ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲಗೊಂಡರೂ ಚೇತರಿಸಿಕೊಳ್ಳದ ವ್ಯಾಪಾರ: ಮಾರಾಟಕ್ಕಿವೆ ಹೋಟೆಲ್‌ಗಳು

Last Updated 12 ಜುಲೈ 2020, 21:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ನಗರದ ಹೋಟೆಲ್‌ಗಳು ಗ್ರಾಹಕರ ತೀವ್ರ ಕೊರತೆ ಎದುರಿಸುತ್ತಿವೆ. ನಿರೀಕ್ಷಿತ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿರುವ ಹಲವು ಹೋಟೆಲ್‌ಗಳನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ.

ಲಾಕ್‍ಡೌನ್ ಸಡಿಲಗೊಂಡ ಬಳಿಕ ಜೂನ್ ತಿಂಗಳಲ್ಲಿ ಹೋಟೆಲ್‍ಗಳು ಕಾರ್ಯಾರಂಭ ಮಾಡಿದವು. ಆದರೆ, ವ್ಯಾಪಾರ ಚೇತರಿಸಿಕೊಂಡಿಲ್ಲ. ಹೋಟೆಲ್‍ಗಳಲ್ಲಿ ಮೊದಲಿನಂತೆ ಸಭೆ ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಜನರು ಕುಟುಂಬ ಸಮೇತರಾಗಿ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವ ಪರಿಪಾಠವಂತೂ ನಿಂತೇ ಹೋಗಿದೆ.

ಬಾಡಿಗೆ ಪಾವತಿ ಹಾಗೂ ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಮಾಲೀಕರು ಕಷ್ಟ ಪಡುತ್ತಿದ್ದಾರೆ. ಮತ್ತಷ್ಟು ನಷ್ಟ ಅನುಭವಿಸುವುದನ್ನು ತಪ್ಪಿಸಲು ಹೋಟೆಲ್‍ಗಳನ್ನೇ ಮಾರಾಟಕ್ಕಿಟ್ಟಿದ್ದಾರೆ.

‘ಆರು ವರ್ಷಗಳಿಂದ ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ಹೋಟೆಲ್ ನಮ್ಮದು. ಸದಾ ಗ್ರಾಹಕರಿಂದ ತುಂಬಿರುತ್ತಿತ್ತು. ಆದರೆ, ಈಗ ಗ್ರಾಹಕರಿಗಾಗಿ ನಾವೇ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರ ಸರಿಯಾಗಿ ನಡೆಯದ ಕಾರಣ ಹೋಟೆಲ್ ಮಾರಲು ನಿರ್ಧರಿಸಿದ್ದೇನೆ’ ಎಂದು ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿ ಇರುವ ‘ಇಂಗು-ತೆಂಗು’ ಹೋಟೆಲ್ ಮಾಲೀಕ ಪರಮೇಶ್ವರ್ ಅಡಿಗ ತಿಳಿಸಿದರು.

‘ಹೋಟೆಲ್ ಆರಂಭಿಸುವಾಗ ₹50 ಲಕ್ಷ ಖರ್ಚಾಯಿತು. ಆದರೆ, ಖರೀದಿದಾರರು ಈ ಮೊತ್ತಕ್ಕೆ ಕೊಂಡುಕೊಳ್ಳುವುದೂ ಅನುಮಾನ. ವ್ಯಾಪಾರ ಮೊದಲಿನಂತಾಗುವ ನಂಬಿಕೆ ಕಡಿಮೆ. ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳು ಇನ್ನೂ ಕಷ್ಟದಿಂದ ಕೂಡಿರಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘₹25 ಲಕ್ಷ ಬಂಡವಾಳ ಹಾಕಿ ಹೋಟೆಲ್‌ ಆರಂಭಿಸಿದೆ. ಕೊರೊನಾ ಬರುವವರೆಗೂ ವ್ಯಾಪಾರ ಚೆನ್ನಾಗಿತ್ತು. ಹೋಟೆಲ್ ಒಳಭಾಗದ ವಿನ್ಯಾಸ ಹಾಗೂ ಪೀಠೋಪಕರಣಗಳಿಗೆ ಸಾಕಷ್ಟು ಖರ್ಚು ಮಾಡಿದೆ. ಕೊನೆಯ ಪಕ್ಷ ಆ ದುಡ್ಡಾದರೂ ಕೈಸೇರಲಿ ಎಂಬ ನಿರೀಕ್ಷೆಯಲ್ಲಿ ಹೋಟೆಲ್ ಮಾರಾಟಕ್ಕಿಟ್ಟಿದ್ದೇನೆ’ ಎಂದು ಕನಕಪುರ ರಸ್ತೆಯಲ್ಲಿರುವ ಹೋಟೆಲ್ ಮತ್ತು ರೆಸ್ಟೋರೆಂಟ್‌ವೊಂದರ ಮಾಲೀಕ ಅರ್ಜುನ್ ಹೇಳಿದರು.

‘ಸರ್ಕಾರ ಬಡ್ಡಿರಹಿತ ಸಾಲ ನೀಡಲಿ’
‘ಹೋಟೆಲ್ ಕಾರ್ಮಿಕರನ್ನು ಸರ್ಕಾರ ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ. ಹೋಟೆಲ್ ಉದ್ಯಮಕ್ಕೆ ಈಗ ಸರ್ಕಾರದ ಬೆಂಬಲ ಅಗತ್ಯ. ಮಾಲೀಕರು ಹೋಟೆಲ್‍ಗಳನ್ನು ಮಾರಾಟ ಮಾಡುವಷ್ಟು ಗಾಢ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮದ ಚೇತರಿಕೆಗೆ ಮಧ್ಯಮ ಪ್ರಮಾಣದ ಹೋಟೆಲ್‍ಗಳಿಗೆ ₹5 ಲಕ್ಷ ಹಾಗೂ ದೊಡ್ಡ ಹೋಟೆಲ್‍ಗಳಿಗೆ ₹10 ಲಕ್ಷ ಬಡ್ಡಿರಹಿತ ಸಾಲವನ್ನು ಸರ್ಕಾರ ಒದಗಿಸಬೇಕು’ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಒತ್ತಾಯಿಸಿದರು.

**

ವ್ಯಾಪಾರವಿಲ್ಲದೆ ಶೇ 30ರಷ್ಟು ಹೋಟೆಲ್‌ಗಳನ್ನು ಮಾರಲು ಮಾಲೀಕರು ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣವೂ ಹೆಚ್ಚಾಗಲಿದೆ.
-ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT