ಬುಧವಾರ, ಮೇ 12, 2021
24 °C

ಬೆಳಕು ತಜ್ಞ ವಿ. ರಾಮಮೂರ್ತಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಂಗಭೂಮಿಯ ಬೆಳಕು ಸಂಯೋಜನೆಯಲ್ಲಿ ನಿಷ್ಣಾತರಾಗಿದ್ದ ರಂಗಕರ್ಮಿ ವಿ. ರಾಮಮೂರ್ತಿ (85) ಅವರು ಬುಧವಾರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಕೆಲ ವರ್ಷಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದರು. ನಾಲ್ಕು ‌ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೊರೊನಾ ಪರೀಕ್ಷೆಯಲ್ಲಿ ಸೋಂಕಿತರಾಗಿರುವುದು ದೃಢಪಟ್ಟಿದ್ದರಿಂದ ರಾಜರಾಜೇಶ್ವರಿ ನಗರದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ಕಾರಣ ಬಿಬಿಎಂಪಿಯು ಕೆಂಗೇರಿಯ ಚಿತಾಗಾರದಲ್ಲಿ ಗುರುವಾರ ಬೆಳಿಗ್ಗೆ 11.30ಕ್ಕೆ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿತು. ಈ ವೇಳೆ ಅವರ ಕುಟುಂಬದ ಸದಸ್ಯರಿಗೆ ಕೂಡ ಸ್ಥಳದಲ್ಲಿ ಹಾಜರಿರಲು ಸಾಧ್ಯವಾಗಲಿಲ್ಲ.

ಅವಿವಾಹಿತರಾಗಿದ್ದ ರಾಮಮೂರ್ತಿ ಅವರು, ನಾಗರಬಾವಿಯಲ್ಲಿರುವ ಸಹೋದರಿಯ ನಿವಾಸದಲ್ಲಿ ವಾಸವಾಗಿದ್ದರು. ಅವರಿಗೆ ಎಂಟು ವರ್ಷಗಳ ಹಿಂದೆಯೇ ದೃಷ್ಟಿ ಮತ್ತು ಶ್ರವಣದೋಷ ಕಾಣಿಸಿಕೊಂಡಿತ್ತು. ನಿರ್ದೇಶನ, ಅಭಿನಯ, ಮೂಕಾಭಿನಯ, ರಂಗವಿನ್ಯಾಸ, ಬೆಳಕು ವಿನ್ಯಾಸ, ರಂಗಸಂಗೀತ, ಪ್ರಸಾಧನ, ವಸ್ತ್ರವಿನ್ಯಾಸ ಸೇರಿದಂತೆ ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಪರಿಣತಿ ಸಾಧಿಸಿದ್ದರು.

1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು, ರಾಷ್ಟ್ರೀಯ ನಾಟಕಶಾಲೆಯಿಂದ ನಿರ್ದೇಶನ ಮತ್ತು ರಂಗ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕದ ಅಮೆರಿಕ ಸರ್ಕಾರದ ‘ಈಸ್ಟ್-ವೆಸ್ಟ್ ಸೆಂಟರ್’ನ ವಿದ್ಯಾರ್ಥಿವೇತನ ಪಡೆದು, ರಂಗತಂತ್ರಗಳಲ್ಲಿ ಪದವಿ ಮುಗಿಸಿದರು. 1971ರಲ್ಲಿ ನ್ಯೂಯಾರ್ಕ್‌ನ ಯು.ಎಸ್. ಇನ್ಸ್‌ಟಿಟ್ಯೂಟ್ ಫಾರ್ ಥಿಯೇಟರ್ ಟೆಕ್ನಾಲಜಿಯಲ್ಲಿ ರಂಗತಂತ್ರಜ್ಞಾನದ ಪದವಿ ಪಡೆದಿದ್ದರು. ನ್ಯೂಯಾರ್ಕ್ ನಗರ, ಅಮೆರಿಕ ಮತ್ತು ಯುರೋಪಿನ ಪ್ರಮುಖ ಕೇಂದ್ರಗಳಲ್ಲಿ ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಕೆಲಸಮಾಡಿ, ಅಪಾರವಾದ ಅನುಭವ ಪಡೆದುಕೊಂಡಿದ್ದರು.

‌ದೇಶದ ವಿವಿಧೆಡೆ 50ಕ್ಕೂ ಹೆಚ್ಚು ರಂಗಶಾಲೆಗಳಿಗೆ ಸಲಹೆಗಾರರಾಗಿ, 8 ವಿಶ್ವವಿದ್ಯಾಲಯಗಳ ರಂಗಭೂಮಿ ವಿಭಾಗಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಫಿಲಫ್ಸ್ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಿ.ವಿ. ಕಾರಂತ ಸ್ಮೃತಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಇಲ್ಲಿನ ರವೀಂದ್ರ ಕಲಾಕ್ಷೇತ್ರ ಸೇರಿ ದೇಶದಾದ್ಯಂತ ಸುಮಾರು 35 ರಂಗಮಂದಿರಗಳಿಗೆ ಬೆಳಕಿನ ವ್ಯವಸ್ಥೆಯ ವಿನ್ಯಾಸ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು