ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗೆರೆ ಬಸವೇಶ್ವರ ಸ್ವಾಮಿಯ ಜಾತ್ರೆ: ಹಗಲು ಪರಿಷೆಯಲ್ಲಿ ಕುರ್ಜು ಬಂಡಿ ಮೆರವಣಿಗೆ

Published 30 ಏಪ್ರಿಲ್ 2024, 20:05 IST
Last Updated 30 ಏಪ್ರಿಲ್ 2024, 20:05 IST
ಅಕ್ಷರ ಗಾತ್ರ

ಹೆಸರಘಟ್ಟ: ತೋಟಗೆರೆ ಶ್ರೀಬಸವೇಶ್ವರ ಸ್ವಾಮಿ ಜಾತ್ರೆಯ ನಾಲ್ಕನೇ ದಿನವಾದ ಮಂಗಳವಾರ ನಡೆದ ಹಗಲು ಪರಿಷೆಯಲ್ಲಿ ಕುರ್ಜು ಬಂಡಿ ಮೆರವಣಿಗೆ ನಡೆಯಿತು.

ತೋಟಗೆರೆ, ಹೆಸರಘಟ್ಟ, ಗುಡ್ಡದಹಳ್ಳಿ, ದಾಸೇನಹಳ್ಳಿ ಹೊಸಹಳ್ಳಿ ಪಾಳ್ಯ, ಶ್ಯಾಮಭಟ್ಟರಪಾಳ್ಯ ಗ್ರಾಮಗಳಿಂದ ಕುರ್ಜುಗಳು ಮತ್ತು 25ಕ್ಕೂ ಹೆಚ್ಚು ಪಾನಕದ ಬಂಡಿಗಳಿಗೆ ಎತ್ತುಗಳನ್ನು ಕಟ್ಟಿ ಬಸವೇಶ್ವರ ಸ್ವಾಮಿಯ ದೇವಾಲಯದ ಬಳಿ ತೆರಳಿ ಪೂಜೆ ಸಲ್ಲಿಸುವುದು ಹಗಲು ಪರಿಷೆಯ ವಿಶೇಷವಾಗಿದೆ.

ಜೋಡಿ ಎತ್ತುಗಳನ್ನು ಶುಭ್ರಗೊಳಿಸಿ ಅವುಗಳ ಕೊರಳಿಗೆ ದಂಡೆ, ಶಂಖ, ಕಾಲಿಗೆ ಗೆಜ್ಜೆ, ಕೊಂಬುಗಳಿಗೆ ಬಣ್ಣ ಹಚ್ಚಿ, ಟೇಪ್‌ಗಳನ್ನು ಕಟ್ಟಿ ಅಲಂಕರಿಸಿ ಹಾಗೂ ಎತ್ತಿನ ಗಾಡಿಗಳಿಗೆ ಕುರ್ಜುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು.

ಎತ್ತಿನ ಗಾಡಿಗಳಲ್ಲಿ ಪಾನಕ, ಮಜ್ಜಿಗೆ ಕೋಸಂಬರಿ ಇಟ್ಟುಕೊಂಡು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ದೇವಾಲಯದ ಆವರಣದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ವಿತರಿಸಿದರು.

ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಹೋಮ, ಹವನ, ಅರ್ಚನೆ, ಮಹಾಮಂಗಳಾರತಿ, ಪುಷ್ಪಾರ್ಚನೆ ನಡೆಯಿತು. ‌ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಭಕ್ತರು ತಮ್ಮ ಎತ್ತುಗಳನ್ನು ಸಿಂಗರಿಸಿ ವಾದ್ಯ ಮೇಳಗಳೊಂದಿಗೆ ದೇವಸ್ಥಾನದ ಪ್ರದಕ್ಷಿಣೆ ಹಾಕಿದರು. ಬಸವೇಶ್ವರ ಸ್ವಾಮಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ‌

ಡೊಳ್ಳು ಕುಣಿತ, ತಮಟೆ, ನಗಾರಿ, ವೀರಗಾಸೆ, ಕೀಲು ಕುದುರೆ, ನಂದಿ ಧ್ವಜ ಕುಣಿತ ಪ್ರದರ್ಶನಗಳನ್ನು ಕಂಡು ಭಕ್ತರು ಸಂಭ್ರಮಿಸಿದರು. 

ಹೆಸರಘಟ್ಟ ಸಮೀಪದ ಶ್ರೀ ತೋಟಗೆರೆ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಂಗಳವಾರ ನಡೆಯಿತು.
ಹೆಸರಘಟ್ಟ ಸಮೀಪದ ಶ್ರೀ ತೋಟಗೆರೆ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಂಗಳವಾರ ನಡೆಯಿತು.
ಕುರ್ಜು ಬಂಡಿ ಮೆರವಣಿಗೆ
ಕುರ್ಜು ಬಂಡಿ ಮೆರವಣಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT