ಭಾನುವಾರ, ಜೂಲೈ 5, 2020
27 °C
ವ್ಯಾಪಾರ– ಉದ್ಯಮಗಳಿಗೆ ₹ 1.5 ಲಕ್ಷ ಕೋಟಿ ನಷ್ಟ

ಲಾಕ್‌ಡೌನ್‌ ಪರಿಣಾಮ | ತೆರಿಗೆ ₹8,500 ಕೋಟಿ ಖೋತಾ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

‌ಬೆಂಗಳೂರು: ಕಳೆದೊಂದು ವರ್ಷದಿಂದ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದ ಕರ್ನಾಟಕ ಲಾಕ್‌ಡೌನ್‌ನಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಏಪ್ರಿಲ್‌ ತಿಂಗಳೊಂದರಲ್ಲೇ ತೆರಿಗೆ ಸಂಗ್ರಹದಲ್ಲಿ ಶೇ 80ರಷ್ಟು ಖೋತಾ ಅನುಭವಿಸಿದೆ. ಅಲ್ಲದೆ, ವ್ಯಾಪಾರ, ಉದ್ದಿಮೆಗಳು ಭಾರಿ ನಷ್ಟ ಕಂಡಿವೆ. 

ಈ ವರ್ಷದ  ₹ 1.28 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರಕ್ಕೆ ಲಾಕ್‌ಡೌನ್‌ ಅವಧಿಯಲ್ಲಿ ಸಂಗ್ರಹವಾಗಿರುವುದು ಕೇವಲ ₹ 2,500 ಕೋಟಿ. ಪೆಟ್ರೋಲ್– ಡೀಸೆಲ್‌ನಿಂದ ₹ 1,000ಕೋಟಿ, ಸರಕು ಹಾಗೂ ಸೇವಾ ತೆರಿಗೆಯಿಂದ ₹ 1,500 ಕೋಟಿ ಮಾತ್ರ ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಆದರೆ, ಈ ಅವಧಿಯಲ್ಲಿ ಸಂಗ್ರಹವಾಗಬೇಕಿದ್ದು ₹ 11,000 ಕೋಟಿ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಫೆಬ್ರುವರಿ, ಮಾರ್ಚ್‌ನಲ್ಲಿ ಬರಬೇಕಿರುವ ಸುಮಾರು ₹ 3,500 ಕೋಟಿ ಜಿಎಸ್‌ಟಿ ಪಾಲು ಇನ್ನೂ ಬಿಡುಗಡೆ ಆಗಿಲ್ಲ. ಏಪ್ರಿಲ್‌ನಲ್ಲಿ ವೃತ್ತಿ ತೆರಿಗೆ ₹ 900 ಕೋಟಿ ಬರಬೇಕಿತ್ತು. ಈ ಗಡುವನ್ನು ಮೇ 31ವರೆಗೆ ವಿಸ್ತರಿಸಲಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ರಾಜ್ಯ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

‘ಜಿಎಸ್‌ಟಿ ಅಡಿ ರಾಜ್ಯದಲ್ಲಿ 8 ಲಕ್ಷ ವ್ಯಾಪಾರ, ಉದ್ಯಮಗಳು ನೋಂದಣಿಯಾಗಿದ್ದು, ಸುಮಾರು 75 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ವ್ಯಾಪಾರ, ಉದ್ಯಮಗಳಿಗೆ ಒಂದು ತಿಂಗಳಿನಲ್ಲಿ ₹ 1.5 ಲಕ್ಷ ಕೋಟಿ ನಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಆರ್ಥಿಕ ಪುನಶ್ಚೇತನ ಪ್ಯಾಕೇಜ್‌ ಪ್ರಕಟಿಸದಿದ್ದರೆ ಮುಂಬರುವ ದಿನಗಳು ಕರಾಳವಾಗಲಿವೆ’‌ ಎಂದು ಎಫ್‌ಕೆಸಿಸಿಐ ಸರ್ಕಾರಕ್ಕೆ ಮನವಿ ಮಾಡಿದೆ.

‘ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು; ಸಣ್ಣ ಕೈಗಾರಿಕೆಗಳ ಕಾರ್ಮಿಕರ ವೇತನವನ್ನು ತಕ್ಷಣಕ್ಕೆ ಸರ್ಕಾರ ಭರಿಸಬೇಕು; ಇಪಿಎಫ್‌ ವಿನಾಯ್ತಿ ನೀಡಬೇಕು; ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಏಳು ಸಾವಿರ ಕೋಟಿ: ‘ನಾವು ಕೇಳಿರುವ ಪ್ಯಾಕೇಜ್‌ಗೆ ₹7 ಸಾವಿರ ಕೋಟಿ ಬೇಕಾಗಬಹುದು. ಸರ್ಕಾರಕ್ಕೆ ಇದರಿಂದ ದೊಡ್ಡ ಹೊರೆಯಾಗುವುದಿಲ್ಲ. ತಡಮಾಡದೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿರುವುದಾಗಿ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯಾಪಾರ ಮತ್ತು ಉದ್ಯಮಗಳ ಸಮಸ್ಯೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರಿಗೆ ಸಮಯ ಕೇಳಲಾಗಿದೆ. ಗಾರ್ಮೆಂಟ್ಸ್‌‌, ಹೋಟೆಲ್‌‌, ಸಾರಿಗೆ ಹಾಗೂ ಆಟೋ ವಲಯದ ಉದ್ಯಮಗಳು ಸಂಕಷ್ಟದಲ್ಲಿವೆ.‌ ಸರ್ಕಾರ ನೆರವಿಗೆ ಧಾವಿಸದಿದ್ದರೆ ಬಂದ್‌ ಆಗುವ ಅಪಾಯವಿದೆ’ ಎಂದೂ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು