ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗು ಎಂದಿದ್ದಕ್ಕೆ ಲಿವಿಂಗ್ ಟುಗೆದರ್ ಸಂಗಾತಿಗೆ ನೇಣು ಬಿಗಿದು ಕೊಲೆ

ಆತ್ಮಹತ್ಯೆ ಎಂದು ಬಿಂಬಿಸಿದ್ದ ಗೆಳೆಯನ ಬಂಧನ
Last Updated 16 ಡಿಸೆಂಬರ್ 2022, 7:26 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ (ಸಹಜೀವನ) ಮಹಿಳೆಯನ್ನು ಕೊಂದು ಆತ್ಮಹತ್ಯೆಯೆಂದು ಬಿಂಬಿಸಲು ನೇಣು ಬಿಗಿದು ನಾಟಕವಾಡಿದ್ದ ಆರೋಪಿ ಪ್ರಶಾಂತ್‌ (24) ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಿಂಗಸಂದ್ರದ ಶ್ರೀನಿವಾಸ್ ಸ್ಟ್ರೀಟ್ ನಿವಾಸಿ ಪ್ರಶಾಂತ್, ಇ– ಕಾಮರ್ಸ್ ಕಂಪನಿಯೊಂದರ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಜೊತೆ ಸಲುಗೆ ಇಟ್ಟುಕೊಂಡಿದ್ದ ಸಿ. ಸುನೀತಾ ಉರುಫ್ ದೀಪು (27) ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಿ ನಾಟಕವಾಡಿದ್ದ. ಮರಣೋತ್ತರ ಪರೀಕ್ಷೆ ವರದಿಯಿಂದ ಕೊಲೆ ರಹಸ್ಯ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ಪ್ರಶಾಂತ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ನಾಲ್ಕು ವರ್ಷ ಲಿವಿಂಗ್ ಟುಗೆದರ್: ‘ಆಂಧ್ರಪ್ರದೇಶದ ಸುನೀತಾ ವಿವಾಹಿತೆ. ಕೌಟುಂಬಿಕ ಕಲಹದಿಂದಾಗಿ ಪತಿಯನ್ನು ತೊರೆದು ಬೆಂಗಳೂರಿಗೆ ಬಂದು ಪರಿಚಯಸ್ಥರೊಬ್ಬರ ಮನೆಯಲ್ಲಿ ವಾಸವಿದ್ದರು. ಸಣ್ಣ–ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತನ್ನ ಹೆಸರನ್ನು ದೀಪು ಎಂದು ಬದಲಾಯಿಸಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸುನೀತಾ ವಾಸವಿದ್ದ ಪ್ರದೇಶದಲ್ಲೇ ಆರೋಪಿ ಪ್ರಶಾಂತ್ ನೆಲೆಸಿದ್ದ. ನಾಲ್ಕು ವರ್ಷಗಳ ಹಿಂದೆ ಅವರಿಬ್ಬರಿಗೂ ಪರಿಚಯವಾಗಿತ್ತು. ಸುನೀತಾ ಅವರಿಗಿಂತ ಪ್ರಶಾಂತ್ ವಯಸ್ಸಿನಲ್ಲಿ ಮೂರು ವರ್ಷ ಚಿಕ್ಕವನು. ವಯಸ್ಸಿನ ಅಂತರವಿದ್ದರೂ ಅವರಿಬ್ಬರು ಪರಸ್ಪರ ಒಪ್ಪಿ ಪ್ರೀತಿಸಲಾರಂಭಿಸಿದ್ದರು. ಸಲುಗೆಯೂ ಬೆಳೆದಿತ್ತು’ ಎಂದು ಹೇಳಿವೆ.

‘ಸುನೀತಾ ಅವರನ್ನು ಮದುವೆಯಾಗುವುದಾಗಿ ಹೇಳಿದ್ದ ಆರೋಪಿ ಪ್ರಶಾಂತ್, ‘ನನ್ನ ತಂಗಿ ಇದ್ದಾಳೆ. ಅವಳ ಮದುವೆಯಾದ ನಂತರ ನಾವಿಬ್ಬರೂ ಮದುವೆಯಾಗೋಣ. ಅಲ್ಲಿಯವರೆಗೂ ಲಿವ್‌–ಇನ್ ಸಂಬಂಧದಲ್ಲಿ (ಸಹಜೀವನ) ಇರೋಣ’ ಎಂದಿದ್ದ. ಅದಕ್ಕೆ ಸುನೀತಾ ಒಪ್ಪಿದ್ದಳು. ನಂತರ, ಅವರಿಬ್ಬರು ಶ್ರೀನಿವಾಸ್ ಸ್ಟ್ರೀಟ್ ಮನೆಯೊಂದರಲ್ಲಿ ಒಟ್ಟಿಗೆ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಲೆ: ‘ನಾಲ್ಕು ವರ್ಷವಾದರೂ ಆರೋಪಿ ಮದುವೆಯಾಗಿರಲಿಲ್ಲ. ಇದರಿಂದ ಬೇಸತ್ತ ಸುನೀತಾ, ‘ಬೇಗ ಮದುವೆಯಾಗೋಣ’ ಎಂದಿದ್ದರು. ಅದಕ್ಕೆ ಒಪ್ಪದ ಪ್ರಶಾಂತ್, ತಂಗಿ ಮದುವೆಯಾಗಬೇಕೆಂದು ತಿಳಿಸಿದ್ದರು. ಅಷ್ಟಾದರೂ ಸುನೀತಾ ಮದುವೆಯಾಗಬೇಕೆಂದು ಪಟ್ಟು ಹಿಡಿದಿದ್ದರು. ಇದರಿಂದ ಸಿಟ್ಟಾದ ಆರೋಪಿ, ಸುನೀತಾ ಕೊಲೆ ಮಾಡಲು ಸಂಚು ರೂಪಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮದುವೆ ವಿಚಾರಕ್ಕೆ ಮನೆಯಲ್ಲಿ ಇತ್ತೀಚೆಗೆ ಪುನಃ ಜಗಳವಾಗಿತ್ತು. ಸುನೀತಾ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ, ನೇಣು ಬಿಗಿದು ಮೃತದೇಹವನ್ನು ಕೊಠಡಿಯಲ್ಲಿ ನೇತುಹಾಕಿದ್ದ. ಆತ್ಮಹತ್ಯೆ ಎಂಬಂತೆ ಸನ್ನಿವೇಶ ಸೃಷ್ಟಿಸಿದ್ದ’ ಎಂದು ಮೂಲಗಳು ಹೇಳಿವೆ.

ಠಾಣೆಗೆ ಮಾಹಿತಿ ನೀಡಿದ್ದ ವೈದ್ಯರು: ‘ಡಿ. 7ರಂದು ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ನೀಡಿದ್ದ ಅಭಿರಾಮ್ ಆಸ್ಪತ್ರೆ ವೈದ್ಯರು, ‘ದೀಪು ಎಂಬ ಮಹಿಳೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಮೃತದೇಹವಿದೆ’ ಎಂದಿದ್ದರು. ಆಸ್ಪತ್ರೆಗೆ ಹೋಗಿದ್ದ ಸಿಬ್ಬಂದಿ, ಮೃತದೇಹವನ್ನು ಪರಿಶೀಲಿಸಿದಾಗ ಕತ್ತಿನಲ್ಲಿ ಗಾಯದ ಗುರುತು ಇತ್ತು. ಕೂಡಲೇ ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರಂಭದಲ್ಲಿ ಇದೊಂದು ಆತ್ಮಹತ್ಯೆ ಇರಬಹುದೆಂದು ಭಾವಿಸಲಾಗಿತ್ತು. ಮಹಿಳೆ ಬಳಸಿದ್ದ ಮೊಬೈಲ್ ನಂಬರ್ ಆಧರಿಸಿ ಪೋಷಕರನ್ನು ಪತ್ತೆ ಮಾಡಿ, ಆಸ್ಪತ್ರೆಗೆ ಕರೆಸಲಾಗಿತ್ತು. ಮೃತದೇಹ ನೋಡಿದ್ದ ಅವರು, ತಮ್ಮ ಮಗಳು ಸುನೀತಾ ಎಂಬುದಾಗಿ ಗುರುತಿಸಿದ್ದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.‘

‘ಕತ್ತಿಗೆ ತೀವ್ರ ಗಾಯವಾಗಿ ಮಹಿಳೆ ಮತಪಟ್ಟಿದ್ದಾರೆ. ಇದು ಕೊಲೆ’ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾಗಿತ್ತು. ಸುನೀತಾ ತಂದೆ ಸಹ ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಜೊತೆಗೆ, ಲಿವಿಂಗ್ ಟುಗೆದರ್‌ ಸಂಬಂಧದಲ್ಲಿದ್ದ ಪ್ರಶಾಂತ್ ಬಗ್ಗೆ ಮಾಹಿತಿ ನೀಡಿದ್ದರು. ಆರೋಪಿಯನ್ನು ಪತ್ತೆ ಮಾಡಿದಾಗ, ಆತ್ಮಹತ್ಯೆಯೆಂದು ಆರಂಭದಲ್ಲಿ ನಾಟಕವಾಡಿದ್ದ. ಹೆಚ್ಚಿನ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT