ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟೇನಹಳ್ಳಿ ಕೆರೆ ಹಬ್ಬದಲ್ಲಿ ಮಕ್ಕಳ ಸಂಭ್ರಮ

Last Updated 31 ಜನವರಿ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯಲ್ಲಿ ಗ್ರಾಮೀಣ ಆಟಗಳು, ಪರಿಸರ ಮತ್ತು ಕೆರೆಗಳ ಸಂರಕ್ಷಣೆ ಕುರಿತ ಗೀತೆಗಳು ಹಾಗೂ ತಜ್ಞರಿಂದ ಮಾಹಿತಿ, ಸಂವಾದ, ಕರಕುಶಲ ವಸ್ತುಗಳ ಪ್ರದರ್ಶನ, ಚಿತ್ರಕಲೆ ಸ್ಪರ್ಧೆ, ನೃತ್ಯ, ಹಾಡು ಹಾಗೂ ಕೆರೆಯ ಕಥೆಗಳಿಗೆ ಕಿವಿಕೊಟ್ಟ ಮಕ್ಕಳು...

ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಟ್ರಸ್ಟ್ ಆಶ್ರಯದಲ್ಲಿ ಯಲಹಂಕ ಸಮೀಪದ ಪುಟ್ಟೇನಹಳ್ಳಿ ಕರೆಯ ಆವರಣದಲ್ಲಿ ಆಯೋಜಿಸಿದ್ದ ಕೆರೆ ಹಬ್ಬದಲ್ಲಿ ಕಂಡುಬಂದ ದೃಶ್ಯಗಳಿವು.

ಶಾಸಕ ಎಸ್.ಆರ್.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳೊಂದಿಗೆ ಪೋಷಕರು, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಂಟೆಬಿಲ್ಲೆ, ಲಗೋರಿ, ಹಗ್ಗ-ಜಗ್ಗಾಟ ಮತ್ತಿತರ ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು.

ಮಕ್ಕಳು ಮಣ್ಣಿನ ಮಡಕೆ ಮಾಡಿ ಖುಷಿಪಟ್ಟರು. ಭೂಮ್ತಾಯಿ ಬಳಗದ ನಿರ್ಮಲಾ ಮತ್ತು ಸಂಗಡಿಗರು ಪರಿಸರ ಮತ್ತು ಕೆರೆಗಳ ಕುರಿತ ಗೀತೆಗಳನ್ನು ಹಾಡಿ ರಂಜಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ 50 ಮಕ್ಕಳು ಪಾಲ್ಗೊಂಡು ಪರಿಸರಕ್ಕೆ ಸಂಬಂಧಿಸಿದ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಿದರು.

ಟ್ರಸ್ಟ್‌ ಅಧ್ಯಕ್ಷ ಸಂಗುನಿ ಮಾತನಾಡಿ, ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ವೈಜ್ಞಾನಿಕವಾಗಿ ಕೆರೆಯನ್ನು ಪುನಶ್ಚೇತನಗೊಳಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಜನರ ಸಹಭಾಗಿತ್ವ, ಸಲಹೆ ಮತ್ತು ಸಹಕಾರ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಚಟುವಟಿಕೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಕೆರೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT