ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಇ ಟಿ.ಡಿ. ನಂಜುಂಡಪ್ಪಗೆ ನೋಟಿಸ್‌

ಪ್ರಕರಣ ಬಾಕಿ ಮಾಹಿತಿ ಮುಚ್ಚಿಟ್ಟು ಲೋಕಾಯುಕ್ತಕ್ಕೆ ವರ್ಗಾವಣೆ
Published 25 ಮಾರ್ಚ್ 2024, 21:45 IST
Last Updated 25 ಮಾರ್ಚ್ 2024, 21:45 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ವಿರುದ್ಧ ಮೂರು ಪ್ರಕರಣಗಳು ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಇರುವ ಮಾಹಿತಿ ಮುಚ್ಚಿಟ್ಟು ತನಿಖಾ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರ ಹುದ್ದೆಗೆ ವರ್ಗಾವಣೆಯಾಗಿ ಬಂದಿರುವ ಆರೋಪದ ಮೇಲೆ ಮುಖ್ಯ ಎಂಜಿನಿಯರ್‌ ಟಿ.ಡಿ. ನಂಜುಂಡಪ್ಪ ಅವರಿಗೆ ಲೋಕಾಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ.

ಲೋಕಾಯುಕ್ತದ ತಾಂತ್ರಿಕ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದ ಎಂ.ವಿ. ಪ್ರಸಾದ್‌ ಅವರನ್ನು ಮಾರ್ಚ್‌ 15ರಂದು ವರ್ಗಾವಣೆ ಮಾಡಲಾಗಿತ್ತು. ಈ ಹುದ್ದೆಗೆ ನಂಜುಂಡಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು.

ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದ ಅವಧಿಯಲ್ಲಿ ಕೆಂಗೇರಿಯ ಬಂಡೆಮಠ ಕೆಎಚ್‌ಬಿ ಬಡಾವಣೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ನಂಜುಂಡಪ್ಪ ವಿರುದ್ಧ ಬಂಡೆಮಠ ಕೆಎಚ್‌ಬಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು. 2023ರಿಂದಲೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಲೋಕಾಯುಕ್ತದಲ್ಲಿ ವಿಚಾರಣೆ ಬಾಕಿ ಇರುವ ಅಧಿಕಾರಿಯನ್ನು ಅದೇ ತನಿಖಾ ಸಂಸ್ಥೆಯ ಮುಖ್ಯ ಎಂಜಿನಿಯರ್‌ ಹುದ್ದೆಗೆ ನೇಮಿಸಿರುವುದನ್ನು ಪ್ರಶ್ನಿಸಿ ಬಂಡೆಮಠ ಕೆಎಚ್‌ಬಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ರಾಮಕೃಷ್ಣೇಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಆ ಬಳಿಕ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ನಂಜುಂಡಪ್ಪ ವಿರುದ್ಧ ಮೂರು ದೂರುಗಳ ವಿಚಾರಣೆ ಬಾಕಿ ಇರುವ ಮಾಹಿತಿ ಲಭಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ‘ನಂಜುಂಡಪ್ಪ ವಿರುದ್ಧ ಮೂರು ಪ್ರಕರಣಗಳ ವಿಚಾರಣೆ ಬಾಕಿ ಇರುವ ಮಾಹಿತಿ ಸಿಕ್ಕಿದೆ. ಮಾಹಿತಿ ಮುಚ್ಚಿಟ್ಟು ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಬಗ್ಗೆ ನೋಟಿಸ್‌ ಜಾರಿ ಮಾಡಿದ್ದೇವೆ’ ಎಂದರು.

‘ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿರುವವರನ್ನು ನಮ್ಮ ಸಂಸ್ಥೆಯಲ್ಲೇ ನೇಮಿಸಿಕೊಳ್ಳುವುದಿಲ್ಲ. ನಂಜುಂಡಪ್ಪ ಅವರ ಉತ್ತರವನ್ನು ಪರಿಶೀಲಿಸಿದ ಬಳಿಕ ಅವರನ್ನು ವಾಪಸ್‌ ಕಳುಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT