ಪ್ರಿಯಕರನ ಕತ್ತು ಬಿಗಿದು ಕೊಂದಳು, ಕೆಲಸಕ್ಕೆ ಹೋಗಬೇಡ ಎಂದಿದ್ದಕ್ಕೆ ಕೃತ್ಯ

7
ಆರೋಪಿ ಬಂಧನ

ಪ್ರಿಯಕರನ ಕತ್ತು ಬಿಗಿದು ಕೊಂದಳು, ಕೆಲಸಕ್ಕೆ ಹೋಗಬೇಡ ಎಂದಿದ್ದಕ್ಕೆ ಕೃತ್ಯ

Published:
Updated:

ಬೆಂಗಳೂರು: ಕೆಲಸಕ್ಕೆ ಹೋಗಬೇಡವೆಂದು ಹೇಳಿ ಜಗಳ ತೆಗೆದಿದ್ದ ಪ್ರಿಯಕರನನ್ನೇ ಮಹಿಳೆಯೊಬ್ಬರು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹದೇವಪುರದಲ್ಲಿ ಬುಧವಾರ ನಡೆದಿದೆ.

ತ್ರಿಪುರಾದ ರೂಸನ್ ಅಲಿ (22) ಕೊಲೆಯಾದವರು. ಆರೋಪಿ ಆರ್.ಕೆ. ರುಮಿಳಾದೇವಿಯನ್ನು ಸೆರೆ ಹಿಡಿದಿರುವ ಮಹದೇವಪುರ ಠಾಣೆ ಪೊಲೀಸರು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

‘ಮಣಿಪುರದ ರುಮಿಳಾದೇವಿ ಹಾಗೂ ಆಕೆಯ ಪತಿ ಕೈದೂಮ್, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಸಿಂಗಯ್ಯಪಾಳ್ಯದ 2ನೇ ಮುಖ್ಯರಸ್ತೆಯಲ್ಲಿರುವ ಮುನಿವೆಂಕಟಪ್ಪ ಕಟ್ಟಡದ ಮೊದಲ ಮಹಡಿಯ ಮನೆಯಲ್ಲಿ ದಂಪತಿ ವಾಸವಿದ್ದರು. ಕೈದೂಮ್, ಸೆಕ್ಯುರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದರು. ರುಮಿಳಾದೇವಿ, ಫಿನಿಕ್ಸ್ ಮಾಲ್‌ನ ಪಾಪ್‌ಕಾರ್ನ್‌ ಮಾರಾಟ ಮಳಿಗೆಯಲ್ಲಿ ಕೆಲಸಕ್ಕಿದ್ದಳು’ ಎಂದು ಪೊಲೀಸರು ಹೇಳಿದರು.

‘ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ರೂಸನ್ ಅಲಿಗೆ ಎರಡು ವರ್ಷಗಳ ಹಿಂದೆ ರುಮಿಳಾದೇವಿಯ ಪರಿಚಯವಾಗಿತ್ತು. ಅವರಿಬ್ಬರ ನಡುವೆ ಸಲುಗೆ ಬೆಳೆದು, ಅಕ್ರಮ ಸಂಬಂಧ ಏರ್ಪಟ್ಟಿತ್ತು. ಪತಿಯು ಕೆಲಸಕ್ಕೆ ಹೋದ ವೇಳೆಯಲ್ಲಿ ಆರೋಪಿ, ರೂಸನ್‌ ಅಲಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಈ ಸಂಬಂಧ ಅಕ್ಕ–ಪಕ್ಕದ ಮನೆಯವರು ಹೇಳಿಕೆ ನೀಡಿದ್ದಾರೆ’ ಎಂದರು.

‘ಬುಧವಾರ ಬೆಳಿಗ್ಗೆಯೂ ರೂಸನ್‌ ಅಲಿ, ಆರೋಪಿಯ ಮನೆಗೆ ಬಂದಿದ್ದರು. ‘ನೀನು ಪಾಪ್‌ಕಾರ್ನ್‌ ಮಾರಾಟ ಮಳಿಗೆಗೆ ಕೆಲಸಕ್ಕೆ ಹೋಗಬೇಡ. ಮನೆಯಲ್ಲೇ ಇರು’ ಎಂದು ಅವರು ಹೇಳಿದ್ದರು. ಅದಕ್ಕೆ ಒಪ್ಪದ ರುಮಿಳಾದೇವಿ, ‘ಗಂಡ ಹಾಗೂ ನಾನು, ಇಬ್ಬರೂ ದುಡಿದರೂ ಜೀವನಕ್ಕೆ ಸಾಕಾಗುತ್ತಿಲ್ಲ. ನನ್ನ ಗಂಡನೇ ನನಗೆ ಕೆಲಸಕ್ಕೆ ಹೋಗಬೇಡ ಎಂದು ಹೇಳುವುದಿಲ್ಲ. ಆ ರೀತಿ ನೀನು ಏಕೆ ಹೇಳುತ್ತಿಯಾ? ನಾನು ಕೆಲಸ ಬಿಟ್ಟರೆ, ಪ್ರತಿ ತಿಂಗಳು ಹಣ ಯಾರು ಕೊಡುತ್ತಾರೆ. ನೀನು ಕೊಡುತ್ತೀಯಾ’ ಎಂದು ಕೇಳಿದ್ದಳು.’

‘ನೀನು ಕೆಲಸಕ್ಕೆ ಹೋದರೆ, ಅಲ್ಲಿಯ ಹುಡುಗರ ಜೊತೆ ಮಾತಾಡುತ್ತಿಯಾ. ಅದು ಸರಿಯಲ್ಲ. ಜೊತೆಗೆ, ಕೆಲಸ ಅಂತ ಹೇಳಿ ನನಗೂ ಸರಿಯಾಗಿ ಭೇಟಿ ಆಗುತ್ತಿಲ್ಲ. ಹೀಗಾಗಿ ಕೆಲಸ ಬಿಡು. ಇಲ್ಲದಿದ್ದರೆ ನೋಡು...’ ಎಂದು ರೂಸನ್ ಬೆದರಿಸಿದ್ದರು. ಆಗ, ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು’ ಎಂದು ಪೊಲೀಸರು ವಿವರಿಸಿದರು.

‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ರೂಸನ್, ಆಕೆಗೆ ಹೊಡೆಯಲು ಹೋಗಿದ್ದ. ಪ್ರತಿರೋಧ ತೋರಿದ ಆಕೆ ತನ್ನ ವೇಲ್‌ನಿಂದಲೇ ಅವರ ಕುತ್ತಿಗೆಗೆ ಬಿಗಿದಿದ್ದಳು. ಕಿರುಚಾಡಲಾರಂಭಿಸಿದ್ದ ರೂಸನ್, ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಮೃತಪಟ್ಟರು. ಈ ಘಟನೆ ಬಗ್ಗೆ ಆರೋಪಿಯೇ ತಪ್ಪೊಪ್ಪಿಗೆ ನೀಡಿದ್ದಾಳೆ’ ಎಂದು ಹೇಳಿದರು.

‘ಕಿರುಚಾಟ ಕೇಳಿ ಸ್ಥಳೀಯರು ಮನೆಯತ್ತ ಬರುತ್ತಿದ್ದಂತೆ ಆರೋಪಿ, ಮನೆಯಿಂದ ಹೊರಗೆ ಬಂದು ಓಡಿಹೋದಳು. ಅನುಮಾನಗೊಂಡ ಸ್ಥಳೀಯರು, ಮನೆಯೊಳಗೆ ಹೋಗಿ ನೋಡಿದಾಗಲೇ ಶವ ಕಂಡಿತ್ತು. ಅವರೇ ಠಾಣೆಗೂ ಮಾಹಿತಿ ನೀಡಿದ್ದರು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ವಿವರಿಸಿದರು.

ಕೊಲೆ ಮಾಡಲು ಬಂದಿದ್ದಕ್ಕೆ ಕೃತ್ಯ

‘ಕೆಲಸಕ್ಕೆ ಹೋಗುವುದು, ಬಿಡುವುದು ನನ್ನಿಷ್ಟ ಎಂದಿದ್ದೆ. ಅಷ್ಟಕ್ಕೆ ರೂಸನ್, ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ. ಅದರಿಂದಾಗಿ ನಾನೇ ಆತನ ಕತ್ತು ಹಿಸುಕಿದೆ’ ಎಂದು ಪೊಲೀಸರಿಗೆ ಆರೋಪಿ ರುಮಿಳಾದೇವಿ ಹೇಳಿಕೆ ನೀಡಿದ್ದಾಳೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !