ಬೆಂಗಳೂರು: ಬಟ್ಟೆ ಷೋರೂಂನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿ ಅವರನ್ನು ಆಕೆಯ ಪ್ರಿಯಕರ ಒಡಿಶಾದ ಮುಕ್ತಿ ರಂಜನ್ ಎಂಬಾತನೇ ಕೊಲೆ ಮಾಡಿದ್ದಾನೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದ್ದು, ಆತ ಒಡಿಶಾದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
‘ನಗರದ ಮಲ್ಲೇಶ್ವರದ ಬಟ್ಟೆ ಷೋರೂಂವೊಂದರಲ್ಲಿ ಮಹಾಲಕ್ಷ್ಮಿ ಅವರು ಕೆಲಸ ಮಾಡುತ್ತಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್ ರಾಯ್ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸುತ್ತಿದ್ದರು. ಈ ಮಧ್ಯೆ ಮಹಾಲಕ್ಷ್ಮಿ ಬೇರೊಬ್ಬ ಯುವಕನ ಜತೆಯೂ ಆತ್ಮೀಯವಾಗಿದ್ದರು. ಆ ಯುವಕ ಮಹಾಲಕ್ಷ್ಮಿ ಅವರನ್ನು ಕೆಲಸದ ಸ್ಥಳಕ್ಕೆ ಕರೆದೊಯ್ಯುವುದು, ಮನೆಗೆ ವಾಪಸ್ ತಂದು ಬಿಡುವುದು ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದಿದ್ದ ಮುಕ್ತಿ ರಂಜನ್ ಕೊಲೆಗೆ ಸಂಚು ರೂಪಿಸಿ ಮನೆಗೆ ನುಗ್ಗಿ ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿದ್ದ. ನಂತರ, ಹ್ಯಾಕ್‌ಸಾ ಬ್ಲೇಡ್‌ನಿಂದ ದೇಹವನ್ನು 50ಕ್ಕೂ ಹೆಚ್ಚು ತಂಡುಗಳನ್ನಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇಟ್ಟಿದ್ದ. ಆಮೇಲೆ ರೈಲಿನ ಮೂಲಕ ಒಡಿಶಾದ ಭದ್ರಕ್ ಜಿಲ್ಲೆಯ ಭುನಿಪುರಕ್ಕೆ ತೆರಳಿದ್ದ’ ಎಂದು ಮೂಲಗಳು ತಿಳಿಸಿವೆ.
‘ಕೊಲೆ ಮಾಡಿ ಪರಾರಿಯಾಗಿದ್ದವನು ಭುನಿಪುರದ ಮನೆಯಲ್ಲೇ ಇದ್ದ. ಕೃತ್ಯ ಎಸಗಿದ್ದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿರಲಿಲ್ಲ. ಕರ್ನಾಟಕದ ಪೊಲೀಸರು ಹುಡುಕಾಟ ನಡೆಸುತ್ತಿರುವ ಮಾಹಿತಿ ತಿಳಿದು, ಮಂಗಳವಾರ ಮಧ್ಯಾಹ್ನ ಸ್ಮಶಾನಕ್ಕೆ ತೆರಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಧುಸುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿಯನ್ನು ಧುಸುರಿ ಪೊಲೀಸರು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಕ್ತಿ ರಂಜನ್ ಬಳಸುತ್ತಿದ್ದ ಲ್ಯಾಪ್‌ಟಾಪ್ ಜಪ್ತಿ ಮಾಡಿಕೊಳ್ಳಲಾಗಿದೆ. ಅದರಲ್ಲಿ ಕೆಲವು ಫೋಟೊ ಹಾಗೂ ವಿಡಿಯೊಗಳಿವೆ ಎಂದು ಮೂಲಗಳು ತಿಳಿಸಿವೆ.
ಹೆಬ್ಬಗೋಡಿಯಲ್ಲಿ ಸಹೋದರನ ಜತೆ ವಾಸವಾಗಿದ್ದ ಮುಕ್ತಿ ರಂಜನ್ ನಿತ್ಯ ಅಲ್ಲಿಂದಲೇ ಮಲ್ಲೇಶ್ವರದ ಬಟ್ಟೆ ಷೋರೂಂಗೆ ಕೆಲಸಕ್ಕೆ ಬರುತ್ತಿದ್ದ. ಕೊಲೆ ಮಾಡಿದ ಬಳಿಕ ಸಹೋದರನಿಗೆ ಕರೆ ಮಾಡಿ, ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಬಳಿಕ ಮನೆಗೂ ತೆರಳಿ, ಸಹೋದರನ ಜತೆ ಮಾತನಾಡಿ, ಒಡಿಶಾಗೆ ಪರಾರಿಯಾಗಿದ್ದ. ನಂತರ, ಮೊಬೈಲ್ ಫೋನ್ ಅನ್ನು ಸ್ವಿಚ್ ಮಾಡಿಕೊಂಡಿದ್ದ. ಫೋನ್ ಬಳಸದೆ ಒಡಿಶಾದಲ್ಲಿ ಓಡಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಸಹೋದರ ವಶಕ್ಕೆ: ಪ್ರಕರಣದಲ್ಲಿ ಮುಕ್ತಿ ರಂಜನ್ ಕೈವಾಡ ಸ್ಪಷ್ಟವಾಗುತ್ತಿದ್ದಂತೆಯೇ ಆತನ ಸಹೋದರರನ್ನು ವೈಯಾಲಿಕಾವಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿ ಪತ್ತೆಗೆ ಕೇಂದ್ರ ವಿಭಾಗದ ಪೊಲೀಸರ ಆರು ವಿಶೇಷ ತಂಡಗಳನ್ನು ರಚಿಸಿದ್ದರು. ಮೂರು ತಂಡಗಳು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳಿಂದ ಬೀಡುಬಿಟ್ಟು ಹುಡುಕಾಟ ನಡೆಸುತ್ತಿದ್ದವು.
‘ಮದುವೆಗೂ ಮೊದಲು ಮಹಾಲಕ್ಷ್ಮಿ ಅವರು ತಂದೆ–ತಾಯಿ ಜತೆಗೆ ನೆಲಮಂಗಲದಲ್ಲೇ ನೆಲೆಸಿದ್ದರು. ಹೇಮಂತ್‌ದಾಸ್ ಅವರ ಜತೆಗೆ ಆರು ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿತ್ತು. ಪತಿ–ಪತ್ನಿಯರ ನಡುವೆ ವೈಮನಸ್ಸು ಉಂಟಾಗಿ, ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. 2023ರ ಅಕ್ಟೋಬರ್‌ನಲ್ಲಿ ಮಹಾಲಕ್ಷ್ಮಿ ಅವರು ವೈಯಾಲಿಕಾವಲ್‌ನ ಬಸಪ್ಪ ಗಾರ್ಡನ್‌ನ ಪೈಪ್‌ಲೈನ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಹೇಮಂತ್‌ದಾಸ್ ಅವರು ನೆಲಮಂಗಲದಲ್ಲೇ ಮೊಬೈಲ್ ಫೋನ್ ಬಿಡಿಭಾಗಗಳ ಮಾರಾಟ ಮುಂದುವರೆಸಿದ್ದರು. ಮಗುವನ್ನೂ ಹೇಮಂತ್ ಅವರೇ ಸಾಕುತ್ತಿದ್ದರು. ಈ ಮಧ್ಯೆ ಮಹಾಲಕ್ಷ್ಮಿ ಅವರು ಮಲ್ಲೇಶ್ವರದ ಬಟ್ಟೆ ಷೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಆರೋಪಿಯ ಪರಿಚಯವಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಕೃತ್ಯಕ್ಕೆ ಕೆಲವರ ಸಹಕಾರ
ಕೊಲೆಯಾದ ಮಹಾಲಕ್ಷ್ಮಿ ವಾಸಿಸುತ್ತಿದ್ದ ಮನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಆರೋಪಿ ಗುರುತು ಪತ್ತೆಗೆ ಶೋಧ ನಡೆಸಿದ್ದರು. ಆಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿವೆ. ಕೃತ್ಯ ಎಸಗಲು ಆರೋಪಿ ಕೆಲವರ ಸಹಕಾರ ಪಡೆದಿರುವ ಅನುಮಾನವಿದೆ. ಆ ನಿಟ್ಟಿನಲ್ಲೂ ತನಿಖೆ ಮುಂದುವರೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮುಕ್ತಿ ರಂಜನ್
ಸೆ.2ರಂದೇ ಕೊಲೆ
ಸೆ.1ರಂದು ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್ ಕೆಲಸಕ್ಕೆ ಹಾಜರಾಗಿದ್ದರು. ಸೆ.2ರಂದು ಮಹಾಲಕ್ಷ್ಮಿ ವಾರದ ರಜೆ ತೆಗೆದುಕೊಂಡಿದ್ದರು. ಅಂದು ನೆಲಮಂಗಲದಲ್ಲಿರುವ ತಾಯಿ ಮನೆಗೆ ಬರುವುದಾಗಿ ಹೇಳಿದ್ದರು. ಅಲ್ಲಿಗೆ ಹೋಗಿರಲಿಲ್ಲ. ಅಂದು ರಾತ್ರಿಯಿಂದಲೇ ಮಹಾಲಕ್ಷ್ಮಿ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಅಂದೇ ದಿನ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.