ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಅರ್ಹತೆ ಇಲ್ಲದವರಿಗೆ ಟೆಂಡರ್‌–ಮತ್ತೊಂದು ಹಗರಣ?

ಷರತ್ತು ಕಡೆಗಣಿಸಿ ಆರು ಪ್ಯಾಕೇಜ್‌ಗಳ ಕಾಮಗಾರಿ ಗುತ್ತಿಗೆ ನೀಡಲು ಸಿದ್ಧತೆ?
Last Updated 27 ಆಗಸ್ಟ್ 2020, 16:11 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಮಹದೇವಪುರ ವಲಯದಲ್ಲಿ ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ಟೆಂಡರ್‌ ಷರತ್ತಿನ ಪ್ರಕಾರ ಅರ್ಹತೆ ಹೊಂದಿಲ್ಲದವರಿಗೆ ಗುತ್ತಿಗೆ ನೀಡಲು ಸಿದ್ಧತೆ ನಡೆದಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ರಾಕೇಶ್‌ ಸಿಂಗ್‌ ಅವರಿಗೆ ವಕೀಲ ಕೆ.ವಿ.ವೆಂಕಟೇಶ್‌ ದೂರು ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆಯಡಿ ರಾಜ್ಯ ಸರ್ಕಾರವು ನಗರದ ಸಮಗ್ರ ಅಭಿವೃದ್ಧಿಗೆ ₹ 8,200 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಯೋಜನೆಯಡಿ ಮಹದೇವಪುರ ವಲಯದಲ್ಲಿ ₹ 206.49 ಕೋಟಿಗಳ ವೆಚ್ಚದಲ್ಲಿ 09 ಪ್ಯಾಕೇಜ್‌ಗಳಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್‌ ಆಹ್ವಾನಿಸಲಾಗಿತ್ತು. ಇವು ಪರಿಶೀಲನೆ ಹ೦ತದಲ್ಲಿವೆ.

‘ಪ್ಯಾಕೇಜ್‌-13ರ ಕಾಮಗಾರಿಯನ್ನು ಗುತ್ತಿಗೆದಾರ ಅಬ್ದುಲ್‌ ಕರೀ೦ ಆಜಾದ್‌ಗೆ, ಪ್ಯಾಕೇಜ್‌-14ರ ಕಾಮಗಾರಿಯನ್ನು ಗುತ್ತಿಗೆದಾರ ಕೆ.ಜೆ. ವಿಶ್ವನಾಥ್‌ಗೆ ಹಾಗೂಪ್ಯಾಕೇಜ್‌-11ರ ಕಾಮಗಾರಿಯನ್ನು ಎ.ಮೋಹನ್‌ ನರಸಿಂಹಲು ಅವರಿಗೆ ವಹಿಸಲು ಸಿದ್ಧತೆ ನಡೆದಿದೆ. ಕಾಮಗಾರಿ ನಡೆಸುವವರು ಟೆಂಡರ್ ಷರತ್ತುಗಳ ಪ್ರಕಾರ ಮಹದೇವಪುರದ 40 ಕಿ.ಮೀ ವ್ಯಾಪ್ತಿಯಲ್ಲಿ ಹಾಟ್‌ ಮಿಕ್ಸ್‌ ಘಟಕವನ್ನು ಹೊಂದಿರಬೇಕು. ಆದರೆ, ಈ ಮೂವರೂ ಹಾಟ್‌ ಮಿಕ್ಸ್‌ ಘಟಕವನ್ನು ಹೊಂದಿಲ್ಲ’ ಎಂದು ವೆಂಕಟೇಶ್‌ ಆರೋಪಿಸಿದ್ದಾರೆ.

‘ಕೆ.ಜೆ. ವಿಶ್ವನಾಥ್‌ ಅವರು ಈ ಹಿಂದೆ ವಾರ್ಷಿಕ ವಹಿವಾಟಿಗೆ ಸಂಬಂಧಿಸಿ ತಪ್ಪು ಪ್ರಮಾಣಪತ್ರ ನೀಡಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಆರೋಪವನ್ನೂ ಎದುರಿಸುತ್ತಿದ್ದಾರೆ’ ಎಂದು ವೆಂಕಟೇಶ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಪ್ಯಾಕೇಜ್‌-15ರ ಕಾಮಗಾರಿಯನ್ನು ಗುತ್ತಿಗೆದಾರ ಜವಳಿ ಚ೦ದ್ರಣ್ಣ ಪ್ರಕಾಶ್‌ ಅವರಿಗೆ ವಹಿಸಲು ಎ೦ಜಿನಿಯರ್‌ಗಳು ಸಿದ್ಧತೆ ನಡೆಸಿದ್ದಾರೆ. ಇವರು ವಿವಿಧ ಕಾಮಗಾರಿಗೆ ವಿವಿಧ ರೀತಿಯ ವಾರ್ಷಿಕ ವಹಿವಾಟಿನ ಪ್ರಮಾಣಪತ್ರ ನೀಡಿ ಈ ಹಿಂದೆ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ಇವರ ವಾರ್ಷಿಕ ವಹಿವಾಟಿನ ಪ್ರಮಾಣಪತ್ರಕ್ಕೂ ಆದಾಯ ತೆರಿಗೆ ಪ್ರಮಾಣಪತ್ರದಲ್ಲಿರುವ ಮಾಹಿತಿಗೂ ತಾಳೆ ಆಗುತ್ತಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ಪ್ಯಾಕೇಜ್‌-9 ಮತ್ತು ಪ್ಯಾಕೇಜ್‌-10ರ ಕಾಮಗಾರಿಗಳನ್ನು ಗುತ್ತಿಗೆದಾರ ಸಿ.ಜಿ. ಚ೦ದ್ರಪ್ಪ ಅವರಿಗೆ ನೀಡಲು ಎ೦ಜಿನಿಯರ್‌ಗಳು ಕಡತ ಸಿದ್ಧಪಡಿಸಿದ್ದಾರೆ. ಇವರು ಈ ಹಿಂದೆ,ಗುತ್ತಿಗೆ ಪಡೆಯಲು ವಾರ್ಷಿಕ ವಹಿವಾಟಿನ ನಕಲಿ ಪ್ರಮಾಣಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಪಾಲಿಕೆ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದಾಗಿ ಅಭಿವೃದ್ಧಿಗೊಂಡ ರಸ್ತೆಗಳು ಕೆಲವೇ ತಿಂಗಳುಗಳಲ್ಲಿ ಕಿತ್ತುಹೋಗುತ್ತಿವೆ. ಕಳಪೆ ಕಾಮಗಾರಿಗಳಿಂದಾಗಿ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ. ಮಹದೇವಪುರ ವಲಯದಲ್ಲಿ ಕಳಪೆ ಕಾಮಗಾರಿಗಳಿಂದಾಗಿ ರಸ್ತೆಗಳಲ್ಲಿ ಜನ ಸಂಚರಿಸದಂತಹ ಪರಿಸ್ಥಿತಿ ಇದೆ. ರಸ್ತೆಗಳ ಅವ್ಯವಸ್ಥೆ ಬಗ್ಗೆ ಕಳೆದ ವರ್ಷ ನಡೆದ ಪ್ರತಿಭಟನೆಯಲ್ಲಿ 3 ಸಾವಿರ ಮಂದಿ ಭಾಗವಹಿಸಿದ್ದರು. ಸುಳ್ಳು ದಾಖಲೆ ನೀಡಿದವರಿಗೆ ಗುತ್ತಿಗೆ ವಹಿಸಿದರೆ ಕಾಮಗಾರಿ ಕಳಪೆ ಆಗುವ ಸಾಧ್ಯತೆ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಟೆಂಡರ್‌ ಪ್ರಸ್ತಾವನೆಗಳು ಅನುಮೋದನೆಗಾಗಿ ಬಾಕಿ ಇವೆ. ಹಾಗಾಗಿ ಈ ದೂರಿನ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್‌ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ
‘ಟೆಂಡರ್‌ ಪಡೆಯಲು ಗುತ್ತಿಗೆದಾರರು ಸಲ್ಲಿಸಿರುವ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಸುಳ್ಳು ಲೆಕ್ಕ ಹಾಗೂ ಸುಳ್ಳು ದಾಖಲೆ ನೀಡಿದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಬಾರದು. ಈ ಆರು ಪ್ಯಾಕೇಜ್‌ಗಳ ಕಾಮಗಾರಿಗಳನ್ನು ಮರುಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅನರ್ಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಮುಖ್ಯ ಎಂಜಿನಿಯರ್‌ ವಿರುದ್ಧವೂ ಆರೋಪ’
‘ಬಿಬಿಎಂಫಿಯ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಒಬ್ಬರು ನಿವೃತ್ತಿಗೆ ಕೆಲವೇ ತಿ೦ಗಳುಗಳಿಗೆ ಮುನ್ನ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲು ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಈ ಅಕ್ರಮಕ್ಕೆ ಸಾತ್‌ ನೀಡುತ್ತಿರುವ ಪಾಲಿಕೆ ಎಂಜಿನಿಯರ್‌ಗಳನ್ನೂ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ವೆಂಕಟೇಶ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT