ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವುಗೊಳಿಸದೆಯೇ ಕಾಮಗಾರಿಗೆ ಸಿದ್ಧತೆ

ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಅರ್ಜಿದಾರ ಎಚ್ಚರಿಕೆ
Last Updated 11 ಜುಲೈ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲಸಂದ್ರದಲ್ಲಿ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಬೇಕು ಎಂಬ ಹೈಕೋರ್ಟ್ ಆದೇಶವನ್ನು ಪಾಲಿಸದೆಯೇ ಬಿಬಿಎಂಪಿ ಆ ಜಾಗದಲ್ಲಿ ನಿರ್ಮಾಣ ಕಾಮಗಾರಿಯನ್ನು ಪುನರಾರಂಭಿಸಲು ಮುಂದಾಗಿದೆ.

ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಕಲ್ಲುಗಳನ್ನು ಪೂರೈಕೆ ಮಾಡಿದ ಮಲ್ಲಸಂದ್ರ ಬಂಡೆ ಖರಾಬು ಜಾಗ ವಿವಾದದಲ್ಲಿ ಸಿಲುಕಿ ಹಲವು ವರ್ಷಗಳೇ ಕಳೆದಿದೆ. ‘ಇಲ್ಲಿರುವ 35 ಎಕರೆ 39 ಗುಂಟೆ ಸರ್ಕಾರಿ ಜಾಗದಲ್ಲಿ ನಿರ್ಮಾಣ ಆಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು’ ಎಂದು ಫೆಬ್ರುವರಿ 14ರಂದು ಹೈಕೋರ್ಟ್‌ ಆದೇಶ ನೀಡಿದೆ.

ಕನಿಷ್ಠ 8 ಎಕರೆಯಷ್ಟು ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿ ಎಸ್.ಎನ್. ಭಾಸ್ಕರ್ ಎಂಬುವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸಿ ನಂತರವೇಇಲ್ಲಿ ಅಭಿವೃದ್ಧಿ ಕಾರ್ಯ ನಡೆಸಬೇಕು’ ಎಂಬುದು ಅವರ ಮನವಿ.

‘ಕಂದಾಯ ಇಲಾಖೆಗೆ ಸೇರಿದ ಈ ಜಾಗ ಪಾಲಿಕೆಗೆ ಹಸ್ತಾಂತರವೇ ಆಗಿಲ್ಲ. ಬಿಬಿಎಂಪಿ ಕೂಡ ಅನಧಿಕೃತವಾಗಿ ಇಲ್ಲಿ ಕಟ್ಟಡಗಳನ್ನು ನಿರ್ಮಿಸಿದೆ’ ಎಂಬುದು ಅವರ ಆರೋಪ.

2020ರ ಫೆಬ್ರುವರಿಯಲ್ಲಿ ಹೈಕೋರ್ಟ್‌ ನೀಡಿದ ಆದೇಶವನ್ನು ಜೂನ್ ತನಕವೂ ಜಾರಿ ಮಾಡದಿರುವ ಸಂಬಂಧ ಕಂದಾಯ ಇಲಾಖೆಗೆಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಜೂನ್‌ 22ರಂದು ಪತ್ರ ಬರೆದಿದ್ದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ದೇವೇಗೌಡರ ಪತ್ರ ಆಧರಿಸಿ ಬಿಬಿಎಂಪಿ ಆಯುಕ್ತರು, ನಗರ ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್‌ಗೆ ಪತ್ರ ಬರೆದು ಹೈಕೋರ್ಟ್‌ ಆದೇಶದಂತೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

‘ಕಟ್ಟಡಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿದೆಯೇ ಹೊರತು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದಂತೆ ನಿರ್ದೇಶನ ನೀಡಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಈಗ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.

‘ಹೈಕೋರ್ಟ್‌ ಆದೇಶ ಪಾಲನೆ ಮಾಡದೆ ಕಾಮಗಾರಿ ಆರಂಭಿಸಿದರೆ ಬಿಬಿಎಂಪಿ ವಿರುದ್ಧ ನಾಯ್ಯಾಂಗ ನಿಂಧನೆ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಭಾಸ್ಕರ್ ಎಚ್ಚರಿಸಿದರು.

ಈಗಾಗಲೇ ನಿರ್ಮಾಣವಾಗಿರುವ ಕಲ್ಲಿನ ಕೋಟೆಯ ಒಳಭಾಗದಲ್ಲಿ ಆಟದ ಮೈದಾನ, ಬಯಲು ರಂಗಮಂದಿರ, ಯೋಗ ಕೇಂದ್ರ, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಗ್ರಂಥಾಲಯ, ಬಿಬಿಎಂಪಿ ವಾರ್ಡ್ ಕಚೇರಿ, ಬೆಂಗಳೂರು ಒನ್ ಕಚೇರಿ, ಪೌರಕಾರ್ಮಿಕರ ವಿಶ್ರಾಂತಿ ಕೊಠಡಿ, ದೋಭಿ ಘಾಟ್, ಹಿರಿಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಉದ್ಯಾನ ಸೇರಿದಂತೆ ಒಂದೇ ಸ್ಥಳದಲ್ಲಿ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ.

‘ಹಸ್ತಾಂತರ ನಂತರ ತೆರವು’

‘ಕಂದಾಯ ಇಲಾಖೆಗೆ ಸೇರಿದ ಜಾಗವಾದರೂಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಾರಣ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಕಾನೂನಿನ ಅಡ್ಡಿ ಇಲ್ಲ’ ಎಂದು ಪಾಲಿಕೆಯ ಟಿ.ದಾಸರಹಳ್ಳಿ ವಲಯದ ಜಂಟಿ ಆಯುಕ್ತ ನರಸಿಂಹಮೂರ್ತಿ ಹೇಳಿದರು.

‘ಜಾಗ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಹಸ್ತಾಂತರದ ಬಳಿಕವೂ ಒತ್ತುವರಿ ತೆರವು ಕಾರ್ಯ ಕೈಗೊಳ್ಳಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ಕಾಮಗಾರಿ ಆರಂಭಿಸುತ್ತಿದ್ದೇವೆ. ಪಾಲಿಕೆ ಆಯುಕ್ತರಿಂದ ಅನುಮೋದನೆ ದೊರೆತಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT