ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ನ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಇಟ್ಟಿದ್ದ!

ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್
Last Updated 2 ಸೆಪ್ಟೆಂಬರ್ 2018, 19:25 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನ ಸ್ನಾನದ ಕೋಣೆಗಳಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿದ್ಯಾರ್ಥಿನಿಯರ ಸ್ನಾನದ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದಡಿ ಸಿದ್ಧಾರ್ಥ್‌(21) ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಸಿದ್ಧಾರ್ಥ್, ಚೂಡಸಂದ್ರ ಬಳಿಯ ಎಂಜಿನಿಯರಿಂಗ್ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿ. ಆತ, ಅದೇ ಕಾಲೇಜಿನ ಹಾಸ್ಟೆಲ್‌ನ ಸ್ನಾನದ ಕೋಣೆಯಲ್ಲೇ ಕ್ಯಾಮೆರಾ ಇಟ್ಟು ಕೃತ್ಯ ಎಸಗುತ್ತಿದ್ದ. ವಿದ್ಯಾರ್ಥಿನಿಯೊಬ್ಬರು ನೀಡಿದ ದೂರು ಆಧರಿಸಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

‘ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೊಗಳನ್ನು ವಿದ್ಯಾರ್ಥಿನಿಯರಿಗೆ ತೋರಿಸುತ್ತಿದ್ದ ಆರೋಪಿ, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಒಪ್ಪದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವುದಾಗಿ ಬೆದರಿಸುತ್ತಿದ್ದ’ ಎಂದರು.

ಗೆಳತಿಯೇ ಕ್ಯಾಮೆರಾ ಇಟ್ಟಳು: ‘ವ್ಯಾಸಂಗದ ವೇಳೆಯಲ್ಲಿ ಆರೋಪಿಗೆ ಯುವತಿಯೊಬ್ಬಳ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಆಕೆಯನ್ನು ಬಳಸಿಕೊಂಡೇ ಆರೋಪಿ, ಹಾಸ್ಟೆಲ್‌ನ ಸ್ನಾನದ ಕೋಣೆಗಳಲ್ಲಿ ಕ್ಯಾಮೆರಾ ಇರಿಸುತ್ತಿದ್ದ. ಇದನ್ನು ಆತನೇ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಗೆಳತಿ ಜೊತೆ ಆರೋಪಿ,ಹಲವೆಡೆ ಓಡಾಡಿದ್ದ. ಅದೇ ಸಂದರ್ಭದಲ್ಲೇ ಆಕೆಯ ನಗ್ನ ವಿಡಿಯೊ ಚಿತ್ರೀಕರಿಸಿದ್ದ. ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದ ಆತ, ಗೆಳೆತಿಯನ್ನೇ ಲೈಂಗಿಕವಾಗಿ ಬಳಸಿಕೊಂಡಿದ್ದ. ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದ’.

‘ಗೆಳತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಆರೋಪಿ,‘ಹಾಸ್ಟೆಲ್‌ನ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಇಟ್ಟು ಬರಬೇಕು. ಇಲ್ಲದಿದ್ದರೆ ನಿನ್ನ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತೇನೆ. ಎಲ್ಲ ಚಾನೆಲ್‌ಗಳಿಗೂ ಕೊಡುತ್ತೇನೆ’ ಎಂದು ಬೆದರಿಸಲಾರಂಭಿಸಿದ್ದ. ಅದಕ್ಕೆ ಹೆದರಿದ್ದ ಆಪ್ತೆಯೇ ಹಾಸ್ಟೆಲ್‌ನ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಇಟ್ಟು ಬರುತ್ತಿದ್ದಳು. ಕೆಲವು ಗಂಟೆಗಳ ನಂತರ, ಆಕೆಯೇ ಕ್ಯಾಮೆರಾವನ್ನು ವಾಪಸ್‌ ತಂದು ಆರೋಪಿಗೆ ಕೊಡುತ್ತಿದ್ದಳು’ ಎಂದು ಹೇಳಿದರು.

‘ಕೃತ್ಯಕ್ಕೆ ಸಹಕರಿಸಿದ್ದ ಆರೋಪದಡಿ ಯುವತಿಯನ್ನು ಪ್ರಕರಣದ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ಆಕೆಯನ್ನು ವಿಚಾರಣೆಗೆ ಒಳಪಡಿಸಿ
ದಾಗ, ಆರೋಪಿ ತನಗೂ ವಂಚಿಸಿರುವುದಾಗಿ ಹೇಳಿದ್ದಾಳೆ. ಆಕೆಯನ್ನು ಬಂಧಿಸಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ನಕಲಿ ಖಾತೆ ತೆರೆದು ಅಪ್‌ಲೋಡ್‌: ಕಳೆದ ತಿಂಗಳು ವಿದ್ಯಾರ್ಥಿನಿಯೊಬ್ಬರ ಸ್ನಾನದ ವಿಡಿಯೊವನ್ನು ಚಿತ್ರೀಕರಿಸಿದ್ದ ಆರೋಪಿ, ಅವರಿಗೆ ಬೆದರಿಕೆ ಹಾಕಲಾ
ರಂಭಿಸಿದ್ದ. ಅದಕ್ಕೆ ಯುವತಿ ಸೊಪ್ಪು ಹಾಕದಿದ್ದಾಗ,ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿದ್ದ. ನೊಂದ ಯುವತಿ, ಆರೋಪಿ ವಿರುದ್ಧ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಯ ಕೃತ್ಯ ಬಯಲಾಗಿದೆ.

'ನನ್ನ ಹಾಗೂ ನನ್ನ ಸ್ನೇಹಿತೆಯರ ಕೊಠಡಿಯ ಸ್ನಾನದ ಕೋಣೆಯಲ್ಲೂ ಆರೋಪಿ ಕ್ಯಾಮೆರಾ ಇಟ್ಟು ವಿಡಿಯೊ ಚಿತ್ರೀಕರಿಸಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ, ಗೌರವಕ್ಕೆ ಧಕ್ಕೆ ತಂದಿದ್ದಾನೆ. ಆತನ ಕೆಲಸಕ್ಕೆ ಯುವತಿಯೊಬ್ಬಳು ಸಹಾಯ ಮಾಡಿದ್ದಾಳೆ. ಅವರಿಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಿ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನ ಸ್ನೇಹಿತೆಯೊಬ್ಬರ ತಾಯಿ, ಇತ್ತೀಚೆಗೆ ಹಾಸ್ಟೆಲ್‌ಗೆ ಬಂದಿದ್ದರು. ನಮ್ಮ ಕೊಠಡಿಯಲ್ಲೇ ಉಳಿದುಕೊಂಡಿದ್ದರು. ಅವರ ಸ್ನಾನದ ವಿಡಿಯೊವನ್ನು ಸಹ ಆರೋಪಿ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಅದೇ ರೀತಿ ಹಾಸ್ಟೆಲ್‌ನ ಹಲವು ಕೊಠಡಿಗಳಲ್ಲಿರುವ ಸ್ನಾನದ ಕೋಣೆಗಳಲ್ಲಿ ಆರೋಪಿ ಕ್ಯಾಮೆರಾ ಇಟ್ಟು ಕೃತ್ಯ ಎಸಗಿದ್ದಾನೆ’ ಎಂಬ ಅಂಶವೂ ದೂರಿನಲ್ಲಿದೆ.

‘ಹಲವು ವಿದ್ಯಾರ್ಥಿನಿಯರ ವಿಡಿಯೊ ಸೆರೆ’

‘ಆರೋಪಿಯು ಮೂವರ ವಿಡಿಯೊಗಳನ್ನು ಚಿತ್ರೀಕರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಇನ್ನೂ ಹಲವು ವಿದ್ಯಾರ್ಥಿನಿಯರ ಸ್ನಾನದ ವಿಡಿಯೊಗಳನ್ನೂ ಆತ ಚಿತ್ರೀಕರಿಸಿಕೊಂಡಿರುವ ಅನುಮಾನವಿದೆ. ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ಹೇಳಿಕೆ ಪಡೆಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ವಿಡಿಯೊ ಚಿತ್ರೀಕರಣಕ್ಕಾಗಿ ಆರೋಪಿ ಆಧುನಿಕ ರಹಸ್ಯ ಕ್ಯಾಮೆರಾ ಬಳಕೆ ಮಾಡುತ್ತಿದ್ದ. ಆ ಕ್ಯಾಮೆರಾವನ್ನು ಆತ, ಸಂಬಂಧಿಕರೊಬ್ಬರಿಗೆ ನೀಡಿರುವ ಮಾಹಿತಿ ಇದೆ. ಅದನ್ನು ಜಪ್ತಿ ಮಾಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT