ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುಲೈ 1ರಿಂದ ರಾಜ್ಯದಲ್ಲಿ ದುಬಾರಿ ಮದ್ಯ ಅಗ್ಗ: ಮಾರಾಟ ಹೆಚ್ಚಳ ನಿರೀಕ್ಷೆ

ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಗಣನೀಯ ಕಡಿತ
Published 19 ಜೂನ್ 2024, 15:33 IST
Last Updated 19 ಜೂನ್ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡಲಿದ್ದು, ಜುಲೈ 1ರಿಂದ ಭಾರಿ ಬೆಲೆಯ ಬ್ರ್ಯಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ.

ನೆರೆಯ ರಾಜ್ಯಗಳ ಮದ್ಯದ ದರಗಳಿಗೆ ಸಮೀಪಿಸುವಂತೆ ದರ ಪರಿಷ್ಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಈ ಘೋಷಣೆಯು ಈಗ ಜಾರಿಯಾಗಲಿದೆ.

ರಾಜ್ಯ ಸರ್ಕಾರವು ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವುದಕ್ಕಾಗಿ ಸತತವಾಗಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಹೆಚ್ಚಿಸುತ್ತಾ ಬಂದಿತ್ತು. 2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ ಮೇಲಿನ ಎಇಡಿ ಹೆಚ್ಚಿಸಿದ್ದರೆ, 2024ರ ಜನವರಿಯಲ್ಲಿ ಬಿಯರ್‌ ಮೇಲಿನ ಎಇಡಿ ಹೆಚ್ಚಿಸಲಾಗಿತ್ತು. ಇದೇ ಮೊದಲ ಬಾರಿಗೆ ಎಇಡಿ ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ.

ಹೆಚ್ಚುವರಿ ಅಬಕಾರಿ ತೆರಿಗೆ ಪ್ರಮಾಣ ರಾಜ್ಯದಲ್ಲಿ ಹೆಚ್ಚು ಇರುವ ಕಾರಣದಿಂದ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ದರ ದುಬಾರಿಯಾಗಿದೆ. ಈ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಅಬಕಾರಿ ತೆರಿಗೆ ನಷ್ಟವಾಗುತ್ತಿದೆ. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ.

ನೆರೆಯ ರಾಜ್ಯಗಳಲ್ಲಿನ ಮದ್ಯ ದರಗಳಿಗೆ ಸಮೀಪಿಸುವಂತೆ ರಾಜ್ಯದಲ್ಲೂ ಮದ್ಯದ ದರ ಪರಿಷ್ಕರಿಸಲು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು– 1968ಕ್ಕೆ ತಿದ್ದುಪಡಿ ತರಲು ಮಂಗಳವಾರ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಜುಲೈ 1ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ಸ್ಲ್ಯಾಬ್‌ಗಳ ಸಂಖ್ಯೆ ಇಳಿಕೆ: ರಾಜ್ಯದಲ್ಲಿ ಈವರೆಗೆ 18 ಸ್ಲ್ಯಾಬ್‌ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ.

ಪ್ರತಿ ಬಲ್ಕ್‌ ಲೀಟರ್‌ ಮದ್ಯದ ಘೋಷಿತ ಉತ್ಪಾದನಾ ದರ ₹449 ಮೊದಲ ಸ್ಲ್ಯಾಬ್‌ನಲ್ಲಿದ್ದರೆ,  15,001ರಿಂದ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಸ್ಲ್ಯಾಬ್‌ನಲ್ಲಿಡಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್‌ ಲೀಟರ್‌ನ ಘೋಷಿತ ಉತ್ಪಾದನಾ ದರ ₹450 ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ನಲ್ಲಿದ್ದರೆ, ₹20,001 ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್‌ಗೆ ಸೇರಿಸಲಾಗಿದೆ.

ಮದ್ಯ ಮಾರಾಟ ಹೆಚ್ಚಳ ನಿರೀಕ್ಷೆ

ದರ ಇಳಿಕೆ ಕಾರಣದಿಂದ ರಾಜ್ಯದಲ್ಲಿ ಮದ್ಯ ಮಾರಾಟ ದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಆಗಬಹುದು. ಇದರಿಂದ ಈಗ ಸಂಗ್ರಹ ವಾಗುವುದಕ್ಕಿಂತಲೂ ಹೆಚ್ಚು ಅಬಕಾರಿ ತೆರಿಗೆ ಬೊಕ್ಕಸಕ್ಕೆ ಬರಬಹುದು ಎಂಬ ನಿರೀಕ್ಷೆ ಅಬಕಾರಿ ಇಲಾಖೆ ಅಧಿಕಾರಿಗಳಲ್ಲಿದೆ.

ದುಬಾರಿ ಮದ್ಯಗಳ ತೆರಿಗೆಯೇ ಹೆಚ್ಚು ಇಳಿಕೆ

ಮೊದಲ ಐದು ಸ್ಲ್ಯಾಬ್‌ಗಳಲ್ಲಿ ಈಗ ಇರುವ ಹೆಚ್ಚುವರಿ ಅಬಕಾರಿ ತೆರಿಗೆ ಮತ್ತು ಪರಿಷ್ಕೃತ ಹೆಚ್ಚುವರಿ ಅಬಕಾರಿ ತೆರಿಗೆ ದರದ ಮಧ್ಯೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ, ಆರರಿಂದ 16ನೇ ಸ್ಲ್ಯಾಬ್‌ಗಳಲ್ಲಿ ಹೆಚ್ಚುವರಿ ಅಬಕಾರಿ ತೆರಿಗೆ ದರ ಗಣನೀಯವಾಗಿ ಇಳಿಕೆಯಾಗಲಿದೆ.

‘ಈಗ 750 ಎಂ.ಎಲ್‌. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರ್ಯಾಂಡ್‌ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರ್ಯಾಂಡ್‌ ಮದ್ಯಗಳ ದರ ₹3,600ರಿಂದ ₹3,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ  ₹7,100 ಇರುವ ಮದ್ಯದ ದರ  5,200ರ ಆಸುಪಾಸಿಗೆ ಕಡಿಮೆಯಾಗಲಿದೆ’ ಎಂದು ಅಬಕಾರಿ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇದೇ ಮಾದರಿಯಲ್ಲಿ ಹೆಚ್ಚಿನ ದರದ ಮದ್ಯಗಳ ದರ ಇಳಿಕೆಯಾಗಲಿದೆ. ಘೋಷಿತ ಉತ್ಪಾದನಾ ದರಕ್ಕೆ ಅನುಗುಣವಾಗಿ ಪ್ರತಿ ಬ್ರ್ಯಾಂಡ್‌ ಮದ್ಯದ ಪರಿಷ್ಕೃತ ದರ ಪಟ್ಟಿಯನ್ನು ಜೂನ್‌ ಅಂತ್ಯದ ವೇಳೆಗೆ ಅಬಕಾರಿ ಇಲಾಖೆ ಪ್ರಕಟಿಸಲಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT