ಶನಿವಾರ, ಫೆಬ್ರವರಿ 4, 2023
28 °C
ನ್ಯಾಯಾಂಗ ನಿಂದನೆ ಮೊಕದ್ದಮೆ ಕೈಬಿಟ್ಟ ಹೈಕೋರ್ಟ್‌

ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಗದ್ದಲ ಪ್ರಕರಣ: ವಕೀಲ ಜಗದೀಶ್‌ಗೆ ₹ 2 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಗದ್ದಲ ಉಂಟು ಮಾಡಿದ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳ ಬಗ್ಗೆ ಸಲ್ಲದ ಹೇಳಿಕೆ ನೀಡಿದ ಆರೋ ಪಕ್ಕೆ ಸಂಬಂಧಿಸಿದಂತೆ ಬೇಷರತ್ ಕ್ಷಮೆ
ಯಾಚಿಸಿದ ಹಿನ್ನೆಲೆಯಲ್ಲಿ ವಕೀಲ ಕೆ.ಎನ್. ಜಗದೀಶ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್‌ ಕೈಬಿಟ್ಟಿದೆಯಾದರೂ ₹ 2 ಲಕ್ಷ ದಂಡ ವಿಧಿಸಿದೆ.

ಈ ಕುರಿತ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ದಂಡದ ಮೊತ್ತ ₹ 2 ಲಕ್ಷದ ಪೈಕಿ ₹ 1 ಲಕ್ಷ ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡಬೇಕು. ಬೆಂಗಳೂರು ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ಮತ್ತು ಹೈಕೋರ್ಟ್ ಗುಮಾಸ್ಥರ ಕ್ಷೇಮಾಭಿವೃದ್ಧಿ ಸಂಘಕ್ಕೆ ತಲಾ ₹ 50 ಸಾವಿರ ಪಾವತಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು‘ ಎಂದು ಆದೇಶಿಸಿದೆ.

ಪ್ರಕರಣವೇನು?: ‘ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆ.ಎನ್‌. ಜಗದೀಶ್ 2022ರ ಫೆಬ್ರುವರಿ 11ರಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಅವರು ಕೆಲ ವಕೀಲರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದರಿಂದ ಕೋರ್ಟ್ ಆವರಣದಲ್ಲಿ ಗದ್ದಲ ಉಂಟಾಗಿತ್ತು’ ಎಂದು ಆರೋಪಿಸಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ರಿಜಿಸ್ಟ್ರಾರ್ ಮತ್ತು ಪ್ರಧಾನ ನ್ಯಾಯಧೀಶರು ಫೆಬ್ರುವರಿ 11ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.‌ ಈ ಘಟನೆ ನಂತರ 2022ರ ಫೆಬ್ರುವರಿ 12ರಂದು ಫೇಸ್‌ಬುಕ್ ಮತ್ತು ಯೂಟ್ಯೂಬ್ ಲೈವ್‌ಗೆ ಬಂದಿದ್ದ ಜಗದೀಶ್, ‘ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ಸಿಜೆಐ ಮತ್ತು ರಾಷ್ಟ್ರಪತಿಗೆ ದೂರು ಬರೆಯುತ್ತೇನೆ’ ಎಂದಿದ್ದರು. ಇದನ್ನು ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

ಸೋಮವಾರ ಹೈಕೋರ್ಟ್‌ಗೆ ಪ್ರಮಾ ಣಪತ್ರ ಸಲ್ಲಿಸಿದ ಆರೋಪಿ ಜಗದೀಶ್, ‘ನಾನು ತೋರಿದ ಅನುಚಿತ ವರ್ತನೆಗೆ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಮುಂದೆ ನ್ಯಾಯಾಲಯದಲ್ಲಿ ಸಭ್ಯ ರೀತಿ ಯಲ್ಲಿ ವರ್ತಿಸುತ್ತೇನೆ. ಆದ್ದರಿಂದ, ನನ್ನ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಬೇಕು’ ಎಂದು ಕೋರಿದ್ದರು. ರಿಜಿಸ್ಟ್ರಾರ್ ಜನರಲ್ ಪರ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕಿರಣ್ ಎಸ್. ಜವಳಿ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು