ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯು: ಕುಲಪತಿ ಅಮಾನತಿಗೆ ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ

ವಿಶ್ವವಿದ್ಯಾಲಯದ ₹155 ಕೋಟಿಯನ್ನು ಸರ್ಕಾರಕ್ಕೆ ನೀಡುವ ನಿರ್ಧಾರ ನಿಯಮಕ್ಕೆ ವಿರುದ್ಧ–ಆರೋಪ
Last Updated 15 ನವೆಂಬರ್ 2020, 21:47 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ (ಬಿಸಿಯು) ಸಿಂಡಿಕೇಟ್ ಗಮನಕ್ಕೆ ತರದೆ ವಿಶ್ವವಿದ್ಯಾಲಯದ ₹155 ಕೋಟಿಯನ್ನು ರಾಜ್ಯಸರ್ಕಾರಕ್ಕೆ ವರ್ಗಾವಣೆ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಕುಲಪತಿ ಪ್ರೊ.ಎಸ್. ಜಾಫೆಟ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ಸಿಂಡಿಕೇಟ್ ಸದಸ್ಯರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆವರಣ ಮತ್ತು ಪ್ರಸನ್ನಕುಮಾರ ಬ್ಲಾಕ್‌ ಆವರಣದಲ್ಲಿ 43 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಯೋಜನೆಗಳನ್ನು ಕೆಎಚ್‌ಎಸ್‌ಡಿಆರ್‌ಪಿಯ ಎಂಜಿನಿಯರಿಂಗ್‌ ಘಟಕದ ಮೂಲಕ ₹155 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಕೋರಿ ಕುಲಪತಿಯವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

‘ಕುಲಪತಿಯಾದವರು ಅವರ ನಿವೃತ್ತಿಗೂ 6 ತಿಂಗಳ ಮುನ್ನ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಬಾರದು ಎಂಬ ನಿಯಮವಿದೆ. ಜಾಫೆಟ್‌ ಅವರು ಇದೇ 20ರಂದು ನಿವೃತ್ತರಾಗುತ್ತಿದ್ದಾರೆ. ಅ.23ರಂದು ಸರ್ಕಾರಕ್ಕೆ ಪತ್ರ ಬರೆದು, ಎರಡು ಕಂತುಗಳಲ್ಲಿ (₹90 ಕೋಟಿ ಮತ್ತು ₹65 ಕೋಟಿ) ನೀಡಲು ಮುಂದಾಗಿದ್ದಾರೆ. ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿದ್ದು, ಸಿಂಡಿಕೇಟ್‌ ಒಪ್ಪಿಗೆ ಇಲ್ಲದೆ ಇಂತಹ ನಿರ್ಧಾರವನ್ನು ಅವರು ಕೈಗೊಳ್ಳುವಂತಿಲ್ಲ’ ಎಂದೂ ಸದಸ್ಯರು ಹೇಳಿದ್ದಾರೆ.

ಸಿಂಡಿಕೇಟ್ ಸದಸ್ಯರಾದ ಪ್ರೊ. ಆರ್.ಕೆ. ಚಂದ್ರನಾಥ್, ಕರಣ್‌ಕುಮಾರ್, ಎಚ್.ಆರ್. ಸತೀಶ್, ಡಾ.ಎಚ್‌.ಟಿ. ಅರವಿಂದ, ಎಚ್.ಎನ್. ಹರಿಪ್ರಸಾದ್, ಜ್ಯೋತಿ ವಿಜಯ್‌ ಅವರು ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

‘2020ರ ಜೂನ್‌ 16ರಂದು ನಡೆದ ಸಿಂಡಿಕೇಟ್‌ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕುಲಪತಿಯವರು ಸರ್ಕಾರಕ್ಕೆ ಹೇಳಿದ್ದಾರೆ. ಆದರೆ, ಇದು ತಿರುಚಿದ ಮಾಹಿತಿ. ಅಂದು ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿರಲಿಲ್ಲ. ಸಮಗ್ರ ಯೋಜನಾ ವರದಿ, ಕಟ್ಟಡದ ನಕ್ಷೆ, ವೆಚ್ಚದ ಮಾಹಿತಿ ಯಾವುದೂ ಇಲ್ಲದೆ ಅನುಮೋದನೆ ನೀಡಲು ಸಾಧ್ಯವಿಲ್ಲ. ಸಮಗ್ರ ವರದಿ ನೋಡಿದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ, ಆಗದೇ ಇರುವ ನಿರ್ಧಾರವನ್ನು, ಆಗಿದೆ ಎಂದು ಮಾಡಿ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ವಿಶ್ವವಿದ್ಯಾಲಯಕ್ಕೂ ಮತ್ತು ಸರ್ಕಾರಕ್ಕೂ ಕುಲಪತಿಯವರು ಮುಜುಗರ ತಂದಿದ್ದಾರೆ’ ಎಂದು ಕರಣ್‌ಕುಮಾರ್‌ ದೂರಿದರು.

‘ಸಿಂಡಿಕೇಟ್‌ ಅನುಮತಿ ಪಡೆಯದೇ ಇಷ್ಟು ದೊಡ್ಡ ಮೊತ್ತವನ್ನು ಸರ್ಕಾರಕ್ಕೆ ನೀಡಲು ಹೇಳಿದ್ದೇಕೆ ? ನಿವೃತ್ತಿಗೆ ಒಂದು ವಾರ ಇರುವಾಗ ತರಾತುರಿಯಲ್ಲಿ ಇಂತಹ ನಿರ್ಧಾರ ಏಕೆ ತೆಗೆದುಕೊಳ್ಳಬೇಕಿತ್ತು ? ರಾಜ್ಯಪಾಲರು ಇದನ್ನೆಲ್ಲ ಪರಿಗಣಿಸಿ, ಕುಲಪತಿಯವರನ್ನು ಅಮಾನತು ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT