ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದರಸಾಗಳಿಗೆ ಮನ್ಸೂರ್‌ ಖಾನ್‌ ದೇಣಿಗೆ?

ರಾಜಕಾರಣಿಗಳ, ಅಧಿಕಾರಿಗಳ ಜೊತೆಗಿನ ವ್ಯವಹಾರದ ಕುರಿತು ಚುರುಕುಗೊಂಡ ತನಿಖೆ
Last Updated 23 ಜುಲೈ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪಕ್ಕೆ ಒಳಗಾಗಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ಮನ್ಸೂರ್‌ ಖಾನ್‌ ಮದರಸಾಗಳಿಗೆ ದೇಣಿಗೆ ಕೊಟ್ಟಿರುವುದಾಗಿ ಹೇಳಿದ್ದಾರೆ.

ಶುಕ್ರವಾರ ಬಂಧಿತರಾದ ಮನ್ಸೂರ್‌ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ವಿಚಾರಣೆ ನಡೆಸಿದ ಸಮಯದಲ್ಲಿ ಈ ಮಾಹಿತಿ ನೀಡಿದ್ದಾರೆ. ಯಾವ್ಯಾವ ಮದರಸಾಗಳಿಗೆ ಎಷ್ಟೆಷ್ಟು ಹಣ ನೀಡಿದ್ದಾರೆ ಎಂಬ ತನಿಖೆ ನಡೆಯುತ್ತಿದೆ.

‘ಮನ್ಸೂರ್ ಖಾನ್ ಮದರಸಾಗಳಿಗೆ ಅಪಾರ ಹಣ ನೀಡಿರುವುದಾಗಿ ತಿಳಿಸಿದ್ದಾರೆ. ಅವರ ಹೇಳಿಕೆಯ ಸತ್ಯಾಸತ್ಯತೆ ಕುರಿತು ಪರಿಶೀಲಿಸಲಾಗುತ್ತಿದೆ. ಕಂಪನಿ ಹಣಕಾಸು ವ್ಯವಹಾರ ಕುರಿತು ಸಮಗ್ರವಾಗಿ ತನಿಖೆ ನಡೆಯಬೇಕಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗಿನ ಜಾವ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಐಎಂಎ ಕಂಪನಿ ಮಾಲೀಕರನ್ನು ದೆಹಲಿಯಲ್ಲೇ ವಿಚಾರಣೆಗೆ ಒಳಪಡಿಸಿದ್ದ ಇ.ಡಿ ಅಧಿಕಾರಿಗಳು, ಶನಿವಾರ ಬೆಂಗಳೂರಿಗೆ ಕರೆತಂದು, ವಿಚಾರಣೆಗೆ ಒಳಪಡಿಸಲು ತಮ್ಮ ವಶಕ್ಕೆ ಪಡೆದಿದ್ದರು. ಆದರೆ, ಒಂದು ದಿನದ ಬಳಿಕ ಅನಾರೋಗ್ಯದ ಕಾರಣ ಹೇಳಿ ಎರಡು ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಅವರನ್ನು ಸರಿಯಾಗಿ ಪ್ರಶ್ನಿಸಲಾಗಿಲ್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಶಾಸಕ ಜಮೀರ್‌ ಅಹಮದ್‌ ಖಾನ್‌, ಶಾಸಕ ರೋಷನ್‌ಬೇಗ್‌ ಅವರೂ ಒಳಗೊಂಡಂತೆ ಕೆಲವು ರಾಜಕಾರಣಿಗಳು, ಅಧಿಕಾರಿಗಳ ಜತೆ ನಡೆಸಿದ್ದಾರೆ ಎನ್ನಲಾದ ‘ವ್ಯವಹಾರ’ ಕುರಿತೂ ತನಿಖೆ ನಡೆಯಲಿದೆ. ಆದರೆ, ಮೊದಲಿಗೆ ಈ ವಂಚಕ ಕಂಪನಿ ಹೊಂದಿರುವ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಆನಂತರ ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಲಕ್ಷಾಂತರ ರೂಪಾಯಿ ಹೂಡಿಕೆ‌

ಮನ್ಸೂರ್‌ ಖಾನ್‌ ಕಂ‍ಪನಿಯಲ್ಲಿ ಕೆಲವರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆಂಬ ಸಂಗತಿ ಇ.ಡಿ ತನಿಖೆಯಿಂದ ಗೊತ್ತಾಗಿದೆ.

ಸುಮಾರು 2000 ಷೇರುದಾರರು ಲಕ್ಷಾಂತರ ರೂ‍ಪಾಯಿ ಹೂಡಿದ್ದಾರೆ. ಇವರಲ್ಲಿ ಅನೇಕರು ಕೋಟಿಗಟ್ಟಲೆ ತೊಡಗಿಸಿದ್ದಾರೆ. ಈ ಷೇರುದಾರರ ಹಿನ್ನೆಲೆಯನ್ನು ಸಂಗ್ರಹಿಸಲಾಗುತ್ತಿದೆ.‘ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ’ಯಡಿ ಈ ಹೂಡಿಕೆದಾರರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

**

ಐಎಂಎ ಮಾಲೀಕ ಇ.ಡಿ ಕಸ್ಟಡಿ ಅವಧಿ ಮತ್ತೆ ಮೂರು ದಿನ ವಿಸ್ತರಣೆ

ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮದ್‌ ಮನ್ಸೂರ್ ಖಾನ್‌ ಅವರನ್ನು ಇದೇ 26ರವರೆಗೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

ಈಗಾಗಲೇ ಮೂರು ದಿನಗಳಿಂದ ಇ.ಡಿ ಕಸ್ಟಡಿಯಲ್ಲಿದ್ದ ಮನ್ಸೂರ್‌ ಖಾನ್ ಅವರನ್ನು ಇ.ಡಿ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ನಗರದ ಸೆಷನ್ಸ್ ಕೋರ್ಟ್‌ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ಹಾಜರುಪಡಿಸಿದರು.

ಇ.ಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌, ‘ಆರೋಪಿಯ ಅನಾರೋಗ್ಯ ಕಾರಣದಿಂದ ಸಮಗ್ರ ತನಿಖೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಇದೇ 30ರವರೆಗೆ ಕಸ್ಟಡಿ ವಿಸ್ತರಣೆ ಮಾಡಬೇಕು’ ಎಂದು ಕೋರಿದರು.

ಇದಕ್ಕೆ ಎಸ್ಐಟಿ ಪರ ವಕೀಲ ಎಂ.ನಾರಾಯಣ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿ, ‘ಖಾನ್‌ ಅವರನ್ನು ಕಾಲ ಎಸ್‌ಐಟಿ ವಶಕ್ಕೆ ನೀಡದೇ ಹೋದರೆ ಉಳಿದ ಆರೋಪಿಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ’ ಎಂದು ಪುನರುಚ್ಚರಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೂರು ದಿನಗಳ ಕಸ್ಟಡಿ ವಿಸ್ತರಿಸಿ ಆದೇಶಿಸಿದರು. ಖಾನ್‌ ಅವರನ್ನು ಇದೇ 19ರಂದು ಎಸ್‌ಐಟಿ ಅಧಿಕಾರಿಗಳು ದುಬೈನಿಂದ ನವದೆಹಲಿಗೆ ಕರೆತರುತ್ತಿದ್ದಂತೇ ಇ.ಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದರು.

ಹೈಕೋರ್ಟ್‌ ತಾಕೀತು: ಐಎಂಎ ಬಹುಕೋಟಿ ಹಗರಣದಲ್ಲಿ ಸಂಸ್ಥೆಗೆ ಸೇರಿದ ಸ್ಥಿರ ಮತ್ತು ಚರಾಸ್ತಿ ಜಪ್ತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದೇ 24ರ (ಬುಧವಾರ) ಮಧ್ಯಾಹ್ನದ ವೇಳೆಗೆ ಸಕ್ಷಮ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

ಈ ಕುರಿತಂತೆ ಸಲ್ಲಿಸಲಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ಆಲಿಸಿದ ನ್ಯಾಯಪೀಠ, ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ)- 2004ರ ಪ್ರಕಾರ ಬುಧವಾರ (ಇದೇ 24) ಮಧ್ಯಾಹ್ನದೊಳಗೆ ಈ ಕುರಿತಂತೆ ಸರ್ಕಾರದ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಹಾಜರುಪಡಿಸಬೇಕು’ ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT