ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಗೇರಿ: ಚಿರತೆ ದಾಳಿಗೆ ಹಸು, ಕುರಿಗಳು ಬಲಿ

Published 16 ಜೂನ್ 2024, 14:46 IST
Last Updated 16 ಜೂನ್ 2024, 14:46 IST
ಅಕ್ಷರ ಗಾತ್ರ

ಕೆಂಗೇರಿ: ಚಿರತೆ ದಾಳಿಗೆ ಹಸು ಬಲಿಯಾದ ಘಟನೆ ಸೂಲಿಕೆರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸೂಲಿಕೆರೆ ಪಂಚಾಯಿತಿ ವ್ಯಾಪ್ತಿಯ ಕಗ್ಗಲೀಪುರ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮೂಡಿದೆ.

ಜೂನ್‌ 11ರ ಮುಂಜಾನೆ ಸ್ಥಳೀಯ ರೈತ ಲಕ್ಕಣ್ಣ ಎಂಬುವರಿಗೆ ಸೇರಿದ 15 ಹಸುಗಳು ಎಂದಿನಂತೆ ಮೇಯಲು ಹೋಗಿದ್ದವು. ಸಂಜೆ ವೇಳೆಗೆ ಕೇವಲ ಎಂಟು ಹಸುಗಳು ಮರಳಿ ಬಂದಿದ್ದವು. ಇದರಿಂದ ಗಾಬರಿಗೊಂಡಿದ್ದ ಲಕ್ಕಣ್ಣ ಹೊಸಕೆರೆ ಬಳಿಯ ಅರಣ್ಯ ಪ್ರದೇಶದಲ್ಲಿ ಹಸುಗಳಿಗೆ ಹುಡುಕಾಟ ನಡೆಸಿದಾಗ ಚಿರತೆ ಹಸುವೊಂದನ್ನು ಕೊಂದಿರುವ ವಿಷಯ ಗೊತ್ತಾಗಿದೆ. ಚಿರತೆಗಳ ಭಯಕ್ಕೆ ಸುತ್ತಮತ್ತಲಿನ ಅರಣ್ಯ ಪ್ರದೇಶಕ್ಕೆ ಬೆದರಿ ಹೋಗಿದ್ದ ಉಳಿದ ಆರು ಹಸುಗಳನ್ನು ಬಳಿಕ ಕರೆದುಕೊಂಡು ಬರಲಾಯಿತು ಎಂದು ರೈತ ಲಕ್ಕಣ್ಣ ತಿಳಿಸಿದ್ದಾರೆ. ಮರುದಿನ ಜೂನ್‌ 12ರಂದು ಇದೇ ಸೂಲಿಕೆರೆ ಗ್ರಾಮದಲ್ಲಿ ಎರಡು ಕುರಿಗಳನ್ನು ಚಿರತೆ ಬಲಿ ಪಡೆದಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ

ಐದು ಚಿರತೆಗಳಿಂದ ದಾಳಿ: ಸುಮಾರು ಐದು ಚಿರತೆಗಳು ಸೂಲಿಕೆರೆ ಅರಣ್ಯ ವ್ಯಾಪ್ತಿಯಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿವೆ. 3 ಮರಿಗಳು ಹಾಗೂ 1 ಗಂಡು ಹಾಗೂ 1 ಹೆಣ್ಣು ಚಿರತೆಯ ಗುಂಪು ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲವಾರು ದಿನಗಳಿಂದ ಸೂಲಿಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಜನರ ನಿದ್ದೆಗೆಡಿಸಿದೆ. ರಾತ್ರಿ ವೇಳೆ ಬೆಟ್ಟನಪಾಳ್ಯ, ಸೂಲಿಕೆರೆ ಪಾಳ್ಯ, ಯಲಚಗುಪ್ಪೆ, ಗುಲಗಂಜನಹಳ್ಳಿ ಗ್ರಾಮದಲ್ಲಿ ಚಿರತೆಗಳು ಸಂಚರಿಸುತ್ತಿವೆ. ಹೀಗಾಗಿ ರಾತ್ರಿ ಎಂಟರ ನಂತರ ಮನೆಯಿಂದ ಹೊರ ಹೋಗಲು ಭಯವಾಗುತ್ತಿದೆ. ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಜಾನುವಾರುಗಳು ಬಲಿಯಾಗಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡ ಅಶೋಕ್ ಆತಂಕ ವ್ಯಕ್ತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT