ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಮುಚ್ಚಿದ ವಾರದಲ್ಲೇ ಕಿತ್ತು ಹೋದ ರಸ್ತೆ

ಮಹಾಕವಿ ಕುವೆಂಪು ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರ ಪ್ರಯಾಸ
Last Updated 8 ಅಕ್ಟೋಬರ್ 2021, 18:30 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದಿಂದ ರಾಜಾಜಿನಗರ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಮಹಾಕವಿ ಕುವೆಂಪು ರಸ್ತೆ ಗುಂಡಿಗಳ ಮಯವಾಗಿದ್ದು, ವಾಹನ ಚಾಲನೆ ಮಾಡುವುದೇ ದುಸ್ತರವಾಗಿದೆ.

ಸಂಪಿಗೆ ರಸ್ತೆಯಿಂದ ನವರಂಗ್ ಚಿತ್ರ ಮಂದಿರದ ವೃತ್ತದ ಕಡೆಗೆ ಹೋಗುವ ರಸ್ತೆ ಇದಾಗಿದೆ. ಸಂಪಿಗೆ ರಸ್ತೆಯಿಂದ ಕೆ.ಸಿ. ಜನರಲ್ ಆಸ್ಪತ್ರೆ ತನಕ ಹೊಸದಾಗಿ ಡಾಂಬರ್ ಹಾಕಲಾಗಿದ್ದು, ಅದರಿಂದ ಮುಂದಕ್ಕೆ ನವರಂಗ್ ವೃತ್ತದ ತನಕ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಕೆಲವೆಡೆ ಗುಂಡಿಗಳನ್ನು ಮುಚ್ಚಿದ್ದರೂ ಕೆಲವೇ ದಿನಗಳಲ್ಲಿ ಮತ್ತೆ ಹಾಳಾಗಿದೆ. ಎಂ ಸ್ಯಾಂಡ್ ಮತ್ತು ಜಲ್ಲಿ ಹಾಕಿ ಮುಚ್ಚಿದ್ದ ಗುಂಡಿಗಳು ಮತ್ತೆ ಬಾಯ್ದೆರೆದುಕೊಂಡಿವೆ.

ರೈಲ್ವೆ ಮೇಲ್ಸೇತುವೆ ದಾಟಿ ಇಳಿಜಾರು ಇಳಿಯುತ್ತಿದ್ದಂತೆ ಗುಂಡಿಗಳ ದರ್ಶನವಾಗುತ್ತದೆ. ಸದಾ ಸಂಚಾರ ದಟ್ಟಣೆ ಇರುವ ಈ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿ ಚಾಲನೆ ಮಾಡುವುದೇ ಕಷ್ಟವಾಗಿದೆ. ಹರಿಶ್ಚಂದ್ರ ಘಾಟ್, ದೇವಯ್ಯ ಪಾರ್ಕ್‌, ಮಹಾಕವಿ ಕುವೆಂಪು ರಸ್ತೆ ಮೆಟ್ರೊ ನಿಲ್ದಾಣದ ಬಳಿಯಂತೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.

ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಬಿಸಿಲಾದರೆ ದೂಳು ಕಣ್ಣಿಗೆ ತುಂಬಿಕೊಂಡು ದ್ವಿಚಕ್ರ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ನವರಂಗ್ ವೃತ್ತದಿಂದ ಮಲ್ಲೇಶ್ವರದ ಕಡೆಗೆ ಬರುವ ಮಾರ್ಗದಲ್ಲಿ ಅಷ್ಟಾಗಿ ಗುಂಡಿಗಳಿಲ್ಲ. ಇನ್ನೊಂದು ಬದಿಯಲ್ಲಿ ಮಾತ್ರ ಹೆಚ್ಚಿನ ಗುಂಡಿಗಳಿವೆ.

ಮೆಜೆಸ್ಟಿಕ್‌ನಿಂದ ತುಮಕೂರು ರಸ್ತೆ ಕಡೆಗೆ ಹೋಗುವ ಎಲ್ಲ ಖಾಸಗಿ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅದರಲ್ಲೂ ರಾತ್ರಿ ವೇಳೆ ಈ ಬಸ್‌ಗಳ ಸಂಖ್ಯೆ ಹೆಚ್ಚು. ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಯತ್ನಿಸಿದರೆ ಹಿಂದಿನಿಂದ ವೇಗವಾಗಿ ಬರುವ ಬಸ್‌ಗಳು ಡಿಕ್ಕಿ ಹೊಡೆಯುವ ಸಾಧ್ಯತೆಗಳೇ ಹೆಚ್ಚು. ಬಸ್‌ನ ಹಿಂಬದಿಯಲ್ಲಿ ಹೋದರೆ ದೂಳು ತುಂಬಿಕೊಂಡು ರಸ್ತೆಯೇ ಕಾಣಿಸದೆ ಗುಂಡಿಯಲ್ಲಿ ಬೀಳುವ ಅಪಾಯವೂ ಇದೆ.

ಬೈಕ್ ಸವಾರರು ಆಗಾಗ ಗುಂಡಿಯಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದು, ಕೂಡಲೇ ರಸ್ತೆ ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

15 ದಿನಗಳಲ್ಲಿ ಡಾಂಬರೀಕರಣ

‘ಮಹಾಕವಿ ಕುವೆಂಪು ರಸ್ತೆ ಹಾಳಾಗಿರುವುದು ಗಮನದಲ್ಲಿದ್ದು, 15 ದಿನಗಳಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ (ಪಶ್ಚಿಮ) ಮಾರ್ಕಾಂಡೇಯ ತಿಳಿಸಿದರು.

ತುಮಕೂರು ರಸ್ತೆ ಕಡೆಯಿಂದ ಕಾಮಗಾರಿ ಆರಂಭವಾಗಿದೆ. ರಾಜ್‌ಕುಮಾರ್ ರಸ್ತೆ, ನಂತರ ಮಹಾಕವಿ ಕುವೆಂಪು ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ರಸ್ತೆ ಗುಂಡಿ ಸಮಸ್ಯೆ ಪರಿಹಾರವಾಗಲಿದೆ ಎಂದರು.

ರಸ್ತೆ ಮಧ್ಯದಲ್ಲೇ ಕುಸಿತ

ಒಂದು ಬದಿಯ ರಸ್ತೆ ಮಧ್ಯದಲ್ಲೇ ಭೂಕುಸಿತ ಉಂಟಾಗಿದ್ದು, ದುರಸ್ತಿ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ. ಕಾಮಗಾರಿ ನಿರ್ವಹಿಸಲು ರಸ್ತೆಯ ಒಂದು ಬದಿಯನ್ನು ಶುಕ್ರವಾರ ಬಂದ್ ಮಾಡಲಾಗಿದ್ದು, ವಾಹನ ದಟ್ಟಣೆಗೆ ಕಾರಣವಾಗಿದೆ.

ಜಲಮಂಡಳಿ ಪೈಪ್‌ಲೈನ್ ಹಾದು ಹೋಗಿರುವ ಜಾಗದಲ್ಲಿ ಈ ಕುಸಿತ ಉಂಟಾಗಿದೆ. ಕಾಮಗಾರಿ ನಿರ್ವಹಿಸಿದಾಗ ರಸ್ತೆ ಮರು ನಿರ್ಮಾಣವನ್ನು ಸಮರ್ಪಕವಾಗಿ ಮಾಡದಿರುವ ಕಾರಣ ಕುಸಿತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಕುಸಿತದ ಮಾಹಿತಿ ದೊರೆತ ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್(ರಸ್ತೆ) ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT