ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು, ಟ್ಯಾಗೋರ್ ಸ್ಫೂರ್ತಿಯಿಂದ ‌‌ಕನ್ನಡ ವಿವಿ ಕಟ್ಟಿದ್ದು: ಸಾಹಿತಿ ಕಂಬಾರ

ವಿಶ್ವಮಾನೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ
Published 28 ಡಿಸೆಂಬರ್ 2023, 15:06 IST
Last Updated 28 ಡಿಸೆಂಬರ್ 2023, 15:06 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಾಗ ಕುವೆಂಪು ಮತ್ತು ಟ್ಯಾಗೋರ್‌ ಅವರು ಕಟ್ಟಿದ ವಿಶ್ವವಿದ್ಯಾಲಯಗಳನ್ನು ಮಾದರಿಯಾಗಿ ಇಟ್ಟುಕೊಂಡಿದ್ದೆ. ಅವರಿಬ್ಬರ ಸ್ಫೂರ್ತಿಯಲ್ಲಿ ಹಂಪಿಯ ಕನ್ನಡ ವಿವಿ ರಚನೆಯಾಯಿತು ಎಂದು ಸಾಹಿತಿ ಚಂದ್ರಶೇಖರ ಕಂಬಾರ ನೆನಪು ಮಾಡಿಕೊಂಡರು.

ಕನ್ನಡ ಜಾಣಜಾಣೆಯರ ವೇದಿಕೆಯು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಕದಂಬ ಪಡೆಯ ಸಹಯೋಗದಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ‘ವಿಶ್ವಮಾನೋತ್ಸವ–ಕ್ರಾಂತಿಕವಿಗೆ 120’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಿಮ್ಮ ಆಶಯದಂತೆ ಕನ್ನಡ ವಿಶ್ವವಿದ್ಯಾಲಯ ಕಟ್ಟುತ್ತಿರುವ ಬಗ್ಗೆ ಖುದ್ದಾಗಿ ಕುವೆಂಪು ಅವರಿಗೆ ಹೇಳಬೇಕು ಎಂದು ನಿರ್ಧರಿಸಿದ್ದೆವು. ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಅವರ ಭೇಟಿಗೆ ದಿನ ನಿಗದಿ ಮಾಡಿದ್ದೆವು. ಆದರೆ, ಭೇಟಿಯಾಗಬೇಕಿದ್ದ ಒಂದು ದಿನ ಮುಂಚೆ ಅವರು ನಿಧನರಾದರು’ ಎಂದು ವಿಷಾದ ವ್ಯಕ್ತಪಡಿಸಿದರು.

ನಾಟಕಕಾರ ಎಲ್‌.ಎನ್‌. ಮುಕುಂದರಾಜ್ ಮಾತನಾಡಿ, ‘ಕುವೆಂಪು ಪ್ರಜ್ಞೆಯೇ ಕನ್ನಡ ಪ್ರಜ್ಞೆ. ಬಸವಣ್ಣನ ಲಿಂಗಾಯತ ಧರ್ಮ ಮತ್ತು ಕುವೆಂಪು ಅವರ ವಿಶ್ವಮಾನವ ಧರ್ಮಗಳು ಕನ್ನಡ ನಾಡಿನ ಧರ್ಮಗಳಾಗಿವೆ. ಅವರನ್ನು ಭಾಷಣಕ್ಕೆ, ಪಾಠಕ್ಕೆ ಸೀಮಿತಗೊಳಿಸದೇ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಬದುಕಿನಲ್ಲಿ ಮೌಢ್ಯವನ್ನು ಅಳವಡಿಸಿಕೊಂಡು ಕುವೆಂಪು ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸುವವರ ಸಂಖ್ಯೆ ಅಧಿಕವಾಗಿರುವುದು ವಿಪರ್ಯಾಸ. ಕುವೆಂಪು ಪ್ರಜ್ಞೆಯನ್ನು ಅಳವಡಿಸಿಕೊಳ್ಳದೇ ಜನ್ಮ ದಿನ ಆಚರಿಸಿದರೆ ಅದಕ್ಕೆ ಅರ್ಥವಿಲ್ಲ’ ಎಂದು ಜಾಣಜಾಣೆಯರು ಬಳಗದ ಜಗದೀಶ್‌ ತಿಳಿಸಿದರು.

ಲೇಖಕಿ ಫಾತಿಮಾ ರಲಿಯಾ, ಜೆಡಿಎಸ್‌ ವಕ್ತಾರ ಪ್ರದೀಪ್‌, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಇ. ಬಸವರಾಜು, ಕೆ.ಸಿ. ಶಂಕರ್‌, ಶ್ರೀಧರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT