ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಲಿಂಬಾವಳಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಪ್ರಯತ್ನ

Last Updated 9 ಫೆಬ್ರುವರಿ 2023, 21:19 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಾಧಿಸಿರುವ ಬಿಗಿ ಹಿಡಿತ ಸಡಿಲಗೊಳಿಸಲು ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದೆ. ಹೇಗಾದರೂ ಮಾಡಿ ಈ ಬಾರಿ ಗೆಲುವು ಗಿಟ್ಟಿಸಲೇಬೇಕು ಎಂಬ ಹಟಕ್ಕೆ ಕೈ ನಾಯಕರು ಬಿದ್ದಿದ್ದಾರೆ.

ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ 12 ಮಂದಿ ಇದ್ದು, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಅವರನ್ನು ಪಕ್ಷಕ್ಕೆ ಕರೆತಂದು ಲಿಂಬಾವಳಿ ಮಣಿಸುವ ತಂತ್ರವನ್ನೂ ಕಾಂಗ್ರೆಸ್ ಹೆಣೆದಿದೆ.

ಹಳ್ಳಿಗಳು ಅತ್ಯಂತ ವೇಗವಾಗಿ ಹೈಟೆಕ್ ಸಿಟಿಯಾಗಿ ಹೊರಳಿದ ಹೊರ ವಲಯದಲ್ಲಿ ಚಾಚಿಕೊಂಡಿರುವ ಮಹದೇವಪುರ ವಿಧಾನಸಭಾ ಕ್ಷೇತ್ರ, ವಿಸ್ತೀರ್ಣದ ದೃಷ್ಟಿಯಿಂದಲೂ ದೊಡ್ಡದು. ಬಹುಪಾಲು ಐ.ಟಿ ಕಂಪನಿಗಳು ಇದೇ ಕ್ಷೇತ್ರದಲ್ಲಿ ನೆಲೆಸಿವೆ. ಯಲಹಂಕಕ್ಕೆ ಹೊಂದಿಕೊಂಡ ಪ್ರದೇಶದಿಂದ ಆರಂಭವಾಗಿ ಸರ್ಜಾಪುರ ರಸ್ತೆ ತನಕ ವಿಸ್ತರಿಸಿಕೊಂಡಿದೆ. ಗರುಡಾಚಾರ್ ಪಾಳ್ಯ, ಹೂಡಿ, ಕಾಡಗೋಡಿ, ವೈಟ್‌ಫೀಲ್ಡ್‌, ಹಗದೂರು, ದೊಡ್ಡನೆಕ್ಕುಂದಿ, ಮಾರತಹಳ್ಳಿ, ವರ್ತೂರು, ದೊಡ್ಡಕನ್ನಲಿ, ಬೆಳ್ಳಂದೂರು ಸುತ್ತಮುತ್ತಲ ಪ್ರದೇಶವನ್ನು ಒಳಗೊಂಡಿದೆ. ನಗರದ ಹೊರವಲಯದ 11 ಗ್ರಾಮ ಪಂಚಾಯಿತಿಗಳೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಕ್ಷೇತ್ರ ಇದಾಗಿದ್ದು, 5.72 ಲಕ್ಷ ಮತದಾರರಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದ ಪ್ರದೇಶಗಳು 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಮಹದೇಪುರ ಕ್ಷೇತ್ರದಲ್ಲಿ ಸೇರಿಕೊಂಡವು. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ ನಡೆದಿರುವ ಮೂರು ಚುನಾವಣೆಗಳಲ್ಲಿಯೂ ಬಿಜೆಪಿಯ ಅರವಿಂದ ಲಿಂಬಾವಳಿ ಅವರೇ ಜಯ ಸಾಧಿಸಿದ್ದಾರೆ. ಮೂರು ಬಾರಿಯೂ ಕಾಂಗ್ರೆಸ್‌ ಪೈಪೋಟಿ ನೀಡಿದೆ. ಕಾಂಗ್ರೆಸ್‌ನಿಂದ 2008ರಲ್ಲಿ ಬಿ.ಶಿವಣ್ಣ ಸ್ಪರ್ಧಿಸಿದ್ದರೆ, 2013 ಮತ್ತು 2018ರಲ್ಲಿ ಎ.ಸಿ.ಶ್ರೀನಿವಾಸ್ ಪೈಪೋಟಿ ನೀಡಿದ್ದರು. ಜೆಡಿಎಸ್ ಸ್ಪರ್ಧೆ ಮಾಡಿದ್ದರೂ ಹೆಚ್ಚು ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ.

ಐ.ಟಿ ಕಂಪನಿಗಳ ತವರು ಎನಿಸಿಕೊಂಡಿರುವ ಕ್ಷೇತ್ರದ ಜನ ಸಮಸ್ಯೆಗಳನ್ನೇ ಹೊದ್ದು ಮಲಗಿದ್ದಾರೆ. ಸಂಚಾರ ದಟ್ಟಣೆ ಇಲ್ಲಿನ ಜನರನ್ನು ಕಾಡುತ್ತಿದೆ. ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕಿಸುವ ಕಾಮಗಾರಿ ಈಗ ಅಂತಿಮ ಹಂತಕ್ಕೆ ಬಂದಿದೆ. ಸಿಲ್ಕ್‌ಬೋರ್ಡ್‌ನಿಂದ ಹೊರ ವರ್ತುಲ ರಸ್ತೆ, ಕೆ.ಆರ್.ಪುರ, ಹೆಬ್ಬಾಳ ಮೂಲಕ ವಿಮಾನ ನಿಲ್ದಾಣ ತಲುಪುವ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಈ ವರ್ಷದ ಮಳೆ ಈ ಕ್ಷೇತ್ರವನ್ನು ಇನ್ನಿಲ್ಲದೆ ಕಾಡಿತು. ಹೊರ ವರ್ತುಲ ರಸ್ತೆಯಲ್ಲೇ ನೀರು ಹರಿದಿತ್ತು. ಐ.ಟಿ ಕಂಪನಿಗಳು ಮತ್ತು ಪ್ರತಿಷ್ಠಿತ ಬಡಾವಣೆಗಳಿಗೂ
ನೀರು ನುಗ್ಗಿತ್ತು. ಸಂಪರ್ಕ ರಸ್ತೆಗಳು ಅಭಿವೃದ್ಧಿ ಕಾಣಬೇಕಿದೆ.

ಈ ಎಲ್ಲಾ ಸಮಸ್ಯೆಗಳ ನಡುವೆ ವಿಧಾನಸಭೆ ಚುನಾವಣೆ ಎದುರಾಗಿದ್ದು, ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ. ಬಿಜೆಪಿಯಿಂದ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ದೊರಕುವ ಸಾಧ್ಯತೆ ಇದೆ. ಲಿಂಬಾವಳಿ ಅವರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಬಿಜೆಪಿ ಆಲೋಚನೆ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಳುಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಕೂಡ ಕ್ಷೇತ್ರದಲ್ಲಿ ಓಡಾಡುತ್ತಿದ್ದು, ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆಗೆ ಪುಷ್ಟಿ ನೀಡಿದೆ.

ಕಾಂಗ್ರೆಸ್‌ನಿಂದ ವೆಂಕಟರಾಮಯ್ಯ, ವೈ.ವಿನೋದ್, ಅನಂದಕುಮಾರ್, ಎಂ.ಕಮಲಾಕ್ಷಿ ರಾಜಣ್ಣ, ಎನ್.ವೆಂಕಟೇಶ್, ಎಂ.ರಾಮಕೃಷ್ಣಪ್ಪ, ಟಿ.ನಾಗೇಶ್, ಪುಷ್ಪಾ ಅಮರನಾಥ್, ಎ.ಮುನಿಯಪ್ಪ, ಜಿ.ವಿ.ಕೃಷ್ಣಪ್ರಸಾದ್, ಟಿ.ಜಯಪ್ಪ, ಸುಜಾತಾ ನಾಗೇಶ್ ಅವರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಪಕ್ಷದ ಕ್ಷೇತ್ರ ಘಟಕದ ಅಧ್ಯಕ್ಷ ಮುನಿವೆಂಕಟಪ್ಪ, ಆಮ್ ಆದ್ಮಿ ಪಕ್ಷದಿಂದ ಅಶೋಕ್ ಮೃತ್ಯುಂಜಯ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT