ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಜೊತೆ ಅಸಭ್ಯ ವರ್ತನೆ: ಕೆಎಸ್‍ಆರ್‌ಟಿಸಿ ನಿರ್ವಾಹಕ ಬಂಧನ

ಕರ್ತವ್ಯಲೋಪ ಆರೋಪದಡಿ ಕೆಲಸದಿಂದ ಅಮಾನತು
Last Updated 17 ಫೆಬ್ರುವರಿ 2020, 23:23 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಕೆಎಸ್‍ಆರ್‌ಟಿಸಿ ಬಸ್‍ ನಿರ್ವಾಹಕನನ್ನು ಸಂತ್ರಸ್ತೆಯ ಸಂಬಂಧಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕತ್ರಿಗುಪ್ಪೆ ನಿವಾಸಿ 25 ವರ್ಷದ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ಡಿಪೊಗೆ ಸೇರಿದ ನಿರ್ವಾಹಕ, ಬೆಳಗಾವಿಯ ಇಸುಬ್ ಅಲಿ ತಲ್ಲೂರ (40) ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು. ಕರ್ತವ್ಯಲೋಪಆರೋಪದಡಿಅಲಿಯನ್ನುಕರ್ತವ್ಯದಿಂದಅಮಾನತುಮಾಡಲಾಗಿದೆ.

ಫೆ.15ರಂದು ಬೆಂಗಳೂರು- ಹಾಸನ- ಪುತ್ತೂರು ಮಾರ್ಗದ ಕೆಎಸ್‍ಆರ್‌ಟಿಸಿ ಬಸ್ಸಿನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಸಂತ್ರಸ್ತೆ ಪ್ರಮಾಣಿಸುತ್ತಿದ್ದರು. ಟಿಕೆಟ್ ಕೊಡುವ ನೆಪದಲ್ಲಿ ಸಂತ್ರಸ್ತೆಯ ಪಕ್ಕದ ಸೀಟಿನಲ್ಲಿ ಕುಳಿತುಕೊಂಡ ನಿರ್ವಾಹಕ, ಆಕೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದ. ಆಗ ಸಂತ್ರಸ್ತೆ ತಡೆಯಲು ಯತ್ನಿಸಿದರೂ, ಆರೋಪಿ ಮಾತ್ರ ತನ್ನ ಕೃತ್ಯ ಮುಂದುವರೆಸಿದ್ದ. ಈ ದೃಶ್ಯವನ್ನು ಆತನಿಗೆ ತಿಳಿಯದಂತೆ ಆಕೆ ತನ್ನ ಮೊಬೈಲ್‍ನಲ್ಲಿ ಚಿತ್ರಿಕರಿಸಿದ್ದರು.

ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಆತ ಸಂತ್ರಸ್ತೆಯಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದ. ಆಗ ನಿರ್ವಾಹಕನ ಕಪಾಳಕ್ಕೆ ಬಾರಿಸಿದ ಮಹಿಳೆ, ಬೆಳ್ಳೂರು ಕ್ರಾಸ್ ಬಳಿ ಬಸ್ಸಿನಿಂದ ಇಳಿದು ಬೇರೊಂದು ಬಸ್ಸಿನಲ್ಲಿ ಹಾಸನಕ್ಕೆ ತೆರಳಿದ್ದರು. ಬಳಿಕ ಸಂತ್ರಸ್ತೆ ತಾವು ಚಿತ್ರೀಕರಿಸಿದ್ದ ವಿಡಿಯೊವನ್ನು ಸಂಬಂಧಿಕರಿಗೆ ಕಳುಹಿಸಿದ್ದರು.

ಅದೇ ಬಸ್‌ ಫೆ. 16ರಂದು ರಾತ್ರಿ ಬೆಂಗಳೂರಿಗೆ ಮರಳುವ ವೇಳೆ, ಯಶವಂತಪುರ ಬಸ್ ನಿಲ್ದಾಣದಲ್ಲಿ ಸಂತ್ರಸ್ತೆಯ ಸಂಬಂಧಿಕರು ತಡೆದು ನಿರ್ವಾಹಕನನ್ನು ಕೃತ್ಯದ ಬಗ್ಗೆ ಪ್ರಶ್ನಿಸಿದ್ದರು. ಈ ವೇಳೆ ವಾಗ್ವಾದ ನಡೆದಿತ್ತು. ಸಂತ್ರಸ್ತೆ ಸಂಬಂಧಿಕರು ನಿರ್ವಾಹಕನನ್ನು ಹಿಗ್ಗಾಮುಗ್ಗಾ ಥಳಿಸಿ, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹಾಸನದಿಂದ ರಾತ್ರಿ ಮರಳಿ ಬಂದ ಸಂತ್ರಸ್ತೆ, ವಿಡಿಯೊವನ್ನು ಪೊಲೀಸರಿಗೆ ಸಲ್ಲಿಸಿದರು.

ನಿರ್ವಾಹಕನ ಅಸಭ್ಯ ವರ್ತನೆ ವೈರಲ್‌ಸಂತ್ರಸ್ತೆ ಚಿತ್ರೀಕರಿಸಿಕೊಂಡಿದ್ದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿರ್ವಾಹಕನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಸುಬು ವಿರುದ್ಧ ಇದೇ ರೀತಿಯ ಆರೋಪ ಈ ಹಿಂದೆಯೂ ಕೇಳಿಬಂದಿತ್ತು ಎಂದು ಗೊತ್ತಾಗಿದೆ. ಪುತ್ತೂರಿನಲ್ಲಿಯೂ ಇದೇ ರೀತಿಯ ಕೃತ್ಯ ಎಸಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಎಂದೂ ಹೇಳಲಾಗಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT