ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಂದ ಭಿಕ್ಷಾಟನೆ– ಆತ್ಮಾವಲೋಕನ ಅಗತ್ಯ’

Last Updated 19 ಜನವರಿ 2021, 17:16 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯಾಭ್ಯಾಸದಲ್ಲಿ ತೊಡಗಬೇಕಾದ ಮಕ್ಕಳು ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವುದು, ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದಾದರೂ ಏಕೆ. ಈ ಬಗ್ಗೆ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ನಿಸ್ವಾರ್ಥದಿಂದ ಕೆಲಸ ಮಾಡಬೇಕಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿವಿ.ಶ್ರೀಶಾನಂದ ಹೇಳಿದರು.

ಮಕ್ಕಳು ಭಿಕ್ಷಾಟನೆ ಹಾಗೂ ಬೀದಿ ವ್ಯಾಪಾರದಲ್ಲಿ ತೊಡಗುವುದನ್ನು ತಡೆಯುವ ಕುರಿತು ನಗರ ಕಾರ್ಯಪಡೆ ಸಮಿತಿಯ ಸದಸ್ಯರಿಗಾಗಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಭಿಕ್ಷೆ ಬೇಡುವುದನ್ನು ಹಾಗೂ ಆಟಿಕೆ ಮಾರುವುದನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬಿಬಿಎಂಪಿ ಹಾಗೂ ಇನ್ನಿತರ ಇಲಾಖೆಗಳು ಸೇರಿ ಮಾಹಿತಿ ಸಂಗ್ರಹಿಸಲಿವೆ. ವಲಯವಾರು ತಂಡಗಳನ್ನು ರಚಿಸಿ ಈ ಸಮೀಕ್ಷೆ ಪ್ರಾರಂಭಿಸಲಾಗುವುದು’ ಎಂದರು.

‘ಸರ್ಕಾರವು ಮಕ್ಕಳ ಏಳಿಗೆಗಾಗಿ ಅನೇಕ ಕಾಯಕ್ರಮಗಳನ್ನು ರೂಪಿಸಿದರೂ ಅವು ಕಟ್ಟಕಡೆಯ ಫಲಾನುಭವಿಗಳನ್ನು ತಲುಪುತ್ತಿಲ್ಲ. ಅವಕಾಶ ವಂಚಿತ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸ ನೀಡಬೇಕು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು’ ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ‘ಸಿಗ್ನಲ್‌ಗಳಲ್ಲಿ, ಬೀದಿಗಳಲ್ಲಿ, ದೇವಸ್ಥಾನ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್‌ಗಳ ಬಳಿ ಮಕ್ಕಳು ಭಿಕ್ಷೆ ಬೇಡುವುದು, ಆಟಿಕೆಗಳನ್ನು ಮಾರುವುದು ಬಹಳ ಸೂಕ್ಷ್ಮ ವಿಚಾರ. ಇದಕ್ಕೆ ಕಾರಣಗಳೇನು,ಅವರ ಹಿನ್ನೆಲೆ ಏನು, ಎಲ್ಲಿಂದ ಬಂದಿದ್ದಾರೆ, ಎಲ್ಲಿ ನೆಲೆಸಿದ್ದಾರೆ, ಮಕ್ಕಳ ತಂದೆ-ತಾಯಿ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಬೇಕು. ಸಮೀಕ್ಷೆ ವೇಳೆ ಮಕ್ಕಳ ಜೊತೆ ಏಕಾಏಕಿ ಪ್ರಶ್ನೆ ಕೇಳದೆ ಸಂಯಮದಿಂದ ಅವರ ಜೊತೆ ಬೆರೆತು ಮಾಹಿತಿ ಸಂಗ್ರಹಿಸಬೇಕು’ ಎಂದು ಕಿವಿಮಾತು ಹೇಳಿದರು.

***

‘ಮನೆ ಬಾಗಿಲಿಗೆ ಶಾಲೆ– ಕಾರ್ಯಕ್ರಮ ಶೀಘ್ರ’

’ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ‘ಮನೆ ಬಾಗಿಲಿಗೆ ಶಾಲೆ’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಬಸ್‌ಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಬಳಸಲಾಗುತ್ತದೆ. ಈ ಸಂಬಂಧ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತುಕತೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಬಿಎಂಟಿಸಿಯಿಂದ ಪಾಲಿಕೆಯು 10 ಬಸ್‌ಗಳನ್ನು ಪಡೆದಿದೆ. ಅವುಗಳಿಗೆ ಹೊಸ ರೂಪ ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದರು.

‘ಪಾಲಿಕೆ ವತಿಯಿಂದಲೇ ಶಿಕ್ಷಕರು ಹಾಗೂ ಚಾಲಕರನ್ನು ನೇಮಕ ಮಾಡಲಾಗುತ್ತದೆ. ಹೆಚ್ಚು ಮಕ್ಕಳಿರುವ ಕೊಳೆಗೇರಿಗಳನ್ನು ಗುರುತಿಸಿ ಅಲ್ಲಿಗೆ ಬಸ್‌ಗಳನ್ನು ಕಳುಹಿಸಲಾಗುತ್ತದೆ. ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಈ ಕಾರ್ಯಕ್ರಮಕ್ಕೆ ಶೀಘ್ರವೇ ಚಾಲನೆ ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT