ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ಮಕ್ಕಳ ಸ್ವಾತಂತ್ರ್ಯೋತ್ಸವ ಸಂಭ್ರಮ

Last Updated 14 ಆಗಸ್ಟ್ 2021, 16:15 IST
ಅಕ್ಷರ ಗಾತ್ರ

ಬೆಂಗಳೂರು: ನಾಗರಬಾವಿ ಬಳಿ ಶೆಡ್‌ಗಳಲ್ಲಿ ವಾಸವಿರುವ ವಲಸೆ ಕಾರ್ಮಿಕರ ಮಕ್ಕಳು ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಶನಿವಾರ ಆಚರಿಸಿದರು.

ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರು, ಕಟ್ಟಡ ನಿರ್ಮಾಣ ಹಾಗೂ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೆಡ್‌ಗಳಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.

ಇಂಥ ಕಾರ್ಮಿಕರ ಮಕ್ಕಳಿಗೆ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ನಿತ್ಯವೂ ಶಿಕ್ಷಕರಾಗಿ ಪಾಠ ಮಾಡುತ್ತಿದ್ದಾರೆ. ಅದೇ ಮಕ್ಕಳು, ಸ್ವಾತಂತ್ರ್ಯೋತ್ಸವನ್ನು ಶಿಸ್ತಿನಿಂದ ಅರ್ಥಪೂರ್ಣವಾಗಿ ಆಚರಿಸಿದರು.

ಶೆಡ್‌ಗಳ ಬಳಿಯೇ ಧ್ವಜದ ಕಂಬ ನಿರ್ಮಿಸಿದ್ದ ಮಕ್ಕಳು, ರಂಗೋಲಿ ಹಾಕಿ ಅಂಗಳವನ್ನು ಅಲಂಕರಿಸಿದ್ದರು. ಶಿಸ್ತಿನಿಂದ ಸಾಲುಗಟ್ಟಿ ನಿಂತು ರಾಷ್ಟ್ರ ಜಾಗೃತಿ ಗೀತೆಗಳನ್ನು ಹಾಡಿದರು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿ ಮಕ್ಕಳ ಜೊತೆ ಕಾಲ ಕಳೆದರು.

ಧ್ವಜಾರೋಹಣದ ಬಳಿಕ ಮಕ್ಕಳೆಲ್ಲರೂ ಸಾಮೂಹಿಕ ಭೋಜನ ಸವಿದರು. ಮಕ್ಕಳ ಶಿಕ್ಷಣಕ್ಕೆ ಅಗತ್ಯವಿದ್ದ ಪ್ರೊಜೆಕ್ಟರ್‌ನ್ನು ಚಂದ್ರಶೇಖರ್ ಅವರು ಕೊಡುಗೆಯಾಗಿ ವಿತರಿಸಿದರು.

ಜಿ.ಸಿ. ಚಂದ್ರಶೇಖರ್, ‘ಶಾಲೆಯಿಂದ ದೂರವುಳಿದಿದ್ದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿರುವ ಪಿಎಸ್‌ಐ ಶಾಂತಪ್ಪ ಕೆಲಸ ಶ್ಲಾಘನೀಯ. ಈ ಮಕ್ಕಳು ಶೈಕ್ಷಣಿಕವಾಗಿ ಚುರುಕಾಗಿದ್ದು, ಮುಂದೊಂದು ದಿನ ದೇಶದ ಹೆಮ್ಮೆಯ ಆಸ್ತಿ ಆಗುತ್ತಾರೆ’ ಎಂದು ಚಂದ್ರಶೇಖರ್ ಹೇಳಿದರು.

ಪಿಎಸ್‌ಐ ಶಾಂತಪ್ಪ, ‘ವಲಸೆ ಕಾರ್ಮಿಕರ ಮುಗ್ಧ ಮಕ್ಕಳ ಮುಖದಲ್ಲಿರುವ ನಗು ಖುಷಿ ಕೊಡುತ್ತದೆ. ಅವರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ ಈ ದಿನವನ್ನೂ ಎಂದಿಗೂ ಮರೆಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT