ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸ್ವಾವಲಂಬನೆ ಕತೆ; ಇಚ್ಛಾಶಕ್ತಿಯದೇ ಕೊರತೆ

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯ ದೂರದೃಷ್ಟಿ ಯೋಜನೆಗಳ ಅನುಷ್ಠಾನ ಅಗತ್ಯ
Published 21 ಮಾರ್ಚ್ 2024, 23:35 IST
Last Updated 21 ಮಾರ್ಚ್ 2024, 23:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ಜಲಕ್ಷಾಮ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರನ್ನು ಬಾಧಿಸುತ್ತಿದೆ. ಕಾವೇರಿ ನೀರಿನ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ನಗರದಲ್ಲಿ, ಈ ಬಾರಿ ಬತ್ತಿರುವ ಕೊಳವೆಬಾವಿಗಳಿಂದಲೂ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ನೀರಿನ ಸಂಕಷ್ಟದಿಂದ ಪಾರಾಗಿ, ಕುಡಿಯುವ ನೀರಿನ ಸ್ವಾವಲಂಬನೆ ಸಾಧಿಸಲು ತಜ್ಞರು ಹತ್ತಾರು ವರ್ಷಗಳಿಂದ ನೂರಾರು ಸಲಹೆಗಳನ್ನು ನೀಡಿದ್ದಾರೆ, ನೀಡುತ್ತಲೂ ಇದ್ದಾರೆ. ಆದರೆ, ಅವುಗಳ ಪರಿಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ. ನೀರಿನ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಅಳವಡಿಕೆಯಲ್ಲಿ ಇಚ್ಛಾಶಕ್ತಿ ಕೊರತೆಯಿರುವ ಕಾರಣದಿಂದಲೇ ಜಲಕ್ಷಾಮದಂತಹ ಪರಿಸ್ಥಿತಿ ಬಂದೊದಗಿದೆ. ಈಗಲಾದರೂ ಜಲಮಂಡಳಿ, ಬಿಬಿಎಂಪಿ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ದೂರದೃಷ್ಟಿಯ ಯೋಜನೆಗಳನ್ನು ತಕ್ಷಣದಿಂದಲೇ ಅಳವಡಿಸಿಕೊಳ್ಳಬೇಕು ಎಂದು ತಜ್ಞರು ಆಶಿಸುತ್ತಾರೆ.

ನಗರದ ಹೊರವಲಯದಲ್ಲಿ ಕಾವೇರಿ ನೀರು ಪೂರೈಕೆ ಇನ್ನೂ ಆರಂಭವಾಗಿಲ್ಲ. ಆದರೂ ಇಷ್ಟೂ ವರ್ಷ ಆ ಭಾಗದ ಜನರು ಕೊಳವೆಬಾವಿಗಳಿಂದಲೇ ನೀರು ಪಡೆಯುತ್ತಿದ್ದರು. ಈ ಬಾರಿ ಅಂತರ್ಜಲ ಕುಸಿತದ ಪರಿಣಾಮ ಕೊಳವೆಬಾವಿಗಳು ಬತ್ತಿದ್ದು, ಇದರಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ನೀರಿನ ಸ್ವಾವಲಂಬನೆ ಸಾಧಿಸಲು ಜಲಮಂಡಳಿ, ನಾಗರಿಕರು ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಅಲ್ಪ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಿದೆ.

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಲ್ಲಿ ‘ನೀರಿನ ಭದ್ರತೆ ಬೆಂಗಳೂರು’ ವರ್ಗದಲ್ಲಿ ನಾಗರಿಕರು, ತಜ್ಞರ ಸಲಹೆ ಹಾಗೂ ಜಲಮಂಡಳಿ ಜೊತೆಗೆ ಸೇರಿಕೊಂಡು ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜು ‘ಸಲಹೆಗಳ ಪಟ್ಟಿ’ಯನ್ನು ನೀಡಿದೆ.

ಅಲ್ಪಾವಧಿಯಲ್ಲಿ ಅನುಷ್ಠಾನಗೊಳಿಸಬೇಕಾದ ಕ್ರಮಗಳು:

  • ಕಟ್ಟಡಗಳ ನಿರ್ಮಾಣದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಎಲ್ಲ ಸಮಯದಲ್ಲೂ ಬಳಸಬೇಕು ಎಂಬುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು

  • ಜಲಮಂಡಳಿ ಎಸ್‌ಟಿಪಿ (ತಾಜ್ಯ ನೀರು ಸಂಸ್ಕರಣಾ ಘಟಕ) ಸೇರಿದಂತೆ ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಿಸಿದ ನೀರನ್ನು ವಾಹನ ತೊಳೆಯಲು, ಉದ್ಯಾನಗಳಲ್ಲಿ ಬಳಸಲು, ಮೊಬೈಲ್‌ ಆ್ಯಪ್‌ನಲ್ಲಿ ಎಲ್ಲ ರೀತಿಯ ಮಾಹಿತಿ, ಬಳಕೆ, ಖರೀದಿಗೆ ಅನುವು ಮಾಡಿಕೊಡಬೇಕು.

  • ಸರ್ಕಾರಿ, ಖಾಸಗಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಅನುಷ್ಠಾನ, ನಿರ್ವಹಣೆಯನ್ನು ಕಡ್ಡಾಯಗೊಳಿಸಬೇಕು

  • ಪಾದಚಾರಿ ಮಾರ್ಗಗಳ ಕೆಳಗೆ, ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಇದರಿಂದ ಪ್ರವಾಹ ನಿಯಂತ್ರಣವಾಗುತ್ತದೆ.

  • ಅನುಮತಿಯಿಲ್ಲದೆ, ಅವೈಜ್ಞಾನಿಕವಾಗಿ ಕೊಳವೆಬಾವಿ ಕೊರೆದವರಿಗೆ ಅತಿ ಹೆಚ್ಚಿನ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು

  • ಕೆರೆಗಳ ಗುಣಮಟ್ಟ ಕಾಪಾಡಲು ರಾಜಕಾಲುವೆಗಳಲ್ಲಿ ಬಯೊ–ಫಿಲ್ಟರ್‌ ಅಥವಾ ಫ್ಲೋಟಿಂಗ್‌ ವೆಟ್‌ಲ್ಯಾಂಡ್‌ ಅಳವಡಿಸಬೇಕು

  • ತಾಜ್ಯ ನೀರು ಸಂಸ್ಕರಣೆ ಘಟಕಗಳ ದಕ್ಷತೆ ಹಾಗೂ ವಿತರಣೆ ವ್ಯವಸ್ಥೆ ಉತ್ತಮಗೊಳಿಸಲು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು

  • ಬೆಂಗಳೂರಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಉಂಟಾಗುವ ಪ್ರವಾಹ ನೀರಿನ ಸಂಗ್ರಹ ಹಾಗೂ ಮರುಪೂರಣಗೊಳಿಸುವ ಮೂಲಕ ನೀರಿನ ಭದ್ರತೆ ಸಾಧಿಸಬೇಕು

  • ಕೆರೆಗಳು, ಅಂತರ್ಜಲವನ್ನು ಮೂಲವನ್ನಾಗಿಸಿಕೊಂಡು ನೀರು ಸರಬರಾಜು ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಬೇಕು

ದೀರ್ಘಾವಧಿಯಲ್ಲಿ ಕಾರ್ಯಗತವಾಗಬೇಕಾದ ಯೋಜನೆಗಳು 

  • ನಗರಕ್ಕೆ ನೀರು ಸರಬರಾಜು ಮಾಡಲು ಕೆರೆಗಳನ್ನು ಪರ್ಯಾಯ ಮೂಲವನ್ನಾಗಿ ಬಳಸುವಂತಹ ಯೋಜನೆ ರೂಪಿಸಬೇಕು. ಇದಕ್ಕೆ ಮೊದಲು ಗೃಹ ಹಾಗೂ ಕೈಗಾರಿಕೆ ಮಾಲಿನ್ಯದಿಂದ ಕೆರೆಗಳನ್ನು ನಿರ್ಬಂಧಿಸಬೇಕು. 50 ಮೀಟರ್‌ನಿಂದ 100 ಮೀಟರ್‌ ಬಫರ್‌ ವಲಯ ನಿರ್ವಹಣೆ ಮಾಡಬೇಕು. ಯಲಹಂಕ ಹಾಗೂ ಎಲೆಮಲ್ಲಪ್ಪ ಶೆಟ್ಟಿ ಕೆರೆಗಳನ್ನು ಮಳೆ ನೀರಿನ ಸಂಗ್ರಹ ಹಾಗೂ ಸಂಸ್ಕರಣೆ ತಾಣಗಳನ್ನಾಗಿಸಿಕೊಂಡರೆ 165 ಎಂಎಲ್‌ಡಿ ನೀರು ಪಡೆಯಬಹುದು

  • ನೀರು ಸರಬರಾಜು ವ್ಯವಸ್ಥೆಯಲ್ಲಿ ಸೋರಿಕೆಯನ್ನು ಪತ್ತೆ ಮಾಡಿ, ಸೋರಿಕೆ ನಿಯಂತ್ರಿಸಲು ‘ಸ್ಮಾರ್ಟ್‌ ವಾಟರ್‌ ಸಪ್ಲೈ ಸ್ಕೀಮ್‌’ ಜಾರಿಗೆ ತರಬೇಕು

  • ರಾಜಕಾಲುವೆಗಳ ರೂಪುರೇಷೆ ಬದಲಿಸಿ, ಕೆರೆಗಳೊಂದಿಗೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಪ್ರವಾಹ ನಿಯಂತ್ರಿಸಬಹುದು ಹಾಗೂ ಮಳೆ ನೀರು ಸಂಗ್ರಹಿಸಬಹುದು

  • ಜಪಾನಿನ ಟೋಕಿಯೊದಲ್ಲಿರುವಂತೆ ‘ಭೂಗತ ಜಲಾಶಯ’ ನಿರ್ಮಿಸಿ, ತುರ್ತಾಗಿ ಸಂಭವಿಸುವ ಪ್ರವಾಹವನ್ನು ನಿಯಂತ್ರಿಸಬಹುದು. ಮಡಿವಾಳ, ಅಗರ ಕೆರೆಗಳು ಸೇರಿದಂತೆ ಕೆಲವು ಕೆರೆಗಳ ನಡುವೆ ಪರಸ್ಪರ ಸಂಪರ್ಕಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಹ ನಿಯಂತ್ರಣ ಜಲಾಶಯಗಳನ್ನಾಗಿ ಉಪಯೋಗಿಸಿಕೊಳ್ಳಬೇಕು

  • 24x7 ಮಾದರಿಯಲ್ಲಿ ಸಮಗ್ರ ನಗರಕ್ಕೆ ನೀರು ಪೂರೈಸಬೇಕು

ನೀರಿನ ಭದ್ರತೆಗೆ ಹಲವು ಸಲಹೆ

ಸಂಸ್ಕರಿಸಿದ ನೀರಿನ ಮರುಬಳಕೆ ಸಂಸ್ಕರಿಸಿದ ನೀರಿಗೆ ಪ್ರತ್ಯೇಕ ಕೊಳವೆ ಮಾರ್ಗ ಸಂಸ್ಕರಿಸಿದ ನೀರಿನ ಮರುಬಳಕೆಯಲ್ಲಿನ ಸುರಕ್ಷತಾ ಕ್ರಮಗಳು ಬಳಕೆಗೆ ಅರಿವು ಅಂತರ್ಜಲ ಮರುಪೂರಣ ಕೆರೆಗಳಿಗೆ ನೀರು ತುಂಬಿಸುವುದು ಕೊಳವೆಬಾವಿಗಳ ಕೊರೆಸುವುದಕ್ಕೆ ನಿರ್ಬಂಧ ಸೇರಿದಂತೆ ನೀರಿನ ಭದ್ರತೆಗೆ ಸಾಕಷ್ಟು ಸಲಹೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಕೆಲವು ಅನುಷ್ಠಾನದ ಹಂತದಲ್ಲಿವೆ. ದೀರ್ಘ ಕಾಲದ ಯೋಜನೆಗಳನ್ನೂ ಅಳವಡಿಸಿಕೊಂಡರೆ ಕುಡಿಯುವ ನೀರಿಗೆ ನಗರಕ್ಕೆ ಎಂದಿಗೂ ಸಮಸ್ಯೆ ಬರುವುದಿಲ್ಲ. ಡಾ. ಎಚ್‌.ಕೆ. ರಾಮರಾಜು ಪ್ರಾಂಶುಪಾಲ ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜು ಹಾಗೂ ‘ನೀರಿನ ಭದ್ರತೆ ಬೆಂಗಳೂರು’ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT