ಗೌರಿ–‍ಗಣೇಶ ಹಬ್ಬ: ಬೆಲೆ ಏರಿಕೆ ನಡುವೆಯೂ ಖರೀದಿ ಬಲು ಜೋರು

7
ತಗ್ಗಿದ ತರಕಾರಿ, ಏರಿದ ಹೂ- ಹಣ್ಣು

ಗೌರಿ–‍ಗಣೇಶ ಹಬ್ಬ: ಬೆಲೆ ಏರಿಕೆ ನಡುವೆಯೂ ಖರೀದಿ ಬಲು ಜೋರು

Published:
Updated:
ನಗರದ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಮಂಗಳವಾರ ಗೌರಿ ಹಬ್ಬದ ಅಂಗವಾಗಿ ಹೂ ಹಣ್ಣು ಖರೀದಿ ಮಾಡುವ ಮಹಿಳೆಯರು –ಪ್ರಜಾವಾಣಿ ಚಿತ್ರ

ಬೆಂಗಳೂರು: ಗೌರಿ–ಗಣೇಶ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮುಗಿಲುಮುಟ್ಟಿದೆ. ಆದರೆ, ಈ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿಯೂ ತಟ್ಟಿದೆ. ಹಬ್ಬದ ಮುನ್ನಾ ದಿನವೇ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಮಂಗಳವಾರ ಜನ ಹೂ- ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದರು. ಮಾರುಕಟ್ಟೆ ಪೂರ್ತಿ ಗಿಚಿಗೀಡುತ್ತಿತ್ತು.

ಹೋದ ವಾರಕ್ಕೆ ಹೋಲಿಸಿದರೆ ಈ ವಾರ ಹೂವು ಹಣ್ಣುಗಳ ಬೆಲೆ ಹಬ್ಬಕ್ಕೆ ಬೇಕಾದ ಬಾಳೆಕಂಬ, ತಾವರೆ, ಡೇರೆ ಹೂವುಗಳನ್ನು ಕೊಂಡುಕೊಳ್ಳಲು ಹೆಚ್ಚಿನ ಬೆಲೆ ತೆರಬೇಕಾಗಿದೆ. ಏಲಕ್ಕಿ ಬಾಳೆಯ ಬೆಲೆ ₹80 ಇದ್ದದ್ದು ₹100 ದಾಟಿದೆ. ಹಾಪ್‌ಕಾಮ್ಸ್‌ನಲ್ಲಿ ₹82 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಉಡಿ ತುಂಬುವ, ಬಾಗಿಣ ಸಾಮಗ್ರಿಗೆ ದುಪ್ಪಟ್ಟು ಬೆಲೆ: ಪ್ರತಿ ಸಾರಿ ₹100– ₹150ಕ್ಕೆ ಲಭ್ಯವಾಗುತ್ತಿದ್ದ ಉಡಿ ತುಂಬುವ ಸಾಮಾನುಗಳ ಸೆಟ್‌ (ಅರಿಶಿಣ, ಕುಂಕುಮ, ಬಳೆ, ಕಾಡಿಗೆ ಕಪ್ಪು, ಅಡಿಕೆ) ಅನ್ನು ₹200– ₹250ಕ್ಕೆ ಖರೀದಿಸಿದ್ದೇವೆ. ಬೆಲೆ ಏರಿಕೆಯಾಗಿದ್ದರೂ ಖರೀದಿಸಲೆಬೇಕು. ಉಡಿ ತುಂಬಿ, ಬಾಗಿಣ ಕೊಡಲೆಬೇಕಲ್ಲವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಗಳಮ್ಮ. 

ಹತ್ತು ರೂಪಾಯಿಗೆ 4–5 ಗುಲಾಬಿಗಳು ಸಿಗುತ್ತಿದ್ದರೆ, ಕಮಲ ₹30 (ಜೋಡಿಗೆ) ಕ್ಕೆ ಮಾರಾಟವಾಗುತ್ತಿದ್ದವು. ಕನಕಾಂಬರ, ಚಂಡು, ಮಲ್ಲಿಗೆ, ಸೇವಂತಿ (ಹಾರಕ್ಕೆ ₹100), ದುಂಡು ಮಲ್ಲಿಗೆ (ಹಾರಕ್ಕೆ ₹100– ₹150), ಕಾಕಡ, ಡೇರೆ ಹೂಗಳ ಬೆಲೆಯೂ ಏರಿಕೆಯಾಗಿದೆ. ₹60 ಕ್ಕೆ 100 ವೀಳ್ಯದೆಲೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ತೆಂಗಿನಕಾಯಿ ದರ ಸ್ಥಿರವಾಗಿತ್ತು. 

ದುಬಾರಿಯಾದ ಬಾಳೆ: ‌ಪಚ್ಚಬಾಳೆಗಿಂತಲೂ ಏಲಕ್ಕಿ ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಕೆ.ಜಿ ಗೆ ₹50–60ಕ್ಕೆ ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆಹಣ್ಣಿನ ದರ ₹80–100 ದಾಟಿದೆ. ದರ ಇನ್ನೂ ಹೆಚ್ಚಾಗುತ್ತದೆ ವಿನಃ ಕಡಿಮೆಯಾಗುವ ಮಾತೇ ಇಲ್ಲ’ ಎಂದು ಹೇಳುತ್ತಾರೆ ಕೆ.ಆರ್‌ ಮಾರುಕಟ್ಟೆಯ ಬಾಳೆಹಣ್ಣಿನ ವ್ಯಾಪಾರಿ ಮಹಾದೇವಮ್ಮ.  

ಸ್ಥಿರತೆ ಕಾಯ್ದುಕೊಂಡ ತರಕಾರಿಗಳು: ಹಬ್ಬದ ನಿಮಿತ್ತ ತರಕಾರಿ ಬೆಲೆಗಳಲ್ಲೇನೂ ಭಾರಿ ವ್ಯತ್ಯಾಸಗಳಾಗಿಲ್ಲ. ಎಂದಿನಂತೆಯೇ ವಹಿವಾಟು ನಡೆಯುತ್ತಿತ್ತು. ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ ದರಗಳು ಕಡಿಮೆ ಇದ್ದವು. ಆದರೆ, ಬೀನ್ಸ್‌ (ಕೆ.ಜಿ.ಗೆ ₹100), ಬೂದುಗುಂಬಳ ಕಾಯಿ ದರಗಳಲ್ಲಿ ಏರಿಕೆಯಾಗಿರುವುದು ಕಂಡು ಬಂದಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !