ರಾಜ್ಯದ ಅತಿದೊಡ್ಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರು: ರಾಜ್ಯದಲ್ಲಿ ಕಾರ್ಪೊರೇಷನ್‌ಗಳ ಮಟ್ಟದಲ್ಲಿ ಅತಿದೊಡ್ಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಗೋವಿಂದರಾಜನಗರದಲ್ಲಿ ನಿರ್ಮಾಣವಾಗಿದ್ದು, ಫೆ.16ರಂದು ಉದ್ಘಾಟನೆಯಾಗಲಿದೆ.
ಮುಂಬೈ ಕಾರ್ಪೊರೇಷನ್ ಒಂದು ವೈದ್ಯಕೀಯ ಕಾಲೇಜನ್ನೇ ಹೊಂದಿದೆ. ಅದು ಬಿಟ್ಟರೆ ದೇಶದಲ್ಲಿ ಕಾರ್ಪೊರೇಷನ್‌ಗಳ ಒಡೆತನದ ಅತಿದೊಡ್ಡ ಆಸ್ಪತ್ರೆ ಇದಾಗಿದೆ. ಬಿಬಿಎಂಪಿ ವತಿಯಿಂದ ಗೋವಿಂದರಾಜನಗರದಲ್ಲಿ 300 ಹಾಸಿಗೆಗಳ ಬೃಹತ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಒಟ್ಟಾರೆ ₹106.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಎಲ್ಲ ರೀತಿಯ ವೈದ್ಯ ಚಿಕಿತ್ಸೆಗಳನ್ನು ಒಂದೇ ಸೂರಿನಡಿ, ಹೈಟೆಕ್ ವ್ಯವಸ್ಥೆಗಳೊಂದಿಗೆ ಒದಗಿಸುವ ಉದ್ದೇಶ ಈ ಆಸ್ಪತ್ರೆಯದು.
ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ಐಸಿಯು ಹಾಗೂ ಏಳು ಶಸ್ತ್ರಚಿಕಿತ್ಸಾ ಘಟಕಗಳಿವೆ. ಲಿಫ್ಟ್, ಸಮ್ಮೇಳನ ಸಭಾಂಗಣ ಸೇರಿದಂತೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಸೌಲಭ್ಯ ಒಳಗೊಂಡಿದೆ.
ನಗರದ ಎಲ್ಲ ನಾಗರಿಕರಿಗೆ ಎಲ್ಲ ರೀತಿಯ ರೋಗಗಳಿಗೆ ಚಿಕಿತ್ಸೆ ನೀಡುವ ಬಹುಚಿಕಿತ್ಸಾ ವ್ಯವಸ್ಥೆಯನ್ನು ಈ ಆಸ್ಪತ್ರೆ ಒಳಗೊಳ್ಳಲಿದೆ. ಸಿಟಿ–ಎಂಆರ್‌ಐ ಸ್ಕ್ಯಾನ್‌ನಿಂದ ಹಿಡಿದು ಕಣ್ಣು, ಮೂಗು, ಕಿವಿ, ಹೃದಯ ಚಿಕಿತ್ಸೆಗೂ ಇಲ್ಲಿ ಸೌಲಭ್ಯವಿದೆ. ವಿಶೇಷ ಐಸಿಯುಗಳನ್ನು ಸ್ಥಾಪಿಸಲಾಗಿದೆ.
ಗುಣಮಟ್ಟದ ಚಿಕಿತ್ಸೆ: ‘ಗೋವಿಂದರಾಜನಗರ ಹಾಗೂ ಸುತ್ತಮುತ್ತಲಿನ ಜನರಿಗೆ ಸ್ಥಳೀಯವಾಗಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸಬೇಕೆಂಬ ಉದ್ದೇಶವಿತ್ತು. ಮುಖ್ಯಮಂತ್ರಿಯವರು ನೀಡಿದ ಅನುದಾನ ಬಳಸಿಕೊಂಡು ಎಲ್ಲ ರೋಗಗಳಿಗೂ ಗುಣಮಟ್ಟದ ಚಿಕಿತ್ಸೆ ನೀಡುವ ಈ ಆಸ್ಪತ್ರೆ ನಿರ್ಮಿಸಲಾಗಿದೆ. ‘ಬಾಲಗಂಗಾಧರನಾಥ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಎಂದು ಹೆಸರಿಸಲಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ.16ರಂದು ಉದ್ಘಾಟಿಸಲಿದ್ದಾರೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಸಿಬ್ಬಂದಿ: ಗೋವಿಂದರಾಜನಗರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಜ್ಞರು ಹಾಗೂ ವೈದ್ಯರನ್ನು ನಿಯೋಜಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅದಕ್ಕೆ ಸಮ್ಮತಿ ದೊರೆತಿದೆ. ನಂತರದ ದಿನಗಳಲ್ಲಿ ಕಾಯಂ ವೈದ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ ಚಂದ್ರ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.