ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಳು ಬಾಳಲು ಬಿಡಿ...’ ಪ್ರೀತಿಸಿ ಕೈಹಿಡಿದವಳ ಅಳಲು

Last Updated 15 ಜೂನ್ 2022, 9:54 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ವಯಸ್ಕಳಿದ್ದೇನೆ, ಅವನನ್ನು ಮನಸಾರೆ ಪ್ರೀತಿಸಿ ಕೈ ಹಿಡಿದಿದ್ದೇನೆ. ಅವನೊಂದಿಗೇ ಬಾಳಲು ಬಯಸಿದ್ದೇನೆ. ದಯವಿಟ್ಟು, ಬಯಸಿದ ಬಾಳನ್ನು ಬಾಳಲು ಬಿಡಿ...!

‘ನಮ್ಮ ಹುಡುಗಿಯನ್ನು ನಮ್ಮ ವಶಕ್ಕೆ ಕೊಡಿಸಬೇಕು‘ ಎಂದು ಹುಡುಗಿಯ ಪೋಷಕರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ಹುಡುಗಿಯ ಎದೆಯಾಳದ ದನಿಗೆ ಕಿವಿಯಾಯಿತು.

ಪೊಲೀಸರು ಹುಡುಗ–ಹುಡುಗಿ ಇಬ್ಬರನ್ನೂ ಪತ್ತೆಹಚ್ಚಿ ನ್ಯಾಯಪೀಠದ ಮುಂದೆ ಹಾಜರುಪಡಿಸಿದ್ದರು. ಹುಡುಗಿ ಮನದ ಮೂಲೆಯಲ್ಲಿ ಬೆಚ್ಚಗೆ ಅವಿತಿದ್ದ ಹುಡುಗನ ಮೇಲಿನ ಪ್ರೀತಿ, ಅವನೊಂದಿಗೆ ಬಾಳುವ ಬಯಕೆಯನ್ನು ಬಿಚ್ಚಿಟ್ಟಳು. ‘ನಾವಿಬ್ಬರೂ ಕಾನೂನು ಉಲ್ಲಂಘಿಸಿಲ್ಲ’ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಳು.

ಹುಡುಗ ಕೂಡಾ, ‘ಆಕೆ ಎಂಜಿನಿಯರಿಂಗ್‌ ಪದವಿ ಓದುವ ಆಸೆಯನ್ನು ನಾನು ಪೂರೈಸುತ್ತೇನೆ. ಜೀವನದಲ್ಲಿ ಆಕೆ ಯಾವತ್ತೂ ನನ್ನಿಂದಾಗಿ ಕಣ್ಣೀರು ಹಾಕದಂತೆ ಕಾಪಿಟ್ಟು ಸಾಕುತ್ತೇನೆ’ ಎಂಬ ಭರವಸೆ ಬೆರೆತ ಕೋರಿಕೆಯನ್ನು ನ್ಯಾಯಪೀಠಕ್ಕೆ ಅರ್ಪಿಸಿದ.

ತಾರುಣ್ಯದ ಕನಸುಗಳಿಗೆ ಬಣ್ಣತುಂಬುವ ಭರದಲ್ಲಿ ಸಂಕಟಕ್ಕೆ ಸಿಲುಕಿ ಕುದಿವ ಕುಲುಮೆಯಲ್ಲಿ ನಿಂತಂತ್ತಿದ್ದ ಜೋಡಿಯ ಪ್ರಾಂಜಲ ಮಾತುಗಳನ್ನು ಆಲಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು. ಅಷ್ಟೇ ಅಲ್ಲ, ಇಬ್ಬರಿಗೂ ಕಿವಿಮಾತು ಹೇಳುವ ಮೂಲಕ, ‘ಜನ್ಮ ನೀಡಿ ಬೆಳೆಸಿದ ತಂದೆ-ತಾಯಿಯ ಋಣ ತೀರಿಸಲು ಅಸಾಧ್ಯ.ಹೆತ್ತವರಿಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ಸದಾ ನೆನಪಿಟ್ಟು ಬದುಕಿ’ ಎಂದು ಶುಭ ಹಾರೈಸಿತು.

ಪ್ರಕರಣವೇನು?:ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಕಾಲೇಜಿನ ವ್ಯಾನ್ ಚಾಲಕನನ್ನೇ ಪ್ರೇಮಿಸಿ ವಿವಾಹವಾಗಿದ್ದಳು. ಇದರಿಂದ ವ್ಯಾಕುಲಗೊಂಡಿದ್ದ ತಂದೆ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ‘ನನ್ನ ಮಗಳಿಗೆ ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ. ವ್ಯಾನ್ ಚಾಲಕ ಆಕೆಯನ್ನು ಪುಸಲಾಯಿಸಿ ಮದುವೆಯಾಗಿದ್ದಾನೆ. ಹಾಗಾಗಿ, ಅಕ್ರಮ ಬಂಧನ ದಲ್ಲಿರುವ ಮಗಳನ್ನು ನಮ್ಮ ವಶಕ್ಕೆ ಒಪ್ಪಿಸಲು ಆದೇಶಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT