ಮಂಗಳವಾರ, ಮೇ 18, 2021
22 °C

ಕನ್ನಡಿಗರ ನಗರಕ್ಕೆ ಮಾರ್ವಾಡಿ ಮೇಯರ್‌ ಬೇಡ: ವಾಟಾಳ್‌ ನಾಗರಾಜ್‌ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೌತಮ್‌ಕುಮಾರ್‌ ಮೇಯರ್‌ ಆಗುವುದು ಖಚಿತವಾಗುತ್ತಿದ್ದಂತೆ, ಪಾಲಿಕೆಯ ಕೌನ್ಸಿಲ್‌ ಸಭಾಂಗಣದ ಆವರಣಕ್ಕೆ ಬೆಂಬಲಿಗರೊಂದಿಗೆ ಬಂದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. 

‘ಬೆಂಗಳೂರು ನಗರಕ್ಕೆ ಮಾರ್ವಾಡಿ ಒಬ್ಬರನ್ನು ಮೇಯರ್‌ ಆಗಿ ಬಿಜೆಪಿ ಆಯ್ಕೆ ಮಾಡಿದೆ. ಬೆಂಗಳೂರು ಕೆಂಪೇಗೌಡರು ಸ್ಥಾಪಿಸಿರುವ ಮಹಾನಗರ. ಕನ್ನಡಿಗರ ರಾಜಧಾನಿ. ಇಲ್ಲಿ ಅಚ್ಚ ಕನ್ನಡಿಗರು ಅಧಿಕಾರ ಚಲಾಯಿಸಬೇಕು. ಆದರೆ, ಇದೀಗ ಈ ನಗರ ಮಾರ್ಮಾಡಿಗರು, ಪರ ಭಾಷಿಕರ ಕೈಗೆ ಹೋಗುತ್ತಿದೆ’ ಎಂದು ವಾಟಾಳ್‌ ಅಸಮಾಧಾನ ವ್ಯಕ್ತಪಡಿಸಿದರು. 

‘ನಾನು ಎಂದಿಗೂ ಬಿಬಿಎಂಪಿ ಬಳಿ ಬಂದವನಲ್ಲ. ಆದರೆ, ಇಂದು ಮಾರ್ವಾಡಿಯೊಬ್ಬರು ಮೇಯರ್‌ ಆಗುತ್ತಿರುವುದಕ್ಕೆ ಇಲ್ಲಿ ಬಂದು ಪ್ರತಿಭಟಿಸಬೇಕಾಗಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಕನ್ನಡ ಒಕ್ಕೂಟ ಗೌತಮ್‌ಕುಮಾರ್‌ ಆಯ್ಕೆಯನ್ನು ತೀವ್ರವಾಗಿ ವಿರೋಧಿಸುತ್ತದೆ’ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವರು ಘೋಷಣೆ ಕೂಗಿದರು. ಬೆಂಬಲಿಗರು ಇದಕ್ಕೆ ಧ್ವನಿಗೂಡಿಸಿದರು. 

ಮಧ್ಯಪ್ರವೇಶಿಸಿದ ಪೊಲೀಸರು, ವಾಟಾಳ್‌ ನಾಗರಾಜ್‌ ಮತ್ತು ಬೆಂಬಲಿಗರನ್ನು ಕರೆದೊಯ್ದರು.

‘ಬೆಂಗಳೂರಿಗನಲ್ಲ ಎನ್ನುವುದು ಸರಿಯಲ್ಲ’

‘ಚುನಾಯಿತ ಪ್ರತಿನಿಧಿಯಾಗಿರುವ ಗೌತಮ್‌ಕುಮಾರ್‌ಗೆ ಮೇಯರ್‌ ಆಗುವ ಹಕ್ಕು ಸಂವಿಧಾನಬದ್ಧವಾಗಿ ಸಿಕ್ಕಿದೆ. ಪಾಲಿಕೆಯ ಬಿಜೆಪಿ ಸದಸ್ಯರು, ಶಾಸಕ–ಸಂಸದರು ಅವರನ್ನು ಬೆಂಬಲಿಸಿದ್ದಾರೆ. ಈಗ, ಅವರು ಬೇರೆ ಜಾತಿ ಎನ್ನುವುದು, ಬೆಂಗಳೂರಿಗರಲ್ಲ ಎನ್ನುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು. 

‘51 ಎಂದರೆ ಶೇ 100, 49 ಎಂದರೆ ಶೇ 0 ಎನ್ನುವುದು ಪ್ರಜಾಪ್ರಭುತ್ವದ ಮೂಲತತ್ವ. ಮೇಯರ್‌ಗೆ ಬಹುಮತವಿದೆ. ಗೌತಮ್‌ ಪಾಲಿಕೆ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಅವರು ಮಾರ್ವಾಡಿ, ಇವರು ಒಕ್ಕಲಿಗರು, ಲಿಂಗಾಯತರು ಎಂದು ಟ್ಯಾಗ್‌ ಮಾಡುವುದು ನಿಲ್ಲಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಬಿಜೆಪಿ ವಿಜಯೋತ್ಸವ 

ಗೌತಮ್‌ಕುಮಾರ್‌ ಜೈನ್‌ ಮೇಯರ್‌ ಎಂದು ಘೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಕ್ಷದ ಧ್ವಜವನ್ನು ಹಿಡಿದು ಸಂಭ್ರಮಿಸಿದರು. 

‘ವಂದೇ ಮಾತರಂ’, ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೌತಮ್‌ ಕುಮಾರ್‌ ಪರ ಘೋಷಣೆ ಕೂಗಿದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು