ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವರ್ತನೆ ಅರಿತ ಕಾರಣ ಚಿಕಿತ್ಸೆ ಸುಲಭ: ಮಣಿಪಾಲ ಆಸ್ಪತ್ರೆಯ ವೈದ್ಯರ ಅಭಿಮತ

* ಕೋವಿಡ್‌ ಬಳಿಕದ ಬದಲಾವಣೆ ಬಗ್ಗೆ ಚರ್ಚೆ
Last Updated 10 ಏಪ್ರಿಲ್ 2021, 21:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಮೊದಲನೆ ಅಲೆಯ ಅವಧಿಯಲ್ಲಿ ಕಾಯಿಲೆಯ ಬಗ್ಗೆ ಅಷ್ಟಾಗಿ ಸಂಶೋಧನೆಗಳು ನಡೆದಿರಲಿಲ್ಲ. ಹಾಗಾಗಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದು ಸವಾಲಾಗಿತ್ತು. ಆದರೆ, ಈಗ ಕೋವಿಡ್ ರೋಗಾಣು ಯಾವ ರೀತಿ ವರ್ತಿಸುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಹೀಗಾಗಿ, ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೂ ಚಿಕಿತ್ಸೆಯಲ್ಲಿ ಸಮಸ್ಯೆಯಾಗುವುದಿಲ್ಲ’ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿದರು.

ವಿಶ್ವ ಆರೋಗ್ಯ ದಿನದ ಅಂಗವಾಗಿ ಮಣಿಪಾಲ ಆಸ್ಪತ್ರೆಗಳ ಸಮೂಹವು ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಶನಿವಾರ ಆಯೋಜಿಸಿದ ವೆಬಿನಾರ್‌ನಲ್ಲಿ ‘ಕೋವಿಡ್ ಹಾಗೂ ಕೋವಿಡ್‌ ನಂತರ ಪರಿಸ್ಥಿತಿಯ ಬದಲಾವಣೆಗೆ ಹೊಂದಿಕೊಳ್ಳುವುದು’ ಎಂಬ ವಿಷಯದ ಕುರಿತು ತಜ್ಞರು ಚರ್ಚಿಸಿದರು.

‘ಕಳೆದ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಕೋವಿಡೇತರ ರೋಗಿಗಳು ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕಿದರು. ಚಿಕಿತ್ಸೆಗಳನ್ನು ಮುಂದೂಡಿದ ಪರಿಣಾಮ ಹಲವರಲ್ಲಿ ಆರೋಗ್ಯ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಜೀವನ ವಿಧಾನ ಏಕಾಏಕಿ ಬದಲಾಗಿದ್ದರಿಂದ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳೂ ಹೆಚ್ಚಳವಾದವು. ಅಷ್ಟಾಗಿಯೂ ಹಲವರಿಗೆ ಆನ್‌ಲೈನ್ ಸಮಾಲೋಚನೆ ಮೂಲಕ ಸೂಕ್ತ ಮಾ‌ರ್ಗದರ್ಶನ ನೀಡಲಾಯಿತು. ಈಗ ಕೋವಿಡ್‌ ಎರಡನೇ ಅಲೆ ಪ್ರಾರಂಭವಾಗಿದ್ದು, ಪ್ರಕರಣಗಳು ಹೆಚ್ಚಳವಾಗುತ್ತಿವೆ. ಪರಿಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ’ ಎಂದು ವೈಟ್‌ಫೀಲ್ಡ್‌ನ ಮಣಿಪಾಲ ಆಸ್ಪತ್ರೆಯ ಶ್ವಾಸಕೋಶ ತಜ್ಞೆ ಡಾ.ಶೀತಲ್ ಚೌರಾಸಿಯಾ ತಿಳಿಸಿದರು.

ಆಸ್ಪತ್ರೆಯ ನರರೋಗ ತಜ್ಞ ಡಾ.ಅಭಿನವ್ ರೈನಾ, ‘ಲಾಕ್‌ಡೌನ್, ಆರ್ಥಿಕ ಅಸ್ಥಿರತೆ, ಉದ್ಯೋಗ ಕಳೆದುಕೊಳ್ಳುವಿಕೆ ಸೇರಿದಂತೆ ವಿವಿಧ ಅನಿರೀಕ್ಷಿತ ಬೆಳವಣಿಗೆಗಳು ಮಾನಸಿಕ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾದವು. ವಿವಿಧ ಕಾರಣಗಳಿಂದಾಗಿ ಹಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈಗ ಮತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಕೋವಿಡ್ ಮೊದಲನೇ ಅಲೆಯಲ್ಲಿ ಹಲವು ಪಾಠಗಳನ್ನು ಕಲಿತಿದ್ದೇವೆ. ಈಗ ಸೋಂಕಿತರಿಗೆ ಆದಷ್ಟು ಬೇಗ ಚಿಕಿತ್ಸೆ ಒದಗಿಸಬೇಕಿದೆ. ವೆಂಟಿಲೇಟರ್, ತೀವ್ರ ನಿಗಾ ಘಟಕ, ಹಾಸಿಗೆ ಕೊರತೆ ಆಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಸದ್ಯ ಕಚೇರಿ ಸುರಕ್ಷಿತವಲ್ಲ: ‘ಎರಡನೇ ಅಲೆಯಲ್ಲಿ ವೈರಾಣು ವೇಗವಾಗಿ ಹರಡುತ್ತಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಗಂಭೀರ ಸ್ವರೂಪ ಪಡೆದಿದೆ. ರಾಜ್ಯದಲ್ಲಿಯೂ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾಗಿ, ಇನ್ನೂ ಕೆಲ ದಿನ ಕಚೇರಿ ಕೆಲಸವನ್ನುಮನೆಯಲ್ಲಿಯೇ ನಿರ್ವಹಿಸಬೇಕು. ಕಚೇರಿಗಳಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಕೋವಿಡ್ ಪೂರ್ವದ ಸ್ಥಿತಿ ಬರುವವರೆಗೆ ಕಾಯುವುದು ಉತ್ತಮ’ ಎಂದು ಕ್ಯಾಪ್ಜೆಮಿನ್ ಟೆಕ್ನಾಲಜಿ ಸರ್ವಿಸ್ ಇಂಡಿಯಾ ಲಿಮಿಟೆಡ್‌ನ ಹಣಕಾಸು ಅಧಿಕಾರಿ ಅಂಕಿತ್ ಮಹೇಶ್ವರಿ ಹೇಳಿದರು.

ಗ್ಲೋಬಲ್ ಡಿಜಿಟಲ್‌ನ ಮುಖ್ಯ ಹಣಕಾಸು ಅಧಿಕಾರಿ ದಿವ್ಯಾ ಕುಮಾರ್, ‘ಕೋವಿಡ್ ಕಾಣಿಸಿಕೊಂಡ ಬಳಿಕ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಸಂಪರ್ಕ ಕಾಯ್ದುಕೊಳ್ಳುವುದು ಸವಾಲಾಗಿತ್ತು. ವಿದೇಶಿ ಪ್ರತಿನಿಧಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆನ್‌ಲೈನ್ ಸಂವಾದಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು. ಕಚೇರಿ ಕೆಲಸವನ್ನುಮನೆಯಿಂದಲೇ ನಿರ್ವಹಿಸುವ (ವರ್ಕ್‌ ಫ್ರಮ್ ಹೋಮ್) ಸಂಸ್ಕೃತಿ ಜಾರಿಯಾದ ಬಳಿಕ ಕಾರ್ಯನಿರ್ವಹಣೆ ಸ್ವರೂಪ ಬದಲಾಗಿದೆ. ಕೆಲ ಮಹಿಳೆಯರಿಗೆ ಕಚೇರಿ ಕೆಲಸ ಹಾಗೂ ಕುಟುಂಬ ನಿರ್ವಹಣೆ ಎರಡನ್ನೂ ಮಾಡಬೇಕಾದ ಪರಿಣಾಮ ಮಾನಸಿಕ ಒತ್ತಡ ಸೃಷ್ಟಿಯಾಗುತ್ತಿದೆ. ಪತಿ ಹಾಗೂ ಕುಟುಂಬದ ಸದಸ್ಯರು ಮನೆ ಕೆಲಸವನ್ನು ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವೇಳಾಪಟ್ಟಿ ಅಳವಡಿಕೆ ಅಗತ್ಯ
‘ಕಚೇರಿ ಕೆಲಸವನ್ನು ಮನೆಯಿಂದಲೇ ನಿರ್ವಹಿಸುವ ಸಂಸ್ಕೃತಿ ಪ್ರಾರಂಭವಾದ ಬಳಿಕ ಹಲವರ ಜೀವನವಿಧಾನದಲ್ಲಿ ವ್ಯತ್ಯಾಸಗಳಾಗಿವೆ. ಊಟ–ತಿಂಡಿ ಹಾಗೂ ನಿದ್ದೆ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಕಚೇರಿಯಲ್ಲಿ ನಿರ್ದಿಷ್ಟ ಅವಧಿ ಕೆಲಸ ನಿರ್ವಹಿಸಿದ ಬಳಿಕ ವಿಶ್ರಾಂತಿ ದೊರೆಯಲಿದೆ. ಆದರೆ, ಮನೆಯಲ್ಲಿ ಹೆಚ್ಚಿನ ಅವಧಿ ಕೆಲಸ ನಿರ್ವಹಿಸುವುದರಿಂದ ಬೊಜ್ಜು, ಅಧಿಕ ತೂಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ, ಮನೆಯಿಂದಲೇ ಕಾರ್ಯನಿರ್ವಹಿಸುವಾಗಲೂ ವೇಳಾಪಟ್ಟಿ ರೂಪಿಸಿಕೊಳ್ಳಬೇಕು. ಯೋಗ, ಧ್ಯಾನದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ಡಾ. ಅಭಿನವ್ ರೈನಾ ಸಲಹೆ ನೀಡಿದರು.

ಡಿಜಿಟಾಪ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಕನ್ಸಲ್ಟಿಂಗ್ ಸರ್ವೀಸಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅತುಲ್ ಮನೋಹರ್ ಸಿಂಕರ್, ‘ಮನೆಯಲ್ಲಿಯೇ ಕಚೇರಿ ಕೆಲಸ ನಿರ್ವಹಣೆಯಿಂದ ಉತ್ಪಾದನೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಲಿಲ್ಲ. ಆದರೆ, ಕೆಲಸದ ಒತ್ತಡ ಪ್ರಾರಂಭಿಕ ದಿನಗಳಲ್ಲಿ ಸ್ವಲ್ಪ ಜಾಸ್ತಿಯಾಗಿತ್ತು. ಕೆಲಸವನ್ನು ಪ್ರೀತಿಸಿದಲ್ಲಿ ಕಚೇರಿ ಮತ್ತು ಮನೆಯಲ್ಲಿ ಅಂತಹ ವ್ಯತ್ಯಾಸ ಇರುವುದಿಲ್ಲ. ವಿದೇಶಗಳಲ್ಲಿ ಇದು ಸಾಮಾನ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT