ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ಸೇನೆ’ಯ ಮಾದರಿ ಬಡಾವಣೆ, ಮಂಜಣ್ಣನ ಪರಿಸರ ಕಾಳಜಿಗೆ ಸ್ಥಳೀಯರು ಫಿದಾ

Last Updated 24 ಅಕ್ಟೋಬರ್ 2022, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಿಗ್ಗೆ ಎಲ್ಲರೂ ವಾಯುವಿಹಾರಕ್ಕೆ ತೆರಳಿದರೆ ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 60 ಅಡಿ ರಸ್ತೆಯಲ್ಲಿ ಸಂಚರಿಸುವವರಿಗೆ ಪೊರಕೆ, ಗುದ್ದಲಿ, ಸಲಿಕೆ ಹಿಡಿದುಕೊಂಡು ರಸ್ತೆಯ ಬದಿಯ ಪಾದಚಾರಿ ಮಾರ್ಗ ಸ್ವಚ್ಛಗೊಳಿಸುವ ಪೊರಕೆ ಮಂಜಣ್ಣ ಮತ್ತು ಪರಿಸರ ಸೇನೆ ತಂಡ ಕಣ್ಣಿಗೆ ಬೀಳುತ್ತದೆ. ನಿತ್ಯ ಈ ರಸ್ತೆ ಸ್ವಚ್ಛಗೊಳಿಸಿ ಪರಿಸರಸ್ನೇಹಿ ಬಡಾವಣೆ
ಯನ್ನಾಗಿ ನಿರ್ಮಿಸಲು ಈ ಪರಿಸರ ಪ್ರೇಮಿಗಳು ಪಣ ತೊಟ್ಟಿದ್ದಾರೆ.

ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಬಿ.ಎಸ್. ಮಂಜುನಾಥ 2019ರಲ್ಲಿ ನಿವೃತ್ತರಾಗಿದ್ದಾರೆ. ಸದ್ಯ ವಿಶ್ವೇಶ್ವರಯ್ಯ ಬಡಾವಣೆಯ 3ನೇ ಹಂತದಲ್ಲಿ ವಾಸವಾಗಿದ್ದಾರೆ.

‘4 ವರ್ಷದ ಹಿಂದೆ ಬಡಾವಣೆಯ ವಿದ್ಯಾ ನಿಕೇತನ ಪಬ್ಲಿಕ್ ಶಾಲೆಯಿಂದ ಸರ್.ಎಂ ವಿಶ್ವೇಶ್ವರಯ್ಯ 4ನೇ ಬ್ಲಾಕ್‌ನ ಬಡಾವಣೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ರಸ್ತೆಯ ಎರಡು ಬದಿಯ ಪಾದಚಾರಿ ಮಾರ್ಗ ಗಿಡ–ಗಂಟಿಗಳಿಂದ ಕೊಡಿತ್ತು. ರಸ್ತೆಯ ಬದಿಯಲ್ಲಿ ಅಲಲ್ಲಿ ಕಸದ ರಾಶಿಯನ್ನು ಹಾಕಲಾಗಿತ್ತು. ಇದನ್ನು ಸ್ವಚ್ಛಗೊಳಿಸಬೇಕೆಂಬ ಉದ್ದೇಶದಿಂದ ನಿತ್ಯ ಬೆಳಿಗ್ಗೆ 7ರಿಂದ 8ಗಂಟೆವರೆಗೂ ಸ್ವಚ್ಛಗೊಳಿಸುವ ಕಾಯಕ ಪ್ರಾರಂಭಿಸಿದ್ದೇನೆ’ ಎಂದು ಬಿ.ಎಸ್. ಮಂಜುನಾಥ್ ವಿವರಿಸಿದರು.

‘ನಮ್ಮ ಬಡಾವಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿರಲಿಲ್ಲ. ರಸ್ತೆಗಳ ಇಕ್ಕೆಲಗಳಲ್ಲಿ ಕಸದ ರಾಶಿಯೇ ಬಿದ್ದಿರುತ್ತಿತ್ತು.ಇಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರಂಭದಲ್ಲಿ ನಾನೊಬ್ಬನೇ ಈ ಕೆಲಸಕ್ಕೆ ಅಣಿಯಾದೆ. ನಂತರ 10–15 ಜನ ನನ್ನ ಜೊತೆ ಕೈ ಜೋಡಿಸಿದರು. ಈಗ ಎಲ್ಲರೂ ಬೆಳಿಗ್ಗೆ ಒಂದು ಗಂಟೆ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ ಮಂಜುನಾಥ್‌.

‘ಈಗಾಗಲೇ ಈ ರಸ್ತೆಯನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲಾಗಿದೆ. ಸ್ಥಳೀಯರು ಮತ್ತು ಬಿಬಿಎಂಪಿಯ ಪೌರ ಕಾರ್ಮಿಕರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಇದನ್ನು ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶ’ ಎಂದರು.

‘ಸ್ವಂತ ಖರ್ಚಿನಲ್ಲಿ ಬಡಾವಣೆಯ 7–8 ಕಡೆ ಪರಿಸರ ಜಾಗೃತಿ ಫಲಕಗಳನ್ನು ಅಳವಡಿಸಿದ್ದೇನೆ. ರಸ್ತೆ ಇಕ್ಕೆಲಗಳಲ್ಲಿ ಹಲವು ಹಣ್ಣಿನ ಗಿಡಗಳನ್ನು ನೆಟ್ಟಿದ್ದು, ಈಗ ಫಲ ಕೊಡುವಷ್ಟು ದೊಡ್ಡದಾಗಿ ಬೆಳೆದಿವೆ. ಯುವಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದೇ ನಮ್ಮ ತಂಡದಮುಖ್ಯ ಉದ್ದೇಶ. ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ನಮ್ಮ ಜೊತೆ ಕೈ ಜೋಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT