ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷೆಯಲ್ಲಷ್ಟೇ ಕೆರೆ: ವಾಸ್ತವದಲ್ಲಿ ಕಣ್ಮರೆ

ವಸತಿ ಪ್ರದೇಶವಾಗಿ ಪರಿವರ್ತನೆಯಾದ ಕೆರೆ ಜಾಗ
Last Updated 5 ಮಾರ್ಚ್ 2023, 21:16 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ನಕ್ಷೆಯಲ್ಲಿ ಕೆರೆ, ಆದರೀಗ ವಸತಿ ಪ್ರದೇಶ... ಬ್ಯಾಟರಾಯನಪುರದಲ್ಲಿ ಕೆರೆಯೇ ಈಗ ಕಣ್ಮರೆಯಾಗಿದ್ದು, ದಾಖಲೆಗಳಲ್ಲಷ್ಟೆ ಕೆರೆ ಈಗ ಉಳಿದುಕೊಂಡಿದೆ.

ಕಳೆದ 25 ವರ್ಷಗಳಿಂದ ಕೆರೆಯ ಜಾಗವನ್ನು ಹಲವು ಬಾರಿ ವಿಂಗಡಿಸಿ ಮಾರಾಟ ಮಾಡಲಾಗಿದ್ದು, ಕೆರೆ ಏರಿಯೂ ವಸತಿ ಪ್ರದೇಶವಾಗಿ ಮಾರ್ಪಾಡಾಗಿದೆ.

ಕಂದಾಯ ಇಲಾಖೆಯ ಮೂಲ ಪಕ್ಕಾ ಪುಸ್ತಕದ ಪ್ರಕಾರ ಬ್ಯಾಟರಾಯನಪುರ ಹೋಬಳಿಯ ಸರ್ವೆ ನಂಬರ್ 75ರಲ್ಲಿ 5 ಎಕರೆ 1 ಗುಂಟೆಯನ್ನು ಕೆರೆ ಎಂದು ನಕ್ಷೆಯಲ್ಲಿ ತೋರಿಸಲಾಗಿದೆ. 1958ರ ಏಪ್ರಿಲ್ 30ರ ಕಂದಾಯ ನಕ್ಷೆಯಲ್ಲಿ ಕೆರೆಯ ಏರಿ ಎಂದೇ ನಮೂದಿಸಲಾಗಿದೆ. ಕಂದಾಯ ಇಲಾಖೆಯ ದಿಶಾಂಕ್ ಆ್ಯಪ್‌ನಲ್ಲೂ ಸರ್ವೆ ನಂಬರ್ 75 ಅನ್ನು ಕೆರೆ ಎಂದೇ ಹೇಳುತ್ತಿದೆ. 2018ರಲ್ಲಿ ಪರಿಚಯಿಸಲಾದ ಕರಡು ಸಮಗ್ರ ಅಭಿವೃದ್ಧಿ ಯೋಜನೆಯಲ್ಲೂ ಕೆರೆ ಎಂದು ಗುರುತಿಸಲಾಗಿದೆ. ಆದರೆ, ಏರಿ ಸಹಿತ ಕೆರೆ ಈಗ ಕಾಣೆಯಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ 2008ರ ಅಕ್ಟೋಬರ್‌ನಲ್ಲಿ ಹೊರಡಿಸಿರುವ ಎರಡು ಪ್ರತ್ಯೇಕ ಆದೇಶಗಳಲ್ಲಿ ಸರ್ವೆ ನಂ–75ರ ಒಟ್ಟು 4 ಎಕರೆ ಮತ್ತು 1 ಗುಂಟೆ ಅಳತೆಯ ಜಾಗವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ವಸತಿ ಪ್ರದೇಶಗಳಾಗಿ ಪರಿವರ್ತಿಸಲು ತಿಳಿಸಿದ್ದಾರೆ. ಹಿಡುವಳಿ ಮತ್ತು ಬೆಳೆಗಳ ಬಗ್ಗೆ ಪಹಣಿಯಲ್ಲಿ ದಾಖಲಿಸುವಂತೆ ತಹಶೀಲ್ದಾರ್‌ಗೂ ನಿರ್ದೇಶನ ನೀಡಿದ್ದು, ಕೆ. ಶ್ಯಾಮರಾಜು ಎಂಬುವರ ಮನವಿ ಆಧರಿಸಿ ಈ ಆದೇಶಗಳನ್ನು ನೀಡಲಾಗಿದೆ. ಈ ಸರ್ವೆ ನಂಬರ್‌ಗೆ ಸಂಬಂಧಿಸಿದ ಕರಾರು ಪತ್ರಗಳನ್ನು ಗಮನಿಸಿದರೆ, ಬೇರೆ ಬೇರೆ ಮಾಲೀಕರು ಕೆ.ಶ್ಯಾಮರಾಜು ಅವರಿಗೆ ವರ್ಗಾಯಿಸಿರುವುದು ಗೊತ್ತಾಗುತ್ತದೆ.

ಕೆರೆ ಜಾಗವನ್ನು ವಸತಿ ಪ್ರದೇಶಕ್ಕೆ ಪರಿವರ್ತಿಸಿರುವುದು ಹೇಗೆ ಎಂಬ ಪ್ರಶ್ನೆಗೆ, ‘ಹಲವು ವರ್ಷಗಳಿಂದ ಇತ್ಯರ್ಥವಾಗದ ಹಲವಾರು ಪ್ರಕರಣಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಉದ್ಭವಿಸಿವೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಅರ್ಜಿದಾರರು ಸಲ್ಲಿಸುವ ದಾಖಲೆಗಳ ಆಧಾರದ ಮೇಲೆ ಭೂ ಪರಿವರ್ತನೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು ಭೂ ದಾಖಲೆಗಳ ಪರಿಶೀಲನೆಗೆ ಆದೇಶ ನೀಡಿದರೂ ವಿವಿಧ ಹಂತಗಳಲ್ಲಿ ವ್ಯತ್ಯಾಸವಾಗಿರುವ ಹಲವು ಪ್ರಕರಣಗಳಿವೆ’ ಎನ್ನುತ್ತಾರೆ.

ತೆಲಗಿ ಹಗರಣದ ನಂತರ ಎಲೆಕ್ಟ್ರಾನಿಕ್ ಸ್ಟಾಂಪ್ ಪೇಪರ್ ವ್ಯವಸ್ಥೆ ಪರಿಚಯಿಸಲಾಗಿದೆ. ಅದಕ್ಕೂ ಮುಂಚೆ ನಡೆದಿರುವ ಕ್ರಯಪತ್ರಗಳನ್ನು ಪರಿಶೀಲಿಸುವುದು ಕಷ್ಟ. ವಿಧಿವಿಜ್ಞಾನ ತನಿಖೆಯಿಂದ ಮಾತ್ರ ಸತ್ಯಾಂಶ ಹೊರ ಬರಲಿದೆ ಎಂದು ಅವರು
ಹೇಳುತ್ತಾರೆ.

‘ಎನ್‌ಜಿಟಿ, ಲೋಕಾಯುಕ್ತಕ್ಕೆ ದೂರು’
‘ಹೆದ್ದಾರಿ ಪಕ್ಕದಲ್ಲಿರುವ ಕೆರೆ ಜಾಗ ಹೆಚ್ಚು ಬೆಲೆಬಾಳುವಂತದ್ದು, ಇದು ವಸತಿ ಪ್ರದೇಶವಾಗಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಯಬೇಕು’ ಎಂದು ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ ಆಗ್ರಹಿಸಿದರು.

‘ಈ ವಿಷಯವನ್ನು ಇಲ್ಲಿಗೆ ಬಿಡುವುದಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ), ಲೋಕಾಯುಕ್ತದಲ್ಲಿ ದೂರು ದಾಖಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT