲ್ಯವರ್ಧನೆಗೆ ಮಹತ್ವ ನೀಡಲಾಗಿದೆ.

‘ರೇಷ್ಮೆ ಕೃಷಿಯಲ್ಲಿ ವಿವಿಧ ಹಂತಗಳಲ್ಲಿ ಹಿಪ್ಪುನೇರಳೆ (ಮಲ್ಬರಿ) ಬಳಸಲಾಗುತ್ತದೆ. ರೇಷ್ಮೆ ಬೆಳೆಗಳಿಗೆ ಹಿಪ್ಪುನೇರಳೆ ಸೊಪ್ಪೇ ಪ್ರಮುಖ ಆಹಾರ. ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ಬೇಸಾಯ ಕೈಗೊಳ್ಳಲೇಬೇಕಾಗುತ್ತದೆ. ಇದರ ಎಲೆಗಳನ್ನು ಟೀ ಪುಡಿಯ ರೀತಿಯಲ್ಲಿ ಬಳಸಿಕೊಳ್ಳಬಹುದು. ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಇದನ್ನು ಉದ್ಯಮವಾಗಿ ಅಳವಡಿಸಿಕೊಂಡಿವೆ. ರೇಷ್ಮೆ ಬೆಳೆಗಾರರು ಈ ನಿಟ್ಟಿನಲ್ಲಿ ಯೋಚಿಸಿದರೆ, ಅವರೂ ಉದ್ಯಮಿಗಳಾಗಬಹುದು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥ ಡಾ.ಎಸ್. ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಪ್ಪುನೇರಳೆ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ನೈಸರ್ಗಿಕ ಪಾನೀಯವಾಗಿ ಮಲ್ಬರಿ ಚಹಾ ಸೇವಿಸಬಹುದು. ಹಸುವಿನ ಹಾಲಿಗಿಂತ ಶೇ 25 ಪಟ್ಟು ಹೆಚ್ಚು ಕ್ಯಾಲ್ಷಿಯಂ ಇದರಲ್ಲಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ಮಧುಮೇಹವನ್ನೂ ಇದರಿಂದ ನಿಯಂತ್ರಿಸಬಹುದು. ಏಕೆಂದರೆ, ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡುತ್ತದೆಯಲ್ಲದೆ, ದೇಹದಲ್ಲಿ ಸಕ್ಕರೆ ಪ್ರಮಾಣವನ್ನೂ ನಿಯಂತ್ರಣದಲ್ಲಿ ಇಡುತ್ತದೆ. ರಕ್ತ ಸಂಚಲನೆ ಸರಾಗವಾಗುತ್ತದೆ. ಮೂಳೆಗಳ ಆರೋಗ್ಯ ಸುಧಾರಿಸುತ್ತದೆಯಲ್ಲದೆ, ದಂತ ಸುರಕ್ಷತೆ ಹೆಚ್ಚಿಸುತ್ತದೆ’ ಎಂದರು.

‘ಥಾಯ್ಲೆಂಡ್‌, ಚೀನಾ, ಜಪಾನ್‌ನಲ್ಲಿ ‘ಹರ್ಬಲ್‌ ಟೀ’ ಎಂದೇ ಇದು ಹೆಚ್ಚು ಪ್ರಸಿದ್ಧಿಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಇದನ್ನು ಬಳಸುತ್ತಿದ್ದಾರಾದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಮಹತ್ವ ಇನ್ನೂ ಅರಿವಿಗೆ ಬಂದಿಲ್ಲ. ಅಲ್ಲದೆ, ಇದರ ವೈದ್ಯಕೀಯ ಮಹತ್ವವೂ ಹೆಚ್ಚು ಜನರಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ’ ಎಂದು ಅವರು ಹೇಳುತ್ತಾರೆ.

‘ಔಷಧ ತಯಾರಿಕಾ ಕಂಪನಿಗಳು, ವೈದ್ಯಕೀಯ ಕಂಪನಿಗಳು ಈ ನಿಟ್ಟಿನಲ್ಲಿ ಬಳಸಬೇಕು. ಹಿಪ್ಪುನೇರಳೆ ಎಲೆಗಳಲ್ಲಿನ ಗಂಜಿ ಅಂಶ ತೆಗೆಯುವುದು ಅದನ್ನು ಸಂಸ್ಕರಣೆ ಮಾಡಲು, ಪ್ಯಾಕೇಜ್‌, ಮಾರ್ಕೆಟಿಂಗ್‌ ಬಗ್ಗೆ ಬೆಳೆಗಾರರಿಗೆ ಮಾರ್ಗದರ್ಶನ ನೀಡಿ, ಅವರೊಂದಿಗೆ ಕೈಜೋಡಿಸಿದರೆ, ಅವರಿಗೂ ಲಾಭದಾಯಕ ಉದ್ಯಮವಾಗಿ ಕೈ ಹಿಡಿಯುತ್ತದೆ’ ಎಂದು ಅವರು ಸಲಹೆ ನೀಡಿದರು.

ಈ ಬಗ್ಗೆ ಮಾಹಿತಿಗೆ, ಚಂದ್ರಶೇಖರ್ ಅವರನ್ನು (98803–25001) ಸಂಪರ್ಕಿಸಬಹುದು.

ರೇಷ್ಮೆ ತ್ಯಾಜ್ಯದಿಂದ ಕರಕುಶಲ ವಸ್ತು

ರೇಷ್ಮೆ ಮೊಟ್ಟೆ ತಯಾರಿಕಾ ಘಟಕಗಳಲ್ಲಿ ಚಿಟ್ಟೆಗಳು ಗೂಡುಗಳನ್ನು ತೂತು ಮಾಡಿಕೊಂಡು ಹೊರಬಂದಿರುತ್ತವೆ. ಇದನ್ನು ರೇಷ್ಮೆಗೂಡುಗಳ ತ್ಯಾಜ್ಯ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ, ಈ ತೂತಾದ ಗೂಡುಗಳು ರೇಷ್ಮೆ ನೂಲು ತೆಗೆಯುವುದಕ್ಕೆ ಯೋಗ್ಯವಾಗಿರುವುದಿಲ್ಲ.

ನೂಲು ತೆಗೆಯಲು ಯೋಗ್ಯವಲ್ಲದ ತ್ಯಾಜ್ಯ ರೇಷ್ಮೆಗೂಡುಗಳು, ಟೊಮೆಟೊ ಬೆಳೆಯಲ್ಲಿ ಬಳಸಿದ ಪ್ಲಾಸ್ಟಿಕ್‌ ವೈರ್‌ಗಳು, ಹಿಪ್ಪುನೇರಳೆ ಕಡ್ಡಿಗಳು, ಬಿದಿರಿನ ಬೊಂಬುಗಳು ಹಾಗೂ ಇನ್ನಿತರ ಕೃಷಿ ತ್ಯಾಜ್ಯಗಳನ್ನು ಬಳಸಿ ಕರಕುಶಲ ವಸ್ತುಗಳನ್ನು ತಯಾರಿಸಬಹುದು.

ಹೀಗೆ, ರೇಷ್ಮೆಗೂಡಿನಿಂದ ತಯಾರಿಸಲಾದ ವಿವಿಧ ಬಗೆಯ ಹೂವುಗಳು, ಹೂಗುಚ್ಛ, ಹಾರಗಳು, ಬಾಗಿಲು ತೋರಣ, ವಾಲ್‌ ಹ್ಯಾಂಗಿಂಗ್ ಮೇಳದಲ್ಲಿ ಎಲ್ಲರ ಗಮನ ಸೆಳೆದವು. ನೈಜ ಹೂವುಗಳಷ್ಟೇ ಅಂದವಾಗಿ ಕಾಣುತ್ತಿದ್ದ ಈ ಕರಕುಶಲ ವಸ್ತುಗಳು ನಾಲ್ಕೈದು ವರ್ಷಗಳಾದರೂ ಏನೂ ಆಗುವುದಿಲ್ಲ. ಇವುಗಳ ಬಳಕೆಯಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ. ಪ್ಲಾಸ್ಟಿಕ್‌ ಹೂವುಗಳ ಬದಲಿಗೆ ಅಲಂಕಾರಕ್ಕೆ ಈ ಹೂವು, ಹಾರಗಳನ್ನು ಬಳಸಬಹುದು.

ರೇಷ್ಮೆ ಬೆಳೆಗಾರರು ಉಪಕಸುಬಿನಂತೆಯೂ ಈ ವಸ್ತುಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಬಹುದು ಎಂದು ಚಂದ್ರಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT