ಗುರುವಾರ , ನವೆಂಬರ್ 21, 2019
20 °C
ಎಂ–ಸ್ಯಾಂಡ್, ಜಲ್ಲಿ ಸಾಗಿಸುವ ಲಾರಿ, ಟಿಪ್ಪರ್‌ಗಳು

ನಾಗರಿಕರು, ವಾಹನ ಸವಾರರಿಗೆ ಕಿರಿಕಿರಿ

Published:
Updated:
Prajavani

ದಾಬಸ್ ಪೇಟೆ: ಎಂ–ಸ್ಯಾಂಡ್‌ ಹಾಗೂ ಜಲ್ಲಿಕಲ್ಲು ಹೊತ್ತ ವಾಹನಗಳ ಸಂಚಾರದಿಂದ ಸ್ಥಳೀಯರು ಹಾಗೂ ಹಿಂಬದಿ ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ನರಸೀಪುರ ಪಂಚಾಯಿತಿ ಮಾಕೇನಹಳ್ಳಿ ಗ್ರಾಮದ ಗಡಿಗೆ ಹೊಂದಿಕೊಂಡಂತೆ ಇರುವ ಸುಮಾರು 429.19 ಎಕರೆ ಗೋಮಾಳದಲ್ಲಿ ಪರವಾನಗಿ ಪಡೆದ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಉತ್ಪತ್ತಿಯಾಗುವ ಕಲ್ಲಿನ ಪುಡಿ ಹಾಗೂ ಜಲ್ಲಿ ಕಲ್ಲುಗಳನ್ನು ಟಿಪ್ಪರ್‌, ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಮೇಲು ಹೊದಿಕೆ ಹಾಕದೆ ಸಾಗಿಸಲಾಗುತ್ತಿದೆ. ಕೆಲವರು ಕಾಟಾಚಾರಕ್ಕೆ ಹಾಕಿಕೊಂಡು ಹೋಗುತ್ತಿದ್ದಾರೆ.

ಹೊದಿಕೆ ಹಾಕದೆ ಸಂಚರಿಸುವುದರಿಂದ ಹಿಂಬದಿ ಸವಾರರು ಹಾಗೂ ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ. ಬ್ರೇಕ್ ಹಾಕಿದಾಗ ಹಿಂಬದಿ ಸವಾರರ ಮೇಲೆ ದೂಳು ಹಾಗೂ ಕಲ್ಲುಗಳು ಬೀಳುತ್ತಿವೆ. ಇನ್ನು ಖಾಲಿ ಲಾರಿ/ಟಿಪ್ಪರ್‌ಗಳು ವೇಗವಾಗಿ ಸಂಚರಿಸುತ್ತವೆ. ಇದು ಇತರ ವಾಹನಗಳ ಮುಕ್ತ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ ದ್ವಿಚಕ್ರ ವಾಹನ ಸವಾರರು.

ಟಿಪ್ಪರ್‌ ಮೂಲಕ ಜಲ್ಲಿಕಲ್ಲು, ಕಲ್ಲಿನ ಪುಡಿಯನ್ನು ಕೊರಟಗೆರೆ ರಸ್ತೆ ಮೂಲಕ ಮತ್ತು ಗ್ರಾಮೀಣ ರಸ್ತೆಗಳಿಂದ ಸಾಗಿ ರಾಷ್ಟ್ರೀಯ ಹೆದ್ದಾರಿಗಳಾದ 4 ಮತ್ತು 207 ರ ಮೂಲಕ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಸಾಗಣೆ ಮಾಡುತ್ತಿದ್ದಾರೆ. ದಾಬಸ್‌ಪೇಟೆ ಠಾಣೆ ಹಾಗೂ ನಾಡಕಚೇರಿ ಎದುರಿಗೆ ಸಾಗಣೆ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಹೀಗಾದರೆ ಸಮಸ್ಯೆ ಪರಿಹಾರ ಯಾರ ಹೊಣೆ ಎಂಬುದು ಸ್ಥಳೀಯರ ಪ್ರಶ್ನೆ.

ಸಾರಿಗೆ ನಿಯಮದ ಪ್ರಕಾರ ಒಂದು ಟಿಪ್ಪರ್‌, ಲಾರಿಗಳಿಗೆ ಇಂತಿಷ್ಟು ಟನ್ ಎಂ ಸ್ಯಾಂಡ್ ತುಂಬಿ ಸಾಗಿಸಬೇಕು. ಆದರೆ, ಲಾರಿ ಹಾಗೂ ಟಿಪ್ಪರ್‌ಗೆ ಹೆಚ್ಚು ಟನ್ ತುಂಬಿ ಸಾಗಿಸಲಾಗುತ್ತಿದೆ. ನಿಯಮ ಮೀರಿ ಸಾಗಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.

ಪರಿಸರಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮಾರಕವಾಗಿರುವ ಗಣಿಗಾರಿಕೆಯನ್ನು ಇಲ್ಲಿಂದ ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಕ್ರಮಕ್ಕೆ ಒತ್ತಾಯ: ರಸ್ತೆಯಲ್ಲಿ ಸಂಚರಿಸುವ ಎಂ. ಸ್ಯಾಂಡ್ ಹೊತ್ತ ವಾಹನಗಳ ದೂಳು ಪಾದಚಾರಿಗಳು ಮತ್ತು ಹಿಂಬದಿ ಸವಾರರ ಮೇಲೆ ಹಾರುತ್ತದೆ. ಜಲ್ಲಿಕಲ್ಲು ಬೀಳುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)