ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಿಗೆ ಡಿಕ್ಕಿ ಹೊಡೆದ ‘ಲ್ಯಾಂಬೊರ್ಗಿನಿ’

ಎರಡು ಕಡೆ ಅಪಘಾತ * ಮೇಖ್ರಿ ವೃತ್ತದಲ್ಲಿ ಬೈಕ್ ಸವಾರನಿಗೆ ಗಾಯ
Last Updated 10 ಫೆಬ್ರುವರಿ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಲ್ಯಾಂಬೊರ್ಗಿನಿ ಹಾಗೂಪೋರ್ಷೆ ಕಾರಿನಿಂದ ಭಾನುವಾರ ಅಪಘಾತ ಸಂಭವಿಸಿದೆ. ಈ ಸಂಬಂಧ ಕಬ್ಬನ್‌ ಪಾರ್ಕ್‌ ಹಾಗೂ ಸದಾಶಿವನಗರ ಸಂಚಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣ ಎದುರಿನ ಸಿಟಿಓ ವೃತ್ತದಲ್ಲಿದ್ದ ಪೊಲೀಸ್‌ ಚೌಕಿಗೆ ‘ಲ್ಯಾಂಬೊರ್ಗಿನಿ’ ಕಾರು ಡಿಕ್ಕಿ ಹೊಡೆದಿದ್ದು, ಅದರ ರಭಸಕ್ಕೆ ಚೌಕಿಯ ಸುತ್ತಲಿನ ಅರ್ಧ ಗೋಡೆ ಕಿತ್ತುಹೋಗಿದೆ.

‘ಭಾನುವಾರ ಸಂಜೆ 5.25ಕ್ಕೆ ಈ ಅವಘಡ ಸಂಭವಿಸಿದೆ. ಚಾಲಕ ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಕಾರು ಓಡಿಸಿರುವುದು ಅವಘಡಕ್ಕೆ ಕಾರಣ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಿರುವ ಚೌಕಿಯಲ್ಲಿ ಕುಳಿತು ಸಿಬ್ಬಂದಿ ನಿತ್ಯವೂ ಕೆಲಸ ಮಾಡುತ್ತಾರೆ. ಅದೃಷ್ಟವಶಾತ್ ಘಟನೆ ನಡೆದಾಗ ಸಿಬ್ಬಂದಿ ಹೊರಗಡೆ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೋಡೆಯ ಇಟ್ಟಿಗೆಗಳು ಚೌಕಿಯ ಒಳಗೆಯೇ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕುರ್ಚಿಗಳೂ ಮುರಿದಿವೆ. ಕಾರಿನ ಮುಂಭಾಗವೂ ಜಖಂಗೊಂಡಿದೆ’

‘ಹೊಸ ಕಾರು ಇದಾಗಿದ್ದು, ನೋಂದಣಿ ಫಲಕವೂ ಇಲ್ಲ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಬೈಕ್ ಸವಾರನಿಗೆ ಗಾಯ: ಮೇಖ್ರಿ ವೃತ್ತದ ಕೆಳ ಸೇತುವೆಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಪೋರ್ಷೆ ಕಾರೊಂದು ಬೈಕ್‌ಗೆ ಗುದ್ದಿ, ನಂತರ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

‘ಅವಘಡದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರುಗಳೂ ಜಖಂಗೊಂಡಿವೆ. ಘಟನೆಯಿಂದಾಗಿ ರಸ್ತೆಯಲ್ಲಿ ಕೆಲಕಾಲ ದಟ್ಟಣೆ ಉಂಟಾಯಿತು’ ಎಂದು ಪೊಲೀಸರು ಹೇಳಿದರು.

‘ಗಣ್ಯ ವ್ಯಕ್ತಿಯ ಮಗ ಎನ್ನಲಾದ ಚಾಲಕಪೋರ್ಷೆಕಾರಿನಲ್ಲಿದ್ದ. ಆತನ ಸ್ನೇಹಿತರು ಎರಡು ಕಾರಿನಲ್ಲಿ ಹಿಂಬಾಲಿಸುತ್ತಿದ್ದರು. ಅಪಘಾತದ ಬಳಿಕ ಸ್ನೇಹಿತರ ಕಾರಿನಲ್ಲೇ ಚಾಲಕ ಪರಾರಿಯಾಗಿದ್ದಾನೆ. ಆತನ ವಿಳಾಸ ಪತ್ತೆ ಮಾಡುತ್ತಿದ್ದೇವೆ’ ಎಂದುಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT