ಶುಕ್ರವಾರ, ಮಾರ್ಚ್ 5, 2021
17 °C
ಕಂಟೈನ್‌ಮೆಂಟ್‌ ವಲಯಗಳಿರುವ ವಾರ್ಡ್‌ಗಳ ಸಂಖ್ಯೆ 21ಕ್ಕೆ ಇಳಿಕೆ

ಕೋವಿಡ್–19 | ಮಲ್ಲೇಶ್ವರ ವಾರ್ಡ್‌ನಲ್ಲೂ ನಿಯಂತ್ರಿತ ವಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳಿರುವ ವಾರ್ಡ್‌ಗಳ ಸಂಖ್ಯೆ ಗುರುವಾರ 21ಕ್ಕೆ ಇಳಿಕೆಯಾಗಿದೆ. ಮಲ್ಲೇಶ್ವರ ವಾರ್ಡ್‌ನಲ್ಲಿ ( ಸಂಖ್ಯೆ 45) ಒಬ್ಬರಿಗೆ ಕೋವಿಡ್‌ –19 ಸೋಂಕು ಇರುವುದು ದೃಢಪಟ್ಟಿದ್ದರಿಂದ ಈ ವಾರ್ಡ್‌ ಈ ಪಟ್ಟಿಗೆ ಸೇರ್ಪಡೆಯಾಗಿದೆ.

ಇತ್ತೀಚೆಗೆ ಯಾವುದೇ ಹೊಸ ಪ್ರಕರಣಗಳು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕರಿಸಂದ್ರ, ಹೊಸಹಳ್ಳಿ ಹಾಗೂ ರಾಮಸ್ವಾಮಿಪಾಳ್ಯ ವಾರ್ಡ್‌ಗಳನ್ನು ನಿಯಂತ್ರಿತ ಪ್ರದೇಶಗಳಿರುವ ವಾರ್ಡ್‌ಗಳ ಪಟ್ಟಿಯಿಂದ ಗುರುವಾರ ಕೈಬಿಡಲಾಗಿದೆ. ಯಾವುದೇ ಹೊಸ ಪ್ರಕರಣ ಕಾಣಿಸದಿದ್ದಲ್ಲಿ, ಪೂರ್ವ ವಲಯದ ಪುಲಿಕೇಶಿನಗರ ಶುಕ್ರವಾರದಿಂದ, ಮಾರುತಿ ಸೇವಾನಗರ ಹಾಗೂ ರಾಧಾಕೃಷ್ಣನಗರ ವಾರ್ಡ್‌ಗಳು ಶನಿವಾರದಿಂದ ಪಟ್ಟಿಯಿಂದ ಹೊರಬರಲಿವೆ.  

ಸಿಬ್ಬಂದಿ ಕೊರತೆ ಇಲ್ಲ: ‘ಜ್ವರ ತಪಾಸಣಾ ಕೇಂದ್ರಗಳಲ್ಲಿ (ಫಿವರ್‌ ಕ್ಲಿನಿಕ್‌) ಆರೋಗ್ಯಾಧಿಕಾರಿಗಳ ಸಾಕಷ್ಟು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜ್ವರ ಕ್ಲಿನಿಕ್‌ಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇಲ್ಲ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸ್ಪಷ್ಟಪಡಿಸಿದರು.

‘ವಲಸೆ ಕಾರ್ಮಿಕರ ಹಾಗೂ ಹೊರಗಿನಿಂದ ನಗರಕ್ಕೆ ಬರುತ್ತಿರುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಕೆಂಪೇಗೌಡ ಬಸ್‌ನಿಲ್ದಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನೂ ಬಳಸಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಕೆಂಪು ವಲಯ: ಮುಗಿಯದ ಗೊಂದಲ
ಬೆಂಗಳೂರು ನಗರ ಜಿಲ್ಲೆಯನ್ನು ಕೆಂಪು ವಲಯ ಎಂದು ಪರಿಗಣಿಸುವ ಬದಲು ಇಲ್ಲಿನ ವಾರ್ಡ್‌ಗಳಲ್ಲಿ ಕೋವಿಡ್‌ 19 ಪ್ರಕರಣಗಳು ಪತ್ತೆಯಾಗುವ ಆಧಾರದಲ್ಲಿ ವಾರ್ಡ್‌ವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಗುರುತಿಸಬೇಕು ಎಂದು ಬಿಬಿಎಂಪಿ ಮಾಡಿರುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ.  

‘ಕೇಂದ್ರ ಸರ್ಕಾರದ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಉತ್ತರ ಬಂದ ಬಳಿಕ, ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಗುರುತಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು