ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಭಾರಿ ಸದ್ದು ಯುದ್ಧ ವಿಮಾನದ್ದು!

ನಗರದ ಜನರನ್ನು ಬೆಚ್ಚಿ ಬೀಳಿಸಿದ ಶಬ್ಧ * ಗಂಟೆಗಳ ಕಾಲ ತಲ್ಲಣ ಮೂಡಿಸಿದ ಘಟನೆ
Last Updated 21 ಮೇ 2020, 1:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೂರ್ವ ಭಾಗದಲ್ಲಿ ಬುಧವಾರ ಮಧ್ಯಾಹ್ನ 1.24ರ ಸುಮಾರಿಗೆ ಏಕಾಏಕಿ ಕೇಳಿಸಿದ ಭಾರಿ ಸದ್ದು ಜನರಲ್ಲಿ ತಲ್ಲಣ ಮೂಡಿಸಿತು. ಕೆಲಹೊತ್ತು ಜನರು ತೀವ್ರ ಆತಂಕಕ್ಕೆ ಒಳಗಾದರು.

ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ, ಎಂ.ಜಿ. ರಸ್ತೆ,ಮಾರತ್ತಹಳ್ಳಿ, ಹೆಬ್ಬಗೋಡಿ ಹೀಗೆ ಅನೇಕ ಕಡೆ ಈ ಸದ್ದು ಜನರ ನಿದ್ದೆಗೆಡಿಸಿತು.

‘ಈ ಭಾರಿ ಶಬ್ದಸೂಪರ್‌ಸಾನಿಕ್ ಯುದ್ಧ ವಿಮಾನದ್ದು’ ಎಂದು ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದ್ದಾರೆ. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ
ಪ್ರತಿಕ್ರಿಯಿಸಿರುವ ಅವರು, ‘ಈ ವಿಮಾನಗಳ ಪರೀಕ್ಷಾರ್ಥ ಹಾರಾಟ ಸದ್ದು. ಗುಡುಗಿಗಿಂತಲೂ ತೀವ್ರ’ ಎಂದಿದ್ದಾರೆ.

ಸದ್ದು ಕೇಳಿದ ತಕ್ಷಣ, ಅನೇಕ ಮಂದಿ ಭೂಕಂಪನ ಸಂಭವಿಸಿರಬೇಕೆಂದು ಭೀತಿಗೊಳಗಾದರೆ, ಮತ್ತೆ ಕೆಲವರು ಎಚ್ಎಎಲ್‌ನಲ್ಲಿ ಯುದ್ಧ ವಿಮಾನ ಹಾರಾಟ ಮಾಡುವಾಗ ಕೇಳಿಬಂದ ಶಬ್ದವಾಗಿರಬಹುದೆಂದು ಭಾವಿಸಿದರು. ಇನ್ನೂ ಕೆಲವರು ಬಾಂಬ್‌ ಸ್ಪೋಟ‌ ಸಂಭವಿಸಿದ ಶಬ್ದದಂತಿತ್ತು ಎಂದು ಹೇಳಿದರೆ, ಗ್ಯಾಸ್‌ ಸಿಲಿಂಡರ್‌ ಸ್ಫೋಟದ ಮಾದರಿಯಲ್ಲಿ ಕೇಳಿಸಿದೆ ಎಂದೂ ಕೆಲವರು ಅನುಭವ ಹಂಚಿಕೊಂಡರು.

ಈ ವೇಳೆ ಪ್ರತಿಕ್ರಿಯಿಸಿದ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್‌, ‘ಏನಿದು ಶಬ್ದ, ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅನಾಹತು ಸಂಭವಿಸಿದ ಮಾಹಿತಿ ಇಲ್ಲ. ಎಚ್‌ಎಎಲ್‌ ಮತ್ತು ಐಎಎಫ್‌ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ, ‘ನಗರದಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಭೂಕಂಪನ ಮಾಪನ ಕೇಂದ್ರಗಳಲ್ಲಿ ಈ ಬಗ್ಗೆ ದಾಖಲಾಗಿಲ್ಲ’ ಎಂದರು.

ಐಎಎಫ್ ತರಬೇತಿ ಕಮಾಂಡ್‌ನ ಸ್ಪಷನೆ: ಸಂಜೆ ಈ ಬಗ್ಗೆ ಪ್ರತಿಕ್ರಿಯಿಸಿದ ವಾಯುಪಡೆಯ ತರಬೇತಿ ಕಮಾಂಡ್‌ನ ಕೇಂದ್ರ ಕಚೇರಿ, ‘ಸದ್ದು ಕೇಳಿಸಿದ ಪ್ರದೇಶದಲ್ಲಿ ಭಾರತೀಯ ವಾಯಪಡೆಯ ತರಬೇತಿ ಕಮಾಂಡ್‌ನ ಯಾವುದೇ ವಿಮಾನ ಹಾರಾಟ ನಡೆಸುವುದಿಲ್ಲ. ಆದರೂ, ಏರ್‌ಕ್ರಾಫ್ಟ್‌ ಆ್ಯಂಡ್‌ ಸಿಸ್ಟಮ್ಸ್‌ ಟೆಸ್ಟಿಂಗ್‌ ಎಸ್ಟಾಬ್ಲಿಷಮೆಂಟ್‌' ಕೇಂದ್ರ (ಎಎಸ್‌ಟಿಇ) ಮತ್ತು ಎಚ್ಎಎಲ್‌ ಪ್ರಾಯೋಗಿಕವಾಗಿ ಹಾರಾಟ ನಡೆಸುತ್ತವೆ ಮತ್ತು ಅಗತ್ಯಬಿದ್ದರೆ ಸೂಪರ್‌ ಸಾನಿಕ್‌ (ಶಬ್ದಕ್ಕಿಂತಲೂ ಹೆಚ್ಚು ವೇಗ) ಆಗಿ ಹಾರಾಟ ನಡೆಸುತ್ತವೆ. ಆದರೆ, ನಗರ ಪ್ರದೇಶಕ್ಕಿಂತ ಹೊರಗೆ ನಿರ್ದಿಷ್ಟ ವಲಯದಲ್ಲಿ ಈ ಹಾರಾಟ ನಡೆಸುತ್ತವೆ’ ಎಂದು ಸ್ಪಷ್ಟನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT