ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ವಿಧಾನಗಳಲ್ಲಿ ಅಪಾಯಕಾರಿ ಮಾರ್ಪಾಡು

ವಿವಿಧ ದೇಶಗಳ ವಾಯುಸೇನೆ ಮುಖ್ಯಸ್ಥರ ಸಮ್ಮೇಳನದಲ್ಲಿ ಭದೌರಿಯಾ ಕಳವಳ
Last Updated 3 ಫೆಬ್ರುವರಿ 2021, 19:40 IST
ಅಕ್ಷರ ಗಾತ್ರ

ಬೆಂಗಳೂರು: ಯುದ್ಧ ಕಾರ್ಯತಂತ್ರಗಳ ದೃಷ್ಟಿಯಲ್ಲಿಭಾರತೀಯ ವಾಯುಪಡೆಯು ಹಿಂದೂ ಮಹಾಸಾಗರ ಪ್ರದೇಶದ ಮಹತ್ವದ ಆಸ್ತಿ ಎಂಬುದಾಗಿ ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೂ, ಯುದ್ಧ ವಿಧಾನಗಳಲ್ಲಿ ಆಗಿರುವ ಅಪಾಯಕಾರಿ ಮಾರ್ಪಾಡುಗಳಿಂದಾಗಿ ಅಂತರರಾಷ್ಟ್ರೀಯ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಏರೊಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬುಧವಾರ ಏರ್ಪಡಿಸಿದ್ದ ವಿವಿಧ ದೇಶಗಳ ವಾಯುಸೇನೆಯ ಮುಖ್ಯಸ್ಥರ ಸಮ್ಮೇಳನದಲ್ಲಿ ಮಾತನಾಡಿದ ಭಾರತೀಯ ವಾಯು ಸೇನೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್‌ ಭದೌರಿಯಾ, ‘ಇತ್ತೀಚಿನ ವರ್ಷಗಳಲ್ಲಿ ಭೌಗೋಳಿಕ–ರಾಜಕೀಯ ವಿಚಾರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹತ್ತರ ಮಾರ್ಪಾಡುಗಳಾಗುತ್ತಿರುವುದನ್ನು ನೋಡುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಭೌತಿಕ, ಡಿಜಿಟಲ್ ರೂಪದ ಹಾಗೂ ಅರಿವಿಗೆ ಬರುವ ರಂಗಗಳಲ್ಲಿ ಆಗಿರುವ ಹೊಸ ತಂತ್ರಜ್ಞಾನಗಳ ಆವಿಷ್ಕಾರವು ಯುದ್ಧ ಮಾಡುವ ಕಲೆಯನ್ನು ಗಮನಾರ್ಹವಾಗಿ ಸಂಕೀರ್ಣಗೊಳಿಸಿದೆ.ಜಾಗತಿಕವಾಗಿ ನಾವು ಹಿಂದೆಂದೂ ಕಂಡರಿಯದಷ್ಟು ಅನಿಶ್ಚಿತತೆ, ಚಂಚಲತೆ ಮತ್ತು ಪರಸ್ಪರ ಸಂಬಂಧ ಹೊಂದಿರುವ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ. ಭಾರತದ ಮಟ್ಟಿಗೆ ಹೇಳುವುದಾದರೆ ನಮಗಿರುವ ಬೆದರಿಕೆಗಳು ಕೂಡಾ ನಮ್ಮ ಭೌಗೋಳಿಕ ಅಂಶಗಳಷ್ಟೇ ವೈವಿಧ್ಯವಾಗಿವೆ. ಅವು ಬೆದರಿಕೆಗಳಷ್ಟೇ ಅನಿಶ್ಚಿತವೂ ಆಗಿವೆ’ ಎಂದರು.

‘ದೇಶದ ಮೇರೆಗಳು ಬದಲಾಗಿದ್ದು, ಅವು ವೈಮಾನಿಕ ಪ್ರದೇಶದ ವ್ಯಾಪ್ತಿ, ಭೌತಿಕ ಗಡಿಗಳು ಹಾಗೂ ಕರಾವಳಿ ತೀರಗಳಾಚೆಗೂ ಚಾಚಿವೆ. ಹಲವು ಸಲ ಎಚ್ಚರಿಕೆಗಳನ್ನು ನೀಡುವ ಪರಿಪಾಠಗಳಿಲ್ಲದೆಯೇ ದಾಳಿಗಳು ಉಂಟಾಗಬಲ್ಲವು. ಅವುಗಳ ಪರಿಣಾಮವೂ ಕ್ಷಿಪ್ರವಾಗಿ ಹಲವಾರು ಕ್ಷೇತ್ರಗಳಿಗೆ ಹಬ್ಬಬಹುದು’ ಎಂದು ಆತಂಕಕಾರಿ ಬೆಳವಣಿಗೆಗಳನ್ನು ಬಿಚ್ಚಿಟ್ಟರು.

ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಕೂಡಾ, ‘ಅಂತರರಾಷ್ಟ್ರೀಯ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಹಣಕಾಸಿಗೆ ಸಂಬಂಧಿಸಿದ ನಿರ್ಬಂಧಗಳು ಸಶಸ್ತ್ರ ಬಲವನ್ನು ಕಟ್ಟುವ ನಮ್ಮ ಗುರಿ ಸಾಧನೆ ವಿಚಾರದಲ್ಲಿ ನಮ್ಮ ಕೈಗಳನ್ನು ಕಟ್ಟಿಹಾಕುತ್ತಿವೆ. ಅದರ ಹೊರತಾಗಿಯೂ ನಾವು ತಂತ್ರಜ್ಞಾನವನ್ನು ರೂಪಿಸುವ ಹಾಗೂ ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳುವ ದೃಢವಾದ ಕಾರ್ಯತಂತ್ರವನ್ನು ರೂಪಿಸಬೇಕಾದ ಅವಶ್ಯಕತೆ ಇದೆ’ ಎಂದು ಒತ್ತಿ ಹೇಳಿದರು.

‘ಭೌಗೋಳಿಕ– ರಾಜಕೀಯದ ವಿಚಾರದಲ್ಲಿ ಭಾರತ ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಂಬಿಕಾರ್ಹ ಸ್ನೇಹಿತ. ಪರಸ್ಪರ ಭದ್ರತೆ ಒದಗಿಸುವ ಪಾತ್ರವನ್ನೂ ನಿಭಾಯಿಸಲು ಭಾರತ ಸಿದ್ಧ. ಈ ವಿಚಾರದಲ್ಲಿ ವಾಯುಪಡೆಯ ಸಾಮರ್ಥ್ಯವೂ ಮಹತ್ತರ ಪಾತ್ರ ನಿರ್ವಹಿಸುತ್ತದೆ’ ಎಂದರು.

‘ವಾಯುಪಡೆಯ ಬಲವರ್ಧನೆ ಕೇವಲ ರಕ್ಷಣಾ ಉದ್ದೇಶಗಳನ್ನು ಮಾತ್ರ ಹೊಂದಿಲ್ಲ. ನೈಸರ್ಗಿಕ ವಿಕೋಪಗಳು ಸಂಭವಿಸಿದಾಗಲೂ ವಾಯು ಪಡೆ ಮಹತ್ತರ ಪಾತ್ರ ನಿರ್ವಹಿಸಬಲ್ಲುದು. ಐದು ವರ್ಷಗಳಲ್ಲಿ ಇಂತಹ 100 ಕ್ಕೂ ಹೆಚ್ಚು ಅನಿಶ್ಚಿತ ಸನ್ನಿವೇಶಗಳನ್ನು ನಿಭಾಯಿಸಲಾಗಿದೆ. 6000ಕ್ಕೂ ಅಧಿಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 44ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ’ ಎಂದು ಸಿಂಗ್‌ ಮಾಹಿತಿ ನೀಡಿದರು.

26 ದೇಶಗಳ ಉನ್ನತ ಅಧಿಕಾರಿಗಳು, ಹಿರಿಯ ಪ್ರತಿನಿಧಿಗಳು ಖುದ್ದಾಗಿ ಈ ಸಮ್ಮೇಳನದಲ್ಲಿ ಭಾಗವಹಿಸಿದರು. ಅಲ್ಲದೇ 14 ರಾಷ್ಟ್ರಗಳ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ವರ್ಚುವಲ್‌ ರೂಪದಲ್ಲಿ ಈ ಸಮಾಲೋಚನೆಯಲ್ಲಿ ಭಾಗಿಯಾದರು.

ಅಮೆರಿಕ, ಇಸ್ವಟಿನಿ,ಇಟಲಿ, ಬ್ರೆಜಿಲ್‌, ಜರ್ಮನಿ, ಜಪಾನ್‌, ರಷ್ಯಾ, ಫ್ರಾನ್ಸ್‌, ಅಫ್ಘಾನಿಸ್ತಾನ್‌, ಝಾಂಬಿಯಾ, ಮಾಲ್ಡೀವ್ಸ್‌, ತಜಕಿಸ್ತಾನ್‌, ಬಾಂಗ್ಲಾದೇಶ, ಕೆನ್ಯ, ಬ್ರಿಟನ್‌, ಸೂಡಾನ್‌ ಹಾಗೂ ಟಾಂಝಾನಿಯಾ ದೇಶಗಳ ರಕ್ಷಣಾ ಇಲಾಖೆ ಪ್ರಮುಖರು ಪಾಲ್ಗೊಂಡರು.

‘ಡ್ರೋನ್‌ಗಳಿಂದ ಆತಂಕ– ಐಎಎಫ್‌ ಪ್ರತಿತಂತ್ರ‌’

‘ಕಡಿಮೆ ಖರ್ಚಿನಲ್ಲಿ ಲಭ್ಯವಿರುವ ಡ್ರೋನ್‌ನಂತಹ ಆಘಾತಕಾರಿ ತಂತ್ರಜ್ಞಾನ ಸರ್ಕಾರಿ ಹಾಗೂ ಸರ್ಕಾರೇತರ ಸಂಘಟನೆಗಳು ಮನಬಂದಂತೆ ಎಲ್ಲೆಂದರಲ್ಲಿ ಬಳಸಬಹುದಾದ ಮಾರಕ ಆಸ್ತಿಯಾಗಿಬಿಟ್ಟಿದೆ. ಇವುಗಳು ಊಹಿಸಲಾಗದಷ್ಟು ದುಷ್ಪರಿಣಾಮವನ್ನು ಉಂಟು ಮಾಡಬಲ್ಲವು. ಭಾರತೀಯ ವಾಯುಪಡೆಯು ಈ ಬೆಳವಣಿಗೆಯನ್ನು ಕೂಲಂಕಷವಾಗಿ ಅವಲೋಕಿಸುತ್ತಿದೆ. ಇದಕ್ಕೆ ಉತ್ತರವಾಗಿ ಮಾನವರಹಿತ, ಅಥವಾ ಅಗತ್ಯಬಿದ್ದಾಗ ಮಾತ್ರ ಮಾನವರಹಿತ ತಂತ್ರಜ್ಞಾನ ಬಳಸುವ ಪ್ರತಿತಂತ್ರಗಳನ್ನು ಹಾಗೂ ಡ್ರೋನ್‌ನಿರೋಧಕ ರಕ್ಷಣಾ ವ್ಯವಸ್ಥೆಯನ್ನು ವಾಯುಪಡೆ ರೂಪಿಸುತ್ತಿದೆ’ ಎಂದು ಬಧೌರಿಯಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT