ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುತ್ತಿದೆ ರಾಜಕಾರಣದ ನೈತಿಕ ಮೌಲ್ಯ: ಎಂ.ವೆಂಕಯ್ಯ ನಾಯ್ಡು

ತೆಲುಗು ವಿಜ್ಞಾನ ಸಮಿತಿಯಲ್ಲಿ ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
Last Updated 10 ನವೆಂಬರ್ 2022, 20:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾರಣದಲ್ಲಿ ಇಂದು ನೈತಿಕ ಮೌಲ್ಯ ಕುಸಿಯುತ್ತಿದೆ. ಜಾತಿ, ಅಪರಾಧ, ಹಣವೇ ಪ್ರಾಧಾನ್ಯ ಪಡೆಯುತ್ತಿದೆ ಎಂದು ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಳವಳ ವ್ಯಕ್ತಪಡಿಸಿದರು.

ನಗರದ ತೆಲುಗು ವಿಜ್ಞಾನ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಸಮಿತಿಯ 70ನೇ ಸಂಸ್ಥಾಪನಾ ದಿನಾಚರಣೆ, ಅಲ್ಲೂರಿ ಸತ್ಯನಾರಾಯಣ ರಾಜು ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಜ್ಜನಿಕೆ, ನಡೆ, ನುಡಿ, ಸಂಸ್ಕೃತಿ ರಾಜಕಾರಣದಲ್ಲಿ ಹಿಂದಿನಿಂದಲೂ ಹಾಸುಹೊಕ್ಕಾಗಿದ್ದವು. ಇಂದು ಮೌಲ್ಯಗಳು ನಿಧಾನವಾಗಿ ಮಾಯವಾಗುತ್ತಿವೆ. ಭಾರತೀಯ ಸಂಸ್ಕೃತಿಯಿಂದ ರಾಜಕೀಯ ಕ್ಷೇತ್ರ ವಿಮುಖವಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಜನಪ್ರತಿನಿಧಿಗಳೂ ಮಾತೃಭಾಷೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಹಿಂಜರಿಕೆ ಇರಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು, ತಮ್ಮದೇ ಭಾಷೆಯಲ್ಲಿ ವ್ಯವಹರಿಸುವುದು, ವಿಷಯ ಮಂಡನೆ ಮಾಡುವುದು ಪರಿಣಾಮಕಾರಿಯಾಗಿರುತ್ತದೆ. ಇಂಗ್ಲಿಷ್‌, ಹಿಂದಿ ಮೋಹ ತೊರೆಯಬೇಕು. ಅಮ್ಮ ಎಂದು ನಮ್ಮದೇ ಭಾಷೆಯಲ್ಲಿ ಎದೆಯಾಳದಿಂದ ಹೇಳುವುದಕ್ಕೂ, ಮಮ್ಮಿ ಎನ್ನುವುದಕ್ಕೂ ಭಾರಿ ವ್ಯತ್ಯಾಸವಿದೆ ಎಂದು ವಿವರಿಸಿದರು.

ಭಾರತೀಯ ಸಂಸ್ಕೃತಿ, ವಿಚಾರಗಳು, ಆಹಾರ ಪದ್ಧತಿ ಶ್ರೇಷ್ಠವಾಗಿವೆ. ಕೋಳಿ ಸಾರು ಮುದ್ದೆಯ ಮುಂದೆ ಪಿಜ್ಜಾ, ಬರ್ಗರ್ ಎಂದಿಗೂ ಉತ್ತಮ ಆಹಾರವಾಗಲು ಸಾಧ್ಯವಿಲ್ಲ. ಉಡುಗೆ, ತೊಡುಗೆಯೂ ಹಾಗೆಯೇ. ತಾವು ಉಪ ರಾಷ್ಟ್ರ
ಪತಿಯಾದಾಗಲೂ ಸಾಂಪ್ರದಾಯಿಕ ಉಡುಗೆ ಬದಲಿಸಲಿಲ್ಲ. ಎಲ್ಲಿ ಹೋದರೂ ವಿಳಾಸವಷ್ಟೇ ಬದಲಾಗುತ್ತಿತ್ತು ಎಂದರು.

ಶಾಸಕ ಕೆ.ಆರ್‌.ರಮೇಶ್‌ಕುಮಾರ್, ಕನ್ನಡ ಹಾಗೂ ತೆಲುಗು ಅವಳಿ ಭಾಷೆಗಳು, ಎರಡೂ ಭಾಷೆಗಳ ಜನರ ಬಾಂಧವ್ಯವೂ ಮಧುರವಾಗಿದೆ. ವೆಂಕಯ್ಯ ನಾಯ್ಡು ಸರಳ, ಸಜ್ಜನಿಕೆಯ ವ್ಯಕ್ತಿ ಎಂದು ಬಣ್ಣಿಸಿದರು.

ಸಮಿತಿ ಅಧ್ಯಕ್ಷ ಎ. ರಾಧಾಕೃಷ್ಣ ರಾಜು,ಉಪಾಧ್ಯಕ್ಷ ಗಂಗರಾಜು, ತೆಲುಗು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಮುನಿಸ್ವಾಮಿ ರಾಜು, ಕಾರ್ಯದರ್ಶಿ ಇಡಮಕಂತಿ ಲಕ್ಷ್ಮಿ ರೆಡ್ಡಿ, ಸಾಂಸ್ಕೃತಿಕ ಕಾರ್ಯದರ್ಶಿ ರಶ್ಮಿ ಶರತ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT