ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತದಾನಕ್ಕೆ ಪ್ರೇರೇಪಿಸಲು ನಾಲ್ವರು ರಾಯಭಾರಿಗಳು

Published 2 ಏಪ್ರಿಲ್ 2024, 15:49 IST
Last Updated 2 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ನಾಲ್ವರು ಖ್ಯಾತನಾಮರನ್ನು ‘ನಮ್ಮ ಬೆಂಗಳೂರು ಐಕಾನ್ಸ್‌’ ಆಗಿ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.

‘ನಮ್ಮ ಬೆಂಗಳೂರು ಐಕಾನ್ಸ್’ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ‘ಮತದಾನ ಮಾಡಲು ನಗರದ ಜನತೆಗೆ ಹುಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ರಾಯಭಾರಿಗಳು ನಮ್ಮ ಜೊತೆ ಕೈಜೋಡಿಸಿ, ಜಾಗೃತಿ ಮೂಡಿಸಲಿದ್ದಾರೆ’ ಎಂದು ಹೇಳಿದರು.

‘ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಎಲ್ಲರೂ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ‌ ಮಾಡಬೇಕು. ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ‘ನೋಟಾ‘ ಮಾಡುವುದಕ್ಕೂ ಅವಕಾಶವಿದೆ’ ಎಂದರು.

ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಮಾತನಾಡಿ, ‘ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಾವು ಮತದಾನ ಮಾಡಿಲ್ಲವಾದಲ್ಲಿ ಪ್ರಶ್ನೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ನಾವೆಲ್ಲರೂ ತಪ್ಪದೆ ಮತದಾನ ಮಾಡೋಣ’ ಎಂದರು.

ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ ಮಾತನಾಡಿ, ‘ನಮ್ಮ ನಾಯಕರನ್ನು ನಾವು ಆಯ್ಕೆ ಮಾಡಬೇಕು. ಆದ ಕಾರಣ ಎಲ್ಲರೂ ತಮ್ಮ ಸ್ವಇಚ್ಛೆಯಿಂದ ಮುಂದೆ ಬಂದು ತಪ್ಪದೆ ಮತ ಚಲಾಯಿಸಬೇಕು’ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜ್, ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್‌ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

‘ನಮ್ಮ ಬೆಂಗಳೂರು ಐಕಾನ್ಸ್’
* ರಮೇಶ್ ಅರವಿಂದ್ ಚಿತ್ರ ನಟ ಮತ್ತು ನಿರ್ದೇಶಕ * ನೀತು ವನಜಾಕ್ಷಿ ನಟಿ ಹಾಗೂ ರೂಪದರ್ಶಿ. * ಅನುಪ್ ಶ್ರೀಧರ್ ಬ್ಯಾಡ್ಮಿಂಟನ್ ಆಟಗಾರ. * ಅರ್ಚನಾ ಜಿ ಕಾಮತ್ ಟೇಬಲ್ ಟೆನ್ನಿಸ್ ಆಟಗಾರ್ತಿ.
ಒಂದು ಮತಕ್ಕೆ ಬದಲಾವಣೆಯ ಶಕ್ತಿ: ರಮೇಶ್ ಚಿತ್ರನಟ
ರಮೇಶ್ ಅರವಿಂದ್ ಮಾತನಾಡಿ ‘ಏಪ್ರಿಲ್ 26ರಂದು ಚುನಾವಣಾ ಹಬ್ಬ. ಎಲ್ಲರೂ ಸಡಗರದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತಕ್ಕೆ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಬೇಕು’ ಎಂದು ತಿಳಿಸಿದರು. ‘ಚುನಾವಣಾ ವ್ಯವಸ್ಥೆಯಲ್ಲಿ ನಾವು ಮತದಾನ ಮಾಡಿದರೆ ಏನೂ ಬದಲಾಗುವುದಿಲ್ಲ ಎಂಬ ಮನೋಭಾವಿದ್ದರೆ ಅದನ್ನು ಮೊದಲು ತಲೆಯಿಂದ ತೆಗೆಯಿರಿ. ಜವಾಬ್ದಾರಿಯಿಂದ ಎಲ್ಲರೂ ಒಂದಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸಿ’ ಎಂದು ಪ್ರೇರೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT