ಮೂರ್ತಿ ವಿರುದ್ಧ ತನಿಖೆಗೆ ಸ್ಪೀಕರ್‌ ಆದೇಶ

7
ವಿಧಾನಸಭಾ ಸಚಿವಾಲಯದಲ್ಲಿ ಹಗರಣ

ಮೂರ್ತಿ ವಿರುದ್ಧ ತನಿಖೆಗೆ ಸ್ಪೀಕರ್‌ ಆದೇಶ

Published:
Updated:
Deccan Herald

ಬೆಂಗಳೂರು: ವಿಧಾನಸಭಾ ಸಚಿವಾಲಯದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧ ತನಿಖೆ ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಆದೇಶಿಸಿದ್ದಾರೆ.

‘ಸಚಿವಾಲಯದಲ್ಲಿ ಕರೆದಿರುವ ಟೆಂಡರ್ ಹಾಗೂ ಹಣ ಪಾವತಿ ಸಂಬಂಧ ಕಾರ್ಯದರ್ಶಿ ವಿರುದ್ಧ ಬಂದಿರುವ ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳೂವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಡಿಜಿಪಿ ಅವರು ಸೂಚಿಸಿದ್ದಾರೆ. ಕಾರ್ಯದರ್ಶಿ ವಿರುದ್ಧವೇ ದೂರು ಬಂದಿದೆ. ಹಾಗಾಗಿ, ಕಾರ್ಯದರ್ಶಿ ಹುದ್ದೆಗಿಂತ ಮೇಲ್ಪಟ್ಟ ಅಧಿಕಾರಿಯನ್ನು ನೇಮಿಸಿ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು’ ಎಂದು ಮುಖ್ಯಕಾರ್ಯದರ್ಶಿಗೆ ರಮೇಶ್‌ ಕುಮಾರ್‌ ನಿರ್ದೇಶನ ನೀಡಿದ್ದಾರೆ.

ಮೂರ್ತಿ ಅವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ನಿವಾಸಿ ಶೇಷಾದ್ರಿ ಅವರು 2017ರ ಅಕ್ಟೋಬರ್‌ 9ರಂದು ಎಸಿಬಿಗೆ ದೂರು ನೀಡಿದ್ದರು. ತನಿಖೆ ನಡೆಸುವಂತೆ ರಮೇಶ್‌ ಕುಮಾರ್‌ ನೀಡಿದ ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ದೂರಿನಲ್ಲಿ ಏನಿದೆ: ‘ಶಾಸಕರ ಭವನದ ಆವರಣದಲ್ಲಿ ನೌಕರರ ಉಪಾಹಾರ ಮಂದಿರ (ಕಿಲಾರಿ ಕೆಫೆ) ಇದೆ. ಮೂರ್ತಿ  ಅದನ್ನು 2014ರಲ್ಲಿ ತಿಮ್ಮಣ್ಣ ಭಟ್ಟ ಎಂಬವರಿಗೆ ತಿಂಗಳಿಗೆ ₹4,400 ಬಾಡಿಗೆಯಂತೆ ಗುತ್ತಿಗೆಗೆ ನೀಡಿದ್ದರು. ಇದಕ್ಕೆ ಟೆಂಡರ್‌ ಕರೆದಿರಲಿಲ್ಲ. ಕೆಟಿಪಿಪಿ ಕಾಯ್ದೆಯ ನಿಯಮ ಪಾಲನೆ ಮಾಡಿರಲಿಲ್ಲ. ಕುಡಿಯುವ ನೀರು ಪೂರೈಕೆ ಹಾಗೂ ವಿದ್ಯುತ್‌ ಸಂಪರ್ಕಕ್ಕೆ ಹೆಚ್ಚುವರಿ ಬಾಡಿಗೆ ಪಡೆದಿರಲಿಲ್ಲ. ಇದಕ್ಕೆ ತಿಂಗಳಿಗೆ ₹ 70 ಸಾವಿರ ಬಾಡಿಗೆ ನೀಡಲು ಸಿದ್ಧರಿದ್ದೇವೆ ಎಂದು ಕೆಲವು ಹೋಟೆಲ್‌ ಮಾಲೀಕರು ಪ್ರಸ್ತಾ‍ವ ಸಲ್ಲಿಸಿದ್ದರು. ಇದನ್ನು ಮೂರ್ತಿ ಪರಿಗಣನೆಗೆ ತೆಗೆದುಕೊಂಡಿಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ಜುಜುಬಿ ಮೊತ್ತಕ್ಕೆ ಬಾಡಿಗೆಗೆ ನೀಡಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದರು.

‘ಟೆಂಡರ್‌ ಕರೆಯುವ, ಆದೇಶ ನೀಡುವ ಹಾಗೂ ವಿಧಾನಸಭೆಯ ವಿವಿಧ ಸಮಿತಿಗಳ ಸಭೆಗಳಿಗೆ ಆಹಾರ ಪೂರೈಸುವ ಸಂಸ್ಥೆಗಳಿಗೆ ಹಣ ನೀಡುವ ಅಧಿಕಾರ ಮೂರ್ತಿ ಅವರಿಗೆ ಇದೆ. 15 ಸದನ ಸಮಿತಿಗಳಿದ್ದು, ಈ ಸಮಿತಿಗಳು ವಾರಕ್ಕೆ ಒಂದು ಸಭೆ ನಡೆಸುತ್ತವೆ. ಈ ಸಮಿತಿಗಳಿಗೆ ಆಹಾರ ಪೂರೈಸಲು ತಿಮ್ಮಣ್ಣ ಭಟ್ಟ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ ವಿಎಟಿ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಹೊಂದಿರುವವರು ತಾಂತ್ರಿಕ ಬಿಡ್‌ನಲ್ಲಿ ಭಾಗವಹಿಸಲು ಅರ್ಹರು. ಆದರೆ, ತಿಮ್ಮಣ್ಣ ಭಟ್ಟ ಬಳಿ ಈ ಪ್ರಮಾಣಪತ್ರ ಇರಲಿಲ್ಲ. ಆದರೂ, ಅವರಿಗೆ ಗುತ್ತಿಗೆ ನೀಡಲಾಗಿದೆ’ ಎಂದು ಹೇಳಿದ್ದರು.
****

ವಿಧಾನಸಭಾಧ್ಯಕ್ಷರ ಆದೇಶದಂತೆ ಕ್ರಮ ಕೈಗೊಂಡಿದ್ದೇನೆ. ಹೆಚ್ಚಿನ ಮಾಹಿತಿಗೆ ಅವರನ್ನೇ ಕೇಳಿ.
-ಟಿ.ಎಂ. ವಿಜಯಭಾಸ್ಕರ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

***

ಸಿಎಜಿಯಿಂದ ಲೆಕ್ಕಪರಿಶೋಧನೆ

ವಿಧಾನಸಭಾ ಸಚಿವಾಲಯದಲ್ಲಿ (ಶಾಸಕರ ಭವನವೂ ಸೇರಿದಂತೆ) ಮಹಾಲೇಖಪಾಲರ ಕಚೇರಿಯು (ಸಿಎಜಿ) ಲೆಕ್ಕಪರಿಶೋಧನೆ ನಡೆಸಲಿದೆ.

ಲೆಕ್ಕಪತ್ರ ಶಾಖೆ–1,2 ಮತ್ತು 3, ಆಡಳಿತ ಶಾಖೆ–1,2 ಮತ್ತು 3 ಹಾಗೂ ಉಳಿದ ಶಾಖೆಗಳ ಲೆಕ್ಕಪರಿಶೋಧನೆಯನ್ನು ಸಹಾಯಕ ಲೆಕ್ಕ ಪರಿಶೋಧನಾಧಿಕಾರಿ ಕಿಶೋರ್‌ ಕುಮಾರ್‌, ಹಿರಿಯ ಲೆಕ್ಕಪರಿಶೋಧನಾಧಿಕಾರಿ ದೇವಿಕಾರಾಣಿ ಪಿಳ್ಳೈ ನಡೆಸಲಿದ್ದಾರೆ. 2017–18ನೇ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಹಾಜರಿದ್ದು ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ನನ್ನ ಅವಧಿಯಲ್ಲಿ ಆಗಿದ್ದಲ್ಲ’

‘ನಿಯಮ ಬಿಟ್ಟು ನಾನು ಯಾವುದೇ ಕೆಲಸ ಮಾಡಿಲ್ಲ. ಕಿಲಾರಿ ಕೆಫೆಯನ್ನು ನನ್ನ ಅವಧಿಯಲ್ಲಿ ಗುತ್ತಿಗೆ ನೀಡಿಲ್ಲ. ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ನನ್ನ ವಿರುದ್ಧ ಸಂಚು ನಡೆಯುತ್ತಿದೆ. ಕೆಲವರು ಎಸಿಬಿಗೆ, ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ಅದನ್ನು ತಂದು ಮಾಧ್ಯಮದವರಿಗೆ ನೀಡಿ ಸುದ್ದಿ ಹಬ್ಬಿಸುತ್ತಾರೆ’ ಎಂದು ಎಸ್‌. ಮೂರ್ತಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !