49 ಲ್ಯಾಪ್‌ಟಾಪ್ ಕದ್ದಿದ್ದ ಕಾಂಚೀಪುರದ ಕಳ್ಳ!

7
ಹೂವು ವ್ಯಾಪಾರದ ಸೋಗಿನಲ್ಲಿ ಮನೆಗಳನ್ನು ಗುರುತಿಸುತ್ತಿದ್ದ

49 ಲ್ಯಾಪ್‌ಟಾಪ್ ಕದ್ದಿದ್ದ ಕಾಂಚೀಪುರದ ಕಳ್ಳ!

Published:
Updated:
Deccan Herald

ಬೆಂಗಳೂರು: ಹೂವು ಮಾರುತ್ತಲೇ ಕಳ್ಳತನ ಮಾಡಲು ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಈ ಚಾಲಾಕಿ, ನಸುಕಿನ ವೇಳೆ ಆ ಮನೆಗಳಿಗೇ ನುಗ್ಗಿ ಲ್ಯಾಪ್‌ಟಾಪ್‌ ಹಾಗೂ ಚಿನ್ನಾಭರಣ ದೋಚುತ್ತಿದ್ದ. ಮೂರು ತಿಂಗಳಲ್ಲಿ 49 ಲ್ಯಾಪ್‌ಟಾಪ್‌ ಕದ್ದಿದ್ದ ಆ ಕಾಂಚೀಪುರದ ಕಳ್ಳನೀಗ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.

ಪತ್ನಿ ಮಕ್ಕಳೊಂದಿಗೆ ತಮಿಳುನಾಡಿನ ಕಾಂಚೀಪುರದಲ್ಲಿ ನೆಲೆಸಿರುವ ಸುಧಾಕರ್, ಹೂವು ವ್ಯಾಪಾರ ಮಾಡುವ ನೆಪದಲ್ಲಿ ಆಗಾಗ್ಗೆ ನಗರಕ್ಕೆ ಬರುತ್ತಿದ್ದ. ಬಾಗಿಲ ಪಕ್ಕದಲ್ಲೇ ಕಿಟಕಿ ಇರುವಂಥ ಮನೆಗಳನ್ನು ಗುರುತಿಸಿಕೊಂಡು ನಸುಕಿನಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಿಟಕಿ ಗಾಜು ಒಡೆದು ಒಳಗೆ ಕೈ ಹಾಕಿ ಬಾಗಿಲ ಚಿಲಕ ತೆಗೆಯುತ್ತಿದ್ದ. ನಂತರ ಒಳಹೋಗಿ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ನಗ–ನಾಣ್ಯ ದೋಚುತ್ತಿದ್ದ. ಮೂರೇ ತಿಂಗಳಲ್ಲಿ ಎಲೆಕ್ಟ್ರಾನಿಕ್‌ಸಿಟಿ, ಬೆಳ್ಳಂದೂರು, ಮಾರತ್ತಹಳ್ಳಿ ಹಾಗೂ ಪರಪ್ಪನ ಅಗ್ರಹಾರ ಠಾಣೆಗಳ ವ್ಯಾಪ್ತಿಯ 39 ಮನೆಗಳಲ್ಲಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‌

‘ಆರೋಪಿಯ ಪತ್ತೆಗೆ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ತನಿಖೆ ಪ್ರಾರಂಭಿಸಿದೆವು. ಅಷ್ಟೂ ಪ್ರಕರಣಗಳನ್ನು ಅವಲೋಕಿಸಿದಾಗ, ನಸುಕಿನ ವೇಳೆಯೇ (4 ರಿಂದ 5 ಗಂಟೆ ನಡುವೆಯೇ) ಕೃತ್ಯ ನಡೆದಿರುವುದು ಗಮನಕ್ಕೆ ಬಂತು. ಆತನನ್ನು ಹಿಡಿಯಲೆಂದು ಆ ಅವಧಿಯಲ್ಲಿ ಹೆಚ್ಚಿನ ಸಿಬ್ಬಂದಿ ಮಫ್ತಿಯಲ್ಲಿ ಗಸ್ತು ತಿರುಗಲಾರಂಭಿಸಿದೆವು’ ಎಂದು ಪೊಲೀಸರು ಕಾರ್ಯಾಚರಣೆ ವಿವರಿಸಿದರು.

‘ಜುಲೈ 23ರಂದು ಆರೋಪಿ ಹೂಡಿ ರಸ್ತೆಯಲ್ಲಿ ನಿಧಾನವಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದ. ಜೀಪಿನ ಬಳಿ ನಿಂತಿದ್ದ ನಮ್ಮನ್ನು ನೋಡುತ್ತಿದ್ದಂತೆಯೇ ಆತ ಹೆಡ್‌ಲೈಟ್ ಆಫ್ ಮಾಡಿದ. ಅನುಮಾನದ ಮೇಲೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !